ಮುಂಬೈ: ಗುರುವಾರ ನಡೆದಿದ್ದ ಐಪಿಎಲ್ ಆಟಗಾರರ ರಿಟೇನ್(ipl 2025 retention) ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್(mumbai indians) ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ಅವರನ್ನು 16.30 ಕೋಟಿ ರೂ. ನೀಡಿ ನಾಲ್ಕನೇ ಆಯ್ಕೆಯಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಈ ಬಗ್ಗೆ ರೋಹಿತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ರೋಹಿತ್ ಫ್ರಾಂಚೈಸಿ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ.
ಮುಂಬೈ ತಂಡ ಮೊದಲ ಆಯ್ಕೆಯಾಗಿ ಜಸ್ಪ್ರೀತ್ ಬುಮ್ರಾ(18 ಕೋಟಿ ರೂ.) ದ್ವಿತೀಯ ಆಯ್ಕೆಯಾಗಿ ಹಾರ್ದಿಕ್ ಪಾಂಡ್ಯ(16.35 ಕೋಟಿ ರೂ.) ಮೂರನೇ ಆಯ್ಕೆಯಾಗಿ ಸೂರ್ಯ ಕುಮಾರ್ ಯಾದವ್(16.35 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಂಡಿದೆ. 5ನೇ ಆಟಗಾರನಾಗಿ ತಿಲಕ್ ವರ್ಮಾ(8 ಕೋಟಿ ರೂ.)ರನ್ನು ಉಳಿಸಿಕೊಂಡಿದೆ.
ತಂಡದ ಆಯ್ಕೆ ವಿಚಾರವಾಗಿ ಮಾತನಾಡಿದ ರೋಹಿತ್, ʼನಾನು ಟಿ20 ಸ್ವರೂಪದಿಂದ ನಿವೃತ್ತಿ ಹೊಂದಿರುವುದರಿಂದ, ಇದು ನನಗೆ ಸರಿಯಾದ ರಿಟೆನ್ಶನ್ ಜಾಗವಾಗಿದೆ. ಉನ್ನತ ಮಟ್ಟದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಮೊದಲ ಆದ್ಯತೆ ಸಿಗಬೇಕು. ಆಟಗಾರರು ಹರಾಜಿಗೆ ಬಂದ ನಂತರ ಮತ್ತೆ ಅವರನ್ನು ತಂಡಕ್ಕೆ ಸೇರಿಸುವುದು ಕಷ್ಟʼ ಎಂದು ರೋಹಿತ್ ಹೇಳಿದರು.
ʼಮುಂಬೈ ತಂಡದಲ್ಲಿ, ನಾವು ಯಾವಾಗಲೂ ಪ್ರಮುಖ ಆಟಗಾರರ ಗುಂಪನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ಇಲ್ಲಿ ಆಟಗಾರ ಯಾವ ಸ್ಥಾನದಲ್ಲಿ ಆಯ್ಕೆಯಾಗಿದ್ದಾನೆ ಎನ್ನುವ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ತಂಡದ ಪ್ರಗತಿಯೊಂದೆ ಮುಖ್ಯವಾಗಿದೆ. ನಾನು ಮುಂಬೈ ಇಂಡಿಯನ್ಸ್ಗಾಗಿ ತುಂಬಾ ಕ್ರಿಕೆಟ್ ಆಡಿದ್ದೇನೆ. ಈ ತಂಡದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆʼ ಎಂದು ಹೇಳಿದರು.
ಮುಂಬೈ ಇಂಡಿಯನ್ಸ್ ಒಟ್ಟು 5 ಆಟಗಾರರನ್ನು ರಿಟೇನ್ ಮಾಡಿಕೊಂಡಿದೆ. ಇನ್ನು ಫ್ರಾಂಚೈಸಿ ಬಳಿ 45 ಕೋಟಿ ರೂ. ಉಳಿದಿದೆ. ಇಶಾನ್ ಕಿಶನ್, ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಹಾರ್ವಿಕ್ ದೇಸಾಯಿ, ವಿಷ್ಣು ವಿನೋದ್, ನಮನ್ ಧೀರ್, ಶಿವಾಲಿಕ್ ಶರ್ಮಾ, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ನುವಾನ್ ತುಷಾರ, ಲ್ಯೂಕ್ ವುಡ್, ಜೇಸನ್ ಬೆಹ್ರೆನ್ಡಾರ್ಫ್, ದಿಲ್ಶನ್ ಮಧುಶಂಕ, ಮೊಹಮ್ಮದ್ ನಬಿ ಅವರನ್ನು ಕೈಬಿಟ್ಟಿದೆ.