Saturday, 2nd November 2024

Hong Kong Sixes: ಪಾಕ್‌, ಯುಎಇ ವಿರುದ್ಧ ಸೋತ ಭಾರತ

ಹಾಂಕಾಂಗ್‌: ಇಲ್ಲಿ ನಡೆಯುತ್ತಿರುವ ಹಾಂಕಾಂಗ್‌ ಅಂತಾರಾಷ್ಟ್ರೀಯ ಸಿಕ್ಸಸ್‌ ಕ್ರಿಕೆಟ್‌ ಟೂರ್ನಿಯಲ್ಲಿ(Hong Kong Sixes) ಭಾರತ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ(IND vs PAK Hong Kong Sixes) ವಿರುದ್ಧ ಸೋಲನುಭವಿಸಿದೆ. ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 6 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 119 ರನ್‌ ಸಿಡಿಸಿತು. ನಾಯಕ ರಾಬಿನ್‌ ಉತ್ತಪ್ಪ 8 ಎಸೆತದಲ್ಲಿ 31 ರನ್‌, ಭರತ್‌ ಚಿಪ್ಲಿ 16 ಎಸೆತದಲ್ಲಿ 53 ರನ್‌ ಬಾರಿಸಿದ ಪರಿಣಾಮ ತಂಡ 2 ವಿಕೆಟ್‌ಗೆ 119 ರನ್‌ ಬಾರಿಸಿತು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ವಿಕೆಟ್‌ ನಷ್ಟವಿಲ್ಲದೆ 5 ಓವರಲ್ಲೇ 121 ರನ್‌ ಗಳಿಸಿ ಗುರಿ ತಲುಪಿತು. ಪಾಕ್‌ ಪರ ಅಸಿಫ್‌ ಅಲಿ 14 ಎಸೆತದಲ್ಲಿ 55 ರನ್‌ ಗಳಿಸಿ ರಿಟೈರ್ಡ್‌ ಹರ್ಟ್‌ ಆಗಿ ಹೊರನಡೆದರು. ಮುಹಮ್ಮದ್‌ ಅಖ್ಲಾಕ್‌ 12 ಎಸೆತದಲ್ಲಿ 40 ರನ್‌ ಸಿಡಿಸಿದರೆ, ನಾಯಕ ಫಹೀಂ ಅಶ್ರಫ್‌ 5 ಎಸೆತದಲ್ಲಿ 22 ರನ್‌ ಬಾರಿಸಿದರು. ಪಾಕ್‌ ಇನ್ನಿಂಗ್ಸಲ್ಲಿ 14 ಸಿಕ್ಸರ್‌ಗಳಿದ್ದವು. ಗೆಲುವು ಸಾಧಿಸಿದ ಪಾಕಿಸ್ತಾನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಯುಎಇ ಮತ್ತು ಇಂಗ್ಲೆಂಡ್‌ ವಿರುದ್ಧವೂ ಸೋಲು

ಶನಿವಾರ ನಡೆದ ಪಂದ್ಯದಲ್ಲಿ ಭಾರತ ಯುಎಇ ಮತ್ತು ಇಂಗ್ಲೆಂಡ್‌ ವಿರುದ್ಧವೂ ಸೋಲು ಕಂಡಿದೆ. ಯುಎಇ ವಿರುದ್ಧ 1 ರನ್‌ ಅಂತರದಿಂದ ಸೋತರೆ, ಇಂಗ್ಲೆಂಡ್‌ ವಿರುದ್ಧ 15 ರನ್‌ ಅಂತರದ ಸೋಲು ಕಂಡಿತು. ಅಂತಿಮ ಪಂದ್ಯವನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ. ಈ ಪಂದ್ಯ ಕೂಡ ಇಂದೇ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿವೆ. ಶನಿವಾರವೇ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಭಾನುವಾರ ಸೆಮಿಫೈನಲ್‌, ಫೈನಲ್‌ ಪಂದ್ಯ ನಿಗದಿಯಾಗಿದೆ. ಆಡಿದ ಮೂರು ಪಂದ್ಯಗಳನ್ನು ಸೋತಿರುವ ಭಾರತ ಬಹುತೇಕ ಲೀಗ್‌ ಹಂತದಿಂದಲೇ ಹೊರಬಿದ್ದಿದೆ.

ಇದನ್ನೂ ಓದಿ IND vs NZ: ಮೂರನೇ ಟೆಸ್ಟ್‌ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

ಚಾಂಪಿಯನ್ಸ್‌ ಟ್ರೋಫಿಯನ್ನಾಡಲು ಭಾರತ ತಂಡ ಭದ್ರತೆಯ ಕಾರಣ ಪಾಕ್‌ಗೆ ತರಳುವ ಕುರಿತು ಇನ್ನೂ ಖಚಿತತೆ ಇಲ್ಲ. ಆದರೂ ಟೂರ್ನಿಯನ್ನು ತನ್ನ ನೆಲದಲ್ಲೇ ನಡೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕ್ಷಿಪ್ರವಾಗಿ ವೀಸಾಗಳನ್ನು ನೀಡುವ ನೀತಿಯೊಂದನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ವಿಚಾರವನ್ನು ಪಿಸಿಬಿಯ(PCB) ಅಧ್ಯಕ್ಷ ಹಾಗೂ ದೇಶದ ಆಂತರಿಕ ವ್ಯವಹಾರಗಳ ಸಚಿವ ಮುಹ್ಸಿನ್ ನಖ್ವಿ ತಿಳಿಸಿದ್ದಾರೆ.

‘ನಾವು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಟಿಕೆಟ್ ಕೋಟಗಳನ್ನು ಒದಗಿಸಲಿದ್ದೇವೆ ಮತ್ತು ಅವರಿಗೆ ಕ್ಷಿಪ್ರವಾಗಿ ವೀಸಾಗಳನ್ನು ನೀಡುವ ನೀತಿಯೊಂದನ್ನು ಜಾರಿಗೆ ತರಲಿದ್ದೇವೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ, ಲಾಹೋರ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯವನ್ನು ವೀಕ್ಷಿಸುವುದನ್ನು ನೋಡಲು ಪಿಸಿಬಿ ಬಯಸುತ್ತದೆʼ ಎಂದು ನಖ್ವಿ ಹೇಳಿದರು.