Friday, 22nd November 2024

Virat Kohli Birthday Special: ಬರ್ತ್‌ಡೇ ಬಾಯ್‌ ಕೊಹ್ಲಿಯ ಸಾಧನೆಯ ಇಣುಕು ನೋಟ

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಗೆ(Virat Kohli Birthday Special) ಇಂದು 36ನೇ ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹವಾಗ್​, ಎಬಿಡಿ ವಿಲಿಯರ್ಸ್​, ಕಾಮೆಂಟ್ರೇಟರ್​ ಹರ್ಷ ಬೋಗ್ಲೆ, ರಾಯಲ್​ ಚಾಲೆಂಜ್​ ಬೆಂಗಳೂರು, ಬಿಸಿಸಿಐ ಸೇರಿ ಅನೇಕರು ಶುಭ ಹಾರೈಸಿದ್ದಾರೆ. ಕೊಹ್ಲಿಯ ಸಾಧನೆಯ ಇಣುಕು ನೋಟ ಇಲ್ಲಿದೆ.

ಬಿಸಿಸಿಐ ವಿರಾಟ್​ ಕೊಹ್ಲಿಗೆ(Virat Kohli) ವಿಶೇಷವಾಗಿ ಶುಭ ಹಾರೈಸಿದೆ. “538 ಪಂದ್ಯಗಳು, 27,134 ರನ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್​ ಟ್ರೋಫಿ, 2024ರ ಟಿ20 ವಿಶ್ವಕಪ್‌ ವಿನ್ನರ್​ ಎಂದು ಬರೆದು “ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಬ್ಯಾಟರ್‌, ಫಿಟ್‌ನೆಸ್‌ ಕಿಂಗ್​ ಕೊಹ್ಲಿಗೆ ಜನ್ಮದಿನದ ಶುಭಾಶಯಗಳು” ಎಂದು ಬಿಸಿಸಿಐ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಶುಭ ಕೋರಿದೆ.

ತಂದೆಯ ಸಾವಿನ ನೋವಿನಲ್ಲಿಯೂ ಆಡಿದ್ದ ಕೊಹ್ಲಿ

2006ರಲ್ಲಿ ಕೊಹ್ಲಿ ದೆಹಲಿ ರಣಜಿ ತಂಡದ ಸದಸ್ಯ. ದಹೆಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಕೊಹ್ಲಿಯ ಭವಿಷ್ಯ ಕೂಡ ಇದೇ ಟೂರ್ನಿಯಲ್ಲಿತ್ತು. ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಅಜೇಯ 40 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಮರುದಿನಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದ ಕೊಹ್ಲಿಗೆ ಬೆಳ್ಳಂಬೆಳಗ್ಗೆ ಆಘಾತ ಕಾದಿತ್ತು.

ಇದನ್ನೂ ಓದಿ Happy Birthday Virat Kohli: 36ನೇ ವರ್ಷಕ್ಕೆ ಕಾಲಿಟ್ಟ ಕಿಂಗ್‌​ ಕೊಹ್ಲಿ

ಮುಂಜಾನೆ 3 ಗಂಟೆಗೆ ಕೊಹ್ಲಿ ತಂದೆ ಅಸ್ವಸ್ಥರಾಗಿದ್ದರು. ಸಹಾಯಕ್ಕೆ ಹತ್ತಿರದವರನ್ನ ಕೂಗಿದರು. ಸಮಯಕ್ಕೆ ಸರಿಯಾಗಿ ಯಾರಿಂದಲೂ ಸಹಾಯ ಸಿಗಲಿಲ್ಲ. ಕೊಹ್ಲಿ ತಂದೆ ಸಾವನ್ನಪ್ಪಿದ್ದರು. ಕೊಹ್ಲಿಗೆ ದಿಕ್ಕೇ ತೋಚದಂತಾಯಿತು. ಬೆಳಗ್ಗೆ 9 ಗಂಟೆಗೆ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಬೇಕು. ಇತ್ತ ತಂದೆಯ ಸಾವು. ಅತ್ತ ರಣಜಿ ಪಂದ್ಯ. ಈ ಸಂದರ್ಭವನ್ನು ಕೊಹ್ಲಿ ಎದುರಿಸಿದಂತೆ ಇನ್ನಾರಿಂದಲೂ ಸಾಧ್ಯವಿಲ್ಲ. ತಂದೆಯ ಸಾವಿನ ನಡುವೆಯೂ ಕೊಹ್ಲಿ ಬ್ಯಾಟಿಂಗ್​ ಮುಂದುವರಿಸಿದ್ದರು. ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

ವಿರಾಟ್​ ಕೊಹ್ಲಿ ಅವರು ಆಗಸ್ಟ್​ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೇವಲ 8 ಲಿಸ್ಟ್​ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು. ಆ ಬಳಿಕದ್ದು ಇತಿಹಾಸ.

ಅಂಡರ್​ 19 ವಿಶ್ವಕಪ್​ ವಿಜೇತ ನಾಯಕ

ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಹಿರಿಮೆಯೂ ವಿರಾಟ್​ ಪಾಲಿಗಿದೆ. 2008ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂಡರ್‌-19ನೇ ವಿಶ್ವಕಪ್‌ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಡಿ-ಎಲ್‌ ನಿಯಮದಂತೆ 12 ರನ್ನುಗಳಿಂದ ಮಣಿಸಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ವಿರಾಟ್ ಅವರು ಇಂದು ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ ಅವರ ಪಾಲಿಗೆ ಇದು ಶ್ರೇಷ್ಠ ಟೂರ್ನಿಯಾಗಿದೆಯಂತೆ. ಹಿಂದೊಮ್ಮೆ ಅವರು ಈ ಮಾತನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದರು. “ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿ ತನ್ನ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು. ನನಗೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಮತ್ತು ಕ್ರಿಕೆಟ್‌ ರಂಗದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು. ಹಾಗಾಗಿಯೇ ಆ ಪಂದ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ’ ಎಂದು ಕೊಹ್ಲಿ ಹೇಳಿದ್ದರು.

538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ ಈ ಹಾದಿಯಲ್ಲಿ 27,134 ರನ್‌ ಬಾರಿಸಿದ್ದಾರೆ. 2011ರ ಏಕದಿನ ವಿಶ್ವಕಪ್‌, 2013 ಐಸಿಸಿ ಚಾಂಪಿಯನ್ಸ್‌ ಟ್ರೋಫಿ, 2024ರ ಟಿ20ವಿಶ್ವ ಕಪ್‌ ತಂಡದ ಸದಸ್ಯನಾಗಿದ್ದರು. ಏಕದಿನದಲ್ಲಿ 13906 ರನ್‌, 50 ಶತಕ, ಟೆಸ್ಟ್‌ನಲ್ಲಿ 9040 ರನ್‌, 29 ಶತಕ, ಟಿ20ಯಲ್ಲಿ 4188 ರನ್‌, 1 ಶತಕ ಬಾರಿಸಿದ್ದಾರೆ.