Thursday, 26th December 2024

Waqf Board: ಗೋಲ್‌ಗುಂಬಜ್‌ ಸೇರಿ 53 ಐತಿಹಾಸಿಕ ಸ್ಮಾರಕ ವಕ್ಫ್‌ ಆಸ್ತಿ! ಹಂಪಿಯಲ್ಲೂ 6 ಸ್ವತ್ತುಗಳ ಮೇಲೆ ಹಕ್ಕುಸ್ವಾಮ್ಯ

gol gumbz

ಬೆಂಗಳೂರು: ವಿಜಯಪುರದ (Vijayapura news) ಐತಿಹಾಸಿಕ ಗೋಲ್ ಗುಂಬಜ್ (Gol Gumbaz), ಇಬ್ರಾಹಿಂ ರೌಜಾ ಮತ್ತು ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ರಾಜ್ಯಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳ (historic monuments) ಮೇಲೆ ಕರ್ನಾಟಕ ವಕ್ಫ್ ಮಂಡಳಿಯು (Waqf Board) ಹಕ್ಕು ಸಾಧಿಸಿದೆ.

ವಿಜಯನಗರ ಸಾಮ್ರಾಜ್ಯದ ಹೆಮ್ಮೆಯ ಹಂಪಿ ವೃತ್ತದಲ್ಲಿಯೂ ಆರು ಸೇರಿದಂತೆ ಹಲವು ಎಎಸ್‌ಐ-ರಕ್ಷಿತ ಸ್ಮಾರಕಗಳ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ವರದಿಯ ಪ್ರಕಾರ, ಆದಿಲ್ ಶಾಹಿ ರಾಜವಂಶದ ಹಿಂದಿನ ರಾಜಧಾನಿಯಾದ ವಿಜಯಪುರದಲ್ಲಿ 43 ಸ್ಮಾರಕಗಳನ್ನು 2005ರಲ್ಲಿ ಮಂಡಳಿಯು ಅಧಿಕೃತವಾಗಿ ವಕ್ಫ್ ಆಸ್ತಿ ಎಂದು ಘೋಷಿಸಿತು. ಆದರೆ, ಈ ಸ್ಮಾರಕಗಳಲ್ಲಿ ಹೆಚ್ಚಿನವುಗಳು ಅತಿಕ್ರಮಿಸಲ್ಪಟ್ಟಿವೆ ಮತ್ತು ಬದಲಾವಣೆಗೆ ಒಳಗಾಗಿವೆ.

ಭಾರತೀಯ ಪುರಾತತ್ವ ಸಮೀಕ್ಷೆ (ASI) ಹೊಂದಿರುವ ದಾಖಲೆಗಳ ಹಕ್ಕುಗಳ (ROR) ಆಧಾರದ ಮೇಲೆ ವಕ್ಫ್ ಮಂಡಳಿಯು ಈ ಸೈಟ್‌ಗಳನ್ನು ವಕ್ಫ್ ಆಸ್ತಿಗಳಾಗಿ ಗೊತ್ತುಪಡಿಸಿದೆ. ಆದರೆ, ಇದನ್ನು ತನ್ನ ಅನುಮೋದನೆಯಿಲ್ಲದೆ ಹಾಗೂ ತನ್ನೊಂದಿಗೆ ಸಮಾಲೋಚಿಸದೆ ಮಾಡಲಾಗಿದೆ ಎಂದು ಎಎಸ್‌ಐ ಹೇಳಿದೆ.

ಹಂಪಿ ವೃತ್ತದಲ್ಲಿ ಆರು, ಬೆಂಗಳೂರು ವೃತ್ತದಲ್ಲಿ ನಾಲ್ಕು ಮತ್ತು ಶ್ರೀರಂಗಪಟ್ಟಣದ ಮಸೀದಿ-ಇ-ಆಲಾ ಸೇರಿದಂತೆ ಹೆಚ್ಚುವರಿ ಎಎಸ್‌ಐ-ಸಂರಕ್ಷಿತ ಸ್ಮಾರಕಗಳ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ.

ರೈತರ ನೋಟೀಸ್‌ ವಾಪಸ್

ವಕ್ಫ್ ಭೂ ಹಕ್ಕುಗಳಿಗೆ ಸಂಬಂಧಿಸಿದಂತೆ ರೈತರಿಗೆ ನೀಡಿರುವ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶನಿವಾರ ಆದೇಶ ನೀಡಿದ್ದರು. ಕಂದಾಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕ್ಫ್ ಜಮೀನಿನ ಕುರಿತು ರೈತರಿಗೆ ಕಳುಹಿಸಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ರೈತರಿಗೆ ಯಾವುದೇ ತೊಂದರೆ ಉಂಟುಮಾಡಬಾರದು ಎಂದು ಒತ್ತಿ ಹೇಳಿದ್ದಾರೆ.

ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ಭೂ ದಾಖಲೆಗಳನ್ನು ಸಲ್ಲಿಸಬೇಕು, ತಪ್ಪಿದರೆ ಮಾಲೀಕತ್ವವನ್ನು ವಕ್ಫ್ ಬೋರ್ಡ್‌ಗೆ ವರ್ಗಾಯಿಸಲಾಗುವುದು ಎಂಬ ನೋಟೀಸ್‌ಗಳು ಬಂದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಪ್ರಾರಂಭವಾದ ಪ್ರತಿಭಟನೆಯು ಕೆಲವೇ ದಿನಗಳಲ್ಲಿ ಧಾರವಾಡ, ಕಲಬುರಗಿ, ಚಿಕ್ಕೋಡಿಗಳಿಗೂ ಹರಡಿತ್ತು.