Tuesday, 26th November 2024

Paris Masters: ಬೋಪಣ್ಣ-ಎಬ್ಡೆನ್ ಜೋಡಿಯ ಸವಾಲು ಅಂತ್ಯ

ಪ್ಯಾರಿಸ್‌: ಭಾರತದ ಖ್ಯಾತ ಟೆನಿಸ್‌ ತಾರೆ ರೋಹನ್‌ ಬೋಪಣ್ಣ(Rohan Bopanna) ಮತ್ತು ಅವರ ಆಸ್ಟ್ರೇಲಿಯಾದ ಜತೆಗಾರ ಮ್ಯಾಥ್ಯೂ ಎಬ್ಡೆನ್(Matthew Ebden) ಪ್ಯಾರಿಸ್‌ ಮಾಸ್ಟರ್(Paris Masters) ಟೆನಿಸ್‌ ಕೂಟದಲ್ಲಿ ತಮ್ಮ ಅಭಿಯಾನ ಮುಗಿಸಿದ್ದಾರೆ. ಶನಿವಾರ ನಡೆದ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಡಚ್-ಕ್ರೊಯೇಷಿಯಾದ ವೆಸ್ಲಿ ಕೂಲ್‌ಹೋಫ್ ಮತ್ತು ನಿಕೋಲಾ ಮೆಕ್ಟಿಕ್ ಜೋಡಿ ವಿರುದ್ಧ ಸೋತು ನಿರಾಸೆ ಅನುಭವಿಸಿದರು.

ಮೂರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಒಂದು ಗಂಟೆ 46 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 6-7, 5-7 ಅಂಕದಿಂದ ವೆಸ್ಲಿ ಕೂಲ್‌ಹೋಫ್ ಮತ್ತು ನಿಕೋಲಾ ಮೆಕ್ಟಿಕ್ ಜೋಡಿ ಮುಂದೆ ಶರಣಾದರು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಬೋಪಣ್ಣ- ಎಬ್ಡೆನ್ ಜೋಡಿ ಮಾರ್ಸೆಲೊ ಮೆಲೊ ಮತ್ತು ಅಲೆಕ್ಸಾಂಡರ್‌ ಜ್ವರೇವ್‌ ಅವರನ್ನು 6-4, 7-6 ಸೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಆದರೆ, ಇಲ್ಲಿ ಎಡವಿದರು. ಬೋಪಣ್ಣ ಮತ್ತು ಎಬ್ಡೆನ್ ಈ ಮೊದಲು ವರ್ಷಾಂತ್ಯದ ಎಟಿಪಿ ಫೈನಲ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು.

ಇದನ್ನೂ ಓದಿ MS Dhoni: ವಿಶೇಷ ಪೂಜೆ ನಡೆಸಿ ದೀಪಾವಳಿ ಆಚರಿಸಿದ ಧೋನಿ; ವಿಡಿಯೊ ವೈರಲ್‌

ವಿಶೇಷ ದಾಖಲೆ ಬರೆದ ಪಂತ್‌

ಮುಂಬಯಿ: ನ್ಯೂಜಿಲ್ಯಾಂಡ್‌(IND vs NZ) ವಿರುದ್ಧ ಸಾಗುತ್ತಿರುವ ಅಂತಿಮ ಟೆಸ್ಟ್‌(IND vs NZ 3rd Test) ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದ ಟೀಮ್‌ ಇಂಡಿಯಾದ ಎಡಗೈ ಬ್ಯಾಟರ್‌& ಕೀಪರ್‌ ರಿಷಭ್‌ ಪಂತ್‌(Rishabh Pant) ದಾಖಲೆಯೊಂದನ್ನು ಬರೆದಿದ್ದಾರೆ.

ಒಂದು ರನ್‌ ಗಳಿಸಿದ್ದಲ್ಲಿಂದ ಶನಿವಾರ ಬ್ಯಾಟಿಂಗ್‌ ಆರಂಭಿಸಿದ ರಿಷಭ್‌ ಪಂತ್‌ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ನೀಡಿದರು. ಮುನ್ನುಗ್ಗಿ ಬ್ಯಾಟ್‌ ಬೀಸಿದ ಪಂತ್‌ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತ ಬಾರಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(41 ಎಸೆತ) ಹೆಸರಿನಲ್ಲಿತ್ತು.

ಅತಿ ವೇಗವಾಗಿ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತೀಯ ದಾಖಲೆ ಕೂಡ ಪಂತ್‌ ಹೆಸರಿನಲ್ಲಿದೆ. 2022 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಪಂತ್‌ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಪಂತ್‌ 59 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 60 ರನ್‌ ಚಚ್ಚಿದರು. ಈ ವೇಳೆ ಒಂದು ಜೀವದಾನ ಕೂಡ ಲಭಿಸಿತ್ತು. 5ನೇ ವಿಕೆಟ್‌ಗೆ ಶುಭಮನ್‌ ಗಿಲ್‌ ಜತೆ ಸೇರಿಕೊಂಡು ಪಂತ್‌ 96 ರನ್‌ಗಳ ಜತೆಯಾಟ ನಿಭಾಯಿಸಿದರು.