ಲಾಹೋರ್: ಭಾರತ (India) ಹಾಗೂ ಪಾಕಿಸ್ತಾನ (Pakistan)ನಡುವಿನ ರಾಜತಾಂತ್ರಿಕ ವಿಚಾರವಾಗಿ ಮುಂದಿನ ವರ್ಷ ಪಾಕ್ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025) ಒಂದಲ್ಲ ಒಂದು ವಿಚಾರದಲ್ಲಿ ಸದ್ದು ಮಾಡುತ್ತಲೇ ಇದೆ. ಭಾರತ ತಂಡ ಭದ್ರತೆಯ ಕಾರಣ ಪಾಕ್‌ಗೆ ತರಳುವ ಕುರಿತು ಇನ್ನೂ ಖಚಿತತೆ ಇಲ್ಲ. ಆದರೂ ಟೂರ್ನಿಯನ್ನು ತನ್ನ ನೆಲದಲ್ಲೇ ನಡೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕ್ಷಿಪ್ರವಾಗಿ ವೀಸಾಗಳನ್ನು ನೀಡುವ ನೀತಿಯೊಂದನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ವಿಚಾರವನ್ನು ಪಿಸಿಬಿಯ(PCB) ಅಧ್ಯಕ್ಷ ಹಾಗೂ ದೇಶದ ಆಂತರಿಕ ವ್ಯವಹಾರಗಳ ಸಚಿವ ಮುಹ್ಸಿನ್ ನಖ್ವಿ ತಿಳಿಸಿದ್ದಾರೆ.
ಅಮೆರಿಕದಿಂದ ಬಂದಿರುವ ಸಿಖ್ ಯಾತ್ರಿಗಳ ಗುಂಪೊಂದರ ಜತೆಗೆ ಮಾತನಾಡಿದ ವೇಳೆ ಅವರು ಈ ಭರವಸೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುವ ವಿಷಯದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ಪಿಸಿಬಿ ನಿರೀಕ್ಷಿಸುತ್ತಿದೆ ಎಂದು ನಖ್ವಿ ಹೇಳಿದರು.
‘ನಾವು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಟಿಕೆಟ್ ಕೋಟಗಳನ್ನು ಒದಗಿಸಲಿದ್ದೇವೆ ಮತ್ತು ಅವರಿಗೆ ಕ್ಷಿಪ್ರವಾಗಿ ವೀಸಾಗಳನ್ನು ನೀಡುವ ನೀತಿಯೊಂದನ್ನು ಜಾರಿಗೆ ತರಲಿದ್ದೇವೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ, ಲಾಹೋರ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯವನ್ನು ವೀಕ್ಷಿಸುವುದನ್ನು ನೋಡಲು ಪಿಸಿಬಿ ಬಯಸುತ್ತದೆʼ ಎಂದು ಅವರು ಹೇಳಿದರು.
ಸದ್ಯದ ವೇಳಾಪಟ್ಟಿ ಪ್ರಕಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲು ನಿಗದಿಯಾಗಿದೆ. ಆದರೆ, ಐಸಿಸಿಯು ಈವರೆಗೆ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಲು ಭಾರತ ಸರಕಾರವು ತನ್ನ ತಂಡಕ್ಕೆ ಅನುಮತಿ ನೀಡುವುದನ್ನು ಐಸಿಸಿಯು ಕಾಯುತ್ತಿದೆ.
ಇದನ್ನೂ ಓದಿ IND vs NZ: ಮೂರನೇ ಟೆಸ್ಟ್‌ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
ಬಿಸಿಸಿಐಗೆ ವಿಶೇಷ ಆಫರ್ ನೀಡಿದ್ದ ಪಿಸಿಬಿ
ಕೆಲ ವಾರಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ(BCCI)ಗೆ ಆಫರ್ ಒಂದನ್ನು ನೀಡಿತ್ತು. ಭದ್ರತೆಯ ಕಾರಣದಿಂದ ಪಾಕ್‌ಗೆ ಬರಲು ಹಿಂದೇಟು ಹಾಕುತ್ತಿರುವ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕ್‌ನಲ್ಲಿ ಉಳಿಯಲು ಇಚ್ಛಿಸದಿದ್ದರೆ, ಪಂದ್ಯದ ದಿನ ನವದೆಹಲಿ ಅಥವಾ ಚಂಡೀಗಢದಿಂದ ಲಾಹೋರ್‌ಗೆ ಬಂದು, ಪಂದ್ಯ ಮುಗಿದ ಬಳಿಕ ತವರಿಗೆ ವಾಪಾಸಾಗಲಿ ಎನ್ನುವ ಪ್ರಸ್ತಾಪವನ್ನು ಪಾಕ್ ಕ್ರಿಕೆಟ್ ಮಂಡಳಿ ಬಿಸಿಸಿಐ ಮುಂದಿಟ್ಟಿರುವುದಾಗಿ ಕ್ರಿಕ್ ಬಜ್ ವರದಿ ಮಾಡಿತ್ತು.
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.