ಹಾಂಕಾಂಗ್: ಹಾಂಕಾಂಗ್ ಸಿಕ್ಸ್ ಕ್ರಿಕೆಟ್(Hong Kong Sixes) ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಸೋತಿರುವ ಭಾರತ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇಂದು(ಶನಿವಾರ) ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ನಾಯಕ ರಾಬಿನ್ ಉತ್ತಪ್ಪ(Robin Uthappa) ಅವರ ಓವರ್‌ನಲ್ಲಿ ರವಿ ಬೋಪಾರ(Ravi Bopara) 6 ಸಿಕ್ಸರ್ ಬಾರಿಸಿ ಸುದ್ದಿಯಾಗಿದ್ದಾರೆ.
ದಿನದ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ 1 ರನ್ ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದ ಭಾರತ ಇಂಗ್ಲೆಂಡ್ ವಿರುದ್ಧ 15 ರನ್‌ಗಳ ಸೋಲಿಗೆ ತುತ್ತಾಯಿತು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರವಿ ಬೋಪಾರ ಅವರು ರಾಬಿನ್ ಉತ್ತಪ್ಪ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದರು.
𝗪𝗮𝘁𝗰𝗵 𝗼𝘂𝘁! ⚠️
— Hong Kong Sixes (@HongKongSixes) November 2, 2024
The skipper of England, Ravi Bopara is raining sixes in Hong Kong!🔥#HongKong #AsiasWorldCity #Cricket #ItsRainingSixes pic.twitter.com/mDckwXkeEP
ಇಂಗ್ಲೆಂಡ್ 3 ಓವರ್‌ಗಳಲ್ಲಿ ಕೇವಲ 36 ರನ್ ಮಾಡಿದ್ದ ವೇಳೆ ಸಿಡಿದು ನಿಂತ ರವಿ ಬೋಪಾರ, ಉತ್ತಪ್ಪ ಎಸೆದ ಓವರ್‌ನ ಎಲ್ಲ ಎಸೆತಗಳನ್ನು ಸಿಕ್ಸರ್ ಗೆರೆ ದಾಟಿಸಿದರು. ಒಂದು ವೈಡ್ ಒಳಗೊಂಡಂತೆ ಈ ಓವರ್‌ನಲ್ಲಿ ಬರೋಬ್ಬರಿ 37 ರನ್ ಹರಿದು ಬಂತು. ಬೋಪಾರ ಈ ಸಾಧನೆಯೊಂದಿಗೆ ಈ ಕೂಟದಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಆಡಿದ ಅಂತಿಮ ಪಂದ್ಯದಲ್ಲಿಯೂ ಸೋಲು ಕಂಡು ಕನಿಷ್ಠ ಒಂದೂ ಪಂದ್ಯವನ್ನು ಗೆಲ್ಲದ ಅವಮಾನಕ್ಕೆ ಸಿಲುಕಿತು. ಕೇದಾರ್ ಜಾಧವ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ಶ್ರೀವತ್ಸ ಗೋಸ್ವಾಮಿ, ಭರತ್ ಚಿಪ್ಲಿ, ಶಾಬಾಜ್ ನದೀಂ ಈ ಬಾರಿ ತಂಡದಲ್ಲಿದ್ದ ಪ್ರಮುಖ ಆಟಗಾರರು. 2005ರಲ್ಲಿ ಭಾರತ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ IND vs NZ: ಕಿವೀಸ್ ವಿರುದ್ಧ ದಾಖಲೆ ಬರೆದ ರಿಷಭ್ ಪಂತ್
ಭಾರತ ತನ್ನ ಮೊದಲ ಪಂದ್ಯವನ್ನು ಬದ್ಧವೈರಿ ಪಾಕಿಸ್ತಾನ(IND vs PAK Hong Kong Sixes) ವಿರುದ್ಧ ಆಡಿತ್ತು. ಈ ಪಂದ್ಯ ಶುಕ್ರವಾರ ನಡೆದಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 6 ಓವರಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿತು. ನಾಯಕ ರಾಬಿನ್ ಉತ್ತಪ್ಪ 8 ಎಸೆತದಲ್ಲಿ 31 ರನ್, ಭರತ್ ಚಿಪ್ಲಿ 16 ಎಸೆತದಲ್ಲಿ 53 ರನ್ ಬಾರಿಸಿದ ಪರಿಣಾಮ ತಂಡ 2 ವಿಕೆಟ್‌ಗೆ 119 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ 5 ಓವರಲ್ಲೇ 121 ರನ್ ಗಳಿಸಿ ಗುರಿ ತಲುಪಿ ಗೆಲುವು ದಾಖಲಸಿತು.