ಬೆಂಗಳೂರು: ಕರುನಾಡ ಜನತೆ ಇಂದು ಕರ್ನಾಟಕ ರಾಜ್ಯೋತ್ಸವ(Karnataka Rajyotsava) ಆಚರಣೆಯ ಸಂಭ್ರಮದಲ್ಲಿದೆ. ಇದೇ ವೇಳೆ ಕನ್ನಡಿಗರ ನೆಚ್ಚಿನ ತಂಡದವಾದ ಆರ್‌ಸಿಬಿ(RCB) ಕೂಡ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿದೆ. ತನ್ನ ಟ್ವೀಟರ್ ಎಕ್ಸ್ ಖಾತೆಯಲ್ಲಿ ʼನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ’… ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜೋತ್ಸವದ ಹಾರ್ದಿಕ ಶುಭಾಶಯಗಳು! 💛❤️ ಎಂದು ಬರೆದುಕೊಂಡಿದೆ. ಇನ್ನೊಂದು ಟ್ವೀಟ್‌ನಲ್ಲಿ ಆರ್‌ಸಿಬಿ ಈಗ ಕನ್ನಡದಲ್ಲಿ…ನಾವು ಕನ್ನಡಿಗರು, ನಮ್ಮ ಹೃದಯ ಬಹಳ ವಿಶಾಲ ಎಂದು ಬರೆದುಕೊಂಡಿದೆ.
ಆರ್‌ಸಿಬಿ ಕನ್ನಡವನ್ನು ಕಡೆಗಣಿಸುತ್ತಿದೆ ಎಂದು ಅಭಿಮಾನಿಗಳು ಹಲವು ಬಾರಿ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಕರ್ನಾಟಕ ರಾಜೋತ್ಸವದ ದಿನಂದೇ ಕನ್ನಡಕ್ಕಾಗಿ ಹೊಸ ಸಾಮಾಜಿಕ ಜಾಲತಾಣ ಖಾತೆಯನ್ನು ತೆರೆಯುವ ಮೂಲಕ ಕನ್ನಡಿಗರ ಮನ ಗೆದ್ದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025ರ ಸೀಸನ್ಗೆ ಮೂವರು ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು ಮೆಗಾ ಹರಾಜಿನಲ್ಲಿ ಕನ್ನಡಿಗ ಆಟಗಾರರನ್ನುಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಕನ್ನಡಿನ ರಾಹುಲ್ ಕೂಡ ಮರಳಿ ಆರ್‌ಸಿಬಿಗೆ ಬರಲಿದ್ದಾರೆ ಎನ್ನಲಾಗಿದ್ದು. ಈಗಾಗಲೇ ಅವರು ಈ ಹಿಂದೆ ಆರ್‌ಸಿಬಿ ಪರ ಆಡಿದ ವಿಡಿಯೊವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ IPL 2025 Retention: ರಿಟೇನ್‌ನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು
ಇನ್ನೊಂದೆಡೆ ಕರ್ನಾಟಕದಲ್ಲಿ ಹಲವು ಪ್ರತಿಭಾನ್ವಿತ ಆಟಗಾರರಿದ್ದರೂ ಕೂಡ ಹರಾಜಿನ ವೇಳೆಯಲ್ಲಿ ಆರ್‌ಸಿಬಿ ಇವರನ್ನು ಖರೀದಿಸುವ ಪ್ರಯತ್ನವನ್ನೂ ನಡೆಸುವುದಿಲ್ಲ. ಒಂದೆರಡು ಆಟಗಾರರನ್ನು ಖರೀದಿಸಿದರೂ ಕೂಡ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಲಾಗುತ್ತದೆ. ಈ ಬಾರಿ ಹರಾಜಿನಲ್ಲಿ ಸ್ಥಳೀಯ ಆಟಗಾರರಿಗೆ ಪ್ರಾಧಾನ್ಯತೆ ನೀಡುವಂತೆ ಫ್ರಾಂಚೈಸಿಯ ಮೇಲೆ ಸಾಕಷ್ಟು ಸರ್ಕಾರದ ಒತ್ತಡವಿದೆ ಎಂದು ತಿಳಿದುಬಂದಿದೆ.
ಐಪಿಎಲ್ ಆರಂಭಿಕ ಹಂತದಲ್ಲಿ ಕನ್ನಡಿಗ ಆಟಗಾರರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಹಾಗೂ ಕೆ.ಪಿ. ಅಪ್ಪಣ್ಣ, ಕೆ.ಎಲ್ ರಾಹುಲ್, ಸಿ.ಎಂ. ಗೌತಮ್, ಕುರುಣ್ ನಾಯರ್ ಹಾಗೂ ಶ್ರೀನಾಥ್ ಅರವಿಂದ್ ಮೊದಲಾದ ಕನ್ನಡ ನೆಲದ ಆಟಗಾರರು ಆರ್‌ಸಿಬಿ ತಂಡದಲ್ಲಿ ಆಡುತ್ತಿರುವಾಗ ಅದು ಬೆಂಗಳೂರಿನ ತಂಡವೆಂಬ ನಂಬಿಕೆ ಮೂಡಿಸಿತ್ತು. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಲದ ಹೀರೋಗಳ ಆಟ ನೋಡಲು ಆಗಮಿಸುತ್ತಿದ್ದರು. ಆದರೆ ಈಗ ಮನೆಯಂಗಣದಲ್ಲಿ ಮನೆಯ ಆಟಗಾರರು ಇಲ್ಲದ ತಂಡವಾಗಿ ಆರ್‌ಸಿಬಿ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದೊಮ್ಮೆ ಆರ್‌ಸಿಬಿ ಈ ಬಾರಿಯ ಮೆಗಾ ಹರಾಜಿನಲ್ಲಿ ಕರ್ನಾಟಕದ ಆಟಗಾರರತ್ತ ನೋಡಿದರೆ ಸರ್ಕಾರದ ಒತ್ತಡ ಇದ್ದಿರುವುದು ಖಚಿತ ಎನ್ನಬಹುದು.