ಮುಂಬಯಿ: ನ್ಯೂಜಿಲ್ಯಾಂಡ್(IND-NZ 3rd Test) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ವೈಟ್‌ವಾಶ್ ಮುಖಭಂಗಕ್ಕೆ ಒಳಗಾದ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ಹಾದಿ ಕಠಿಣಗೊಂಡಿದೆ. ಇದುವರೆಗೂ ಅಂಕಪಟ್ಟಿಯಲ್ಲಿ(WTC Points Table) ಅಗ್ರಸ್ಥಾನ ಕಾಯ್ದುಕೊಂಡಿದ್ದ ಭಾರತ ಸೋಲಿನಿಂದ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಜಾರಿದೆ. 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ(Australia) ಅಗ್ರಸ್ಥಾನಕ್ಕೇರಿದೆ. ಫೈನಲ್ ಪ್ರವೇಶಿಸಬೇಕಿದ್ದರೆ ರೋಹಿತ್ ಪಡೆಗೆ ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ.
ಭಾರತ ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್, ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ದ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮೂರನೇ ಬಾರಿಗೆ ಫೈನಲ್ ಪ್ರವೇಶಿಸಬೇಕಿದ್ದರೆ, ಭಾರತ ಇನ್ನುಳಿದ 5 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು. ಒಂದೊಮ್ಮೆ ಭಾರತ ಉಳಿದ 5ರಲ್ಲಿ 2ರಲ್ಲಿ ಮಾತ್ರ ಗೆದ್ದು, ಉಳಿದ 3ರಲ್ಲಿ ಡ್ರಾ ಸಾಧಿಸಿದರೂ, ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಆದರೆ ಆಗ ಫೈನಲ್ ಭವಿಷ್ಯವನ್ನು ಇತರ ಸರಣಿಗಳ ಫಲಿತಾಂಶಗಳು ನಿರ್ಧರಿಸುತ್ತವೆ. ಸದ್ಯ ಭಾರತ (58.33), ಆಸ್ಟ್ರೇಲಿಯಾ(62.50), ಶ್ರೀಲಂಕಾ(55.56), ನ್ಯೂಜಿಲ್ಯಾಂಡ್(54.55) ಗೆಲುವಿನ ಪ್ರತಿಶತ ಹೊಂದಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ದ 5 ಹಾಗೂ ಶ್ರೀಲಂಕಾ ವಿರುದ್ದ ಎರಡು ಪಂದ್ಯಗಳು ಸೇರಿ ಒಟ್ಟು 7 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 4 ಪಂದ್ಯ ಜಯಿಸಿದರೇ, ಟೆಸ್ಟ್ ವಿಶ್ವಕಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಭಾರತವನ್ನೂ ತವರಿನಲ್ಲೇ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಸಾಧನೆ ತೋರಿರುವ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ.
ಇದನ್ನೂ ಓದಿ IND vs NZ: ತವರಿನಲ್ಲೇ ಭಾರತಕ್ಕೆ ವೈಟ್ ವಾಶ್ ಮುಖಭಂಗ
ಅತ್ಯಂತ ರೋಚಕ ಮತ್ತು ಕುತೂಹಲ ಮೂಡಿಸಿದ್ದ ಮುಂಬೈ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ನಾಟಕೀಯ ಪ್ರದರ್ಶನ ತೋರುವ ಸೋಲು ಕಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ 43.3 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 171 ರನ್ ಗಳಿಸಿದ್ದ ನ್ಯೂಜಿಲ್ಯಾಂಡ್ ಇಂದು ಕೇವಲ 14 ಎಸೆತ ಎದುರಿಸಿ ಮೂರು ರನ್ ಕಲೆಹಾಕಲಷ್ಟೇ ಶಕ್ತವಾಗಿ 174 ರನ್‌ಗೆ ಆಲ್‌ಔಟ್ ಆಯಿತು. ಭಾರತ 121 ರನ್‌ಗೆ ಸರ್ಪಪತನ ಕಂಡು ಹೀನಾಯ ಸೋಲು ಕಂಡಿತು.
ಭಾರತ ತಂಡ ಇದುವರೆಗೆ ತವರಿನಲ್ಲಿ ಆಡಿದ ಎರಡಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಒಮ್ಮೆಯೂ ವೈಟ್ ವಾಶ್ ಎದುರಿಸಿರಲಿಲ್ಲ. ಇದೀಗ ಕಿವೀಸ್ ಕಿವೀಸ್ ವಿರುದ್ಧ 3-0 ಅಂತರದಿಂದ ಸೋತು ಮೊದಲ ಬಾರಿಗೆ ವೈಟ್ ವಾಶ್ ಆದ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಒಂದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಮ್ಮೆ ಮಾತ್ರ ಭಾರತ ವೈಟ್ ವಾಶ್ ಮುಖಭಂಗ ಎದುರಿಸಿತ್ತು. 1999-2000 ದಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದಿಂದ ಸರಣಿ ಸೋಲು ಅನುಭವಿಸಿತ್ತು.