Friday, 22nd November 2024

Virat Kohli Birthday Special: ಜನ್ಮದಿನದಂದೇ ಶತಕ ಬಾರಿಸಿದ ಸಾಧಕರ ಯಾದಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(Virat Kohli Birthday) ಅವರಿಗೆ ಇಂದು(ನ.5 ಮಂಗಳವಾರ) 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಕೆಲವೆಡೆ ಕೊಹ್ಲಿಯ ಭಾವ ಚಿತ್ರಕ್ಕೆ ಪೂಜೆ ಮಾಡಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಜನ್ಮದಿನದಂದೇ(Century On Their Birthday) ಶತಕ ಬಾರಿಸಿದ ಯಾದಿಯಲ್ಲಿ ಕೊಹ್ಲಿಗೆ 7ನೇ ಸ್ಥಾನ.

ವಿರಾಟ್​ ಕೊಹ್ಲಿ(Virat Kohli) ಅವರು ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತನ್ನ ​35ನೇ ಹುಟ್ಟುಹಬ್ಬದಂದೇ ಅಜೇಯ 101 ರನ್​ ಬಾರಿಸಿ, ಜನ್ಮದಿನದಂದೇ(Century On Their Birthday) ಶತಕ ಬಾರಿಸಿದ ವಿಶ್ವದ 7ನೇ ಕ್ರಿಕೆಟಿಗ ಎನಿಸಿಕೊಂಡಿದ್ದರು. ಇದೇ ವೇಳೆ ಅವರು ಸಚಿನ್ ತೆಂಡೂಲ್ಕರ್‌​ ಅವರ ಸಾರ್ವಕಾಲಿಕ ಏಕದಿನದ 49ನೇ ಶತಕವನ್ನು ಸರಿದೂಗಿಸಿದ್ದರು.

ಕ್ರಿಕೆಟ್​ ದೇವರು ಸಚಿನ್‌ ತೆಂಡೂಲ್ಕರ್​ ಕೂಡ ಹುಟ್ಟುಹಬ್ಬದಂದೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಅವರು 1998ರಲ್ಲಿ ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ವಿರುದ್ಧದ ಪಂದ್ಯದಲ್ಲಿ 134 ರನ್​ ಬಾರಿಸಿದ್ದರು. ಆಗ ಅವರಿಗೆ 25 ವರ್ಷ. ಹುಟ್ಟುಹಬ್ಬದಂದೇ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಟೀಮ್​ ಇಂಡಿಯಾದ ಮಾಜಿ ಬ್ಯಾಟರ್​ ವಿನೋದ್​ ಕಾಂಬ್ಳಿ ಹೆಸರಿನಲ್ಲಿದೆ. ಕಾಂಬ್ಳಿ ಅವರು 1993ರಲ್ಲಿ ಇಂಗ್ಲೆಂಡ್‌ ವಿರುದ್ಧ ಜೈಪುರದಲ್ಲಿ ನಡೆದದ ಪಂದ್ಯದಲ್ಲಿ ಅಜೇಯ 100 ರನ್​ ಬಾರಿಸಿದ್ದರು. ಆಗ ಅವರಿಗೆ 21 ವರ್ಷದ ಜನ್ಮದಿನದ ಸಂಭ್ರಮವಾಗಿತ್ತು.

ನಾಯಕನಾಗಿಯೂ ಸಾಧನೆ

2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ಸರಣಿ ಗೆಲುವು ದಾಖಲಿಸಿತ್ತು. ಭಾರತೀಯ ತಂಡವು 70 ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಸಾಧಿಸಿದ ಮೊದಲ ಸರಣಿ ಗೆಲುವು ಇದಾಗಿತ್ತು. ಈ ಕೀರ್ತಿ ವಿರಾಟ್​ ಕೊಹ್ಲಿಗೆ ಸೇರಿದೆ. ಕೊಹ್ಲಿ ನಾಯಕನಾಗಿ 68 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 40 ಗೆದ್ದರೆ, 17 ರಲ್ಲಿ ಸೋಲು ಮತ್ತು 11 ಡ್ರಾ ಕಂಡಿದೆ. 2019ರ ಏಕದಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿ ವೇಳೆ ಭಾರತ ತಂಡ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಂಡು ನಿರಾಸೆ ಮೂಡಿಸಿತ್ತು.

ಇದನ್ನೂ ಓದಿ Happy Birthday Virat Kohli: 36ನೇ ವರ್ಷಕ್ಕೆ ಕಾಲಿಟ್ಟ ಕಿಂಗ್‌​ ಕೊಹ್ಲಿ

ಪಾಕ್‌ ವಿರುದ್ಧ ಸ್ಮರಣೀಯ ಇನಿಂಗ್ಸ್‌

2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ ನಡೆದಿದ್ದ​ ಟಿ-20 ವಿಶ್ವಕಪ್‌(t20 world cup 2022) ಪಂದ್ಯದ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌(Haris Rauf) ಬೌಲಿಂಗ್‌ಗೆ ವಿರಾಟ್‌ ಕೊಹ್ಲಿ(Virat Kohli) ಲೀಲಾಜಾಲವಾಗಿ ಸಿಕ್ಸರ್‌ ಬಾರಿಸಿದ್ದನ್ನು ಯಾವ ಭಾರತೀಯನೂ ಮರೆತಿರಲಿಕ್ಕಿಲ್ಲ. ಕೊಹ್ಲಿ ಈ ಓವರ್​ನಲ್ಲಿ ಬಾರಿಸಿದ ಸಿಕ್ಸರ್​ನಿಂದಾಗಿ ಅಂದು ಭಾರತ(t20 world cup 2022 ind vs pak) ಪಂದ್ಯವನ್ನು ಗೆದ್ದು ಬೀಗಿತ್ತು.

ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು. ಕೊಹ್ಲಿ ಈ 2 ಸಿಕ್ಸರ್‌ ಬಾರಿಸದೇ ಹೋಗಿದ್ದರೆ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತಿತ್ತು. ರೌಫ್‌ ಈ ಓವರ್‌ನಲ್ಲಿ 15 ರನ್‌ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 82 ರನ್‌ ಬಾರಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿದ್ದರು.