Monday, 25th November 2024

2036 Olympics: ಭಾರತದಲ್ಲಿಯೇ 2036ರ ಒಲಿಂಪಿಕ್ಸ್‌; ಐಒಎಗೆ ಪತ್ರ ಸಲ್ಲಿಸಿದ ಐಒಸಿ

ನವದೆಹಲಿ: ಜಗತ್ತಿನ ಅತೀ ದೊಡ್ಡ ಕ್ರೀಡಾಹಬ್ಬವಾಗಿರುವ ಒಲಿಂಪಿಕ್ಸ್‌ ಕೂಟವನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕಿದ್ದು, 2036ರಲ್ಲಿ(India to host 2036 Olympics) ಇದನ್ನು ನಡೆಸಲು ಸಕಲ ಪ್ರಯತ್ನ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದರು. ಇದೀಗ ಮೋದಿಯ ಕನಸು ನನಸಾಗುವ ಹಂತದಲ್ಲಿದೆ.

ಸರ್ಕಾರಿ ಮೂಲಗಳ ಪ್ರಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 2024 ರ ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಔಪಚಾರಿಕವಾಗಿ ಉದ್ದೇಶದ ಪತ್ರವನ್ನ ಕಳುಹಿಸಿದೆ ಎನ್ನುವ ವರದಿಯೊಂದು ಹೊರಬಿದ್ದಿದೆ. ಭಾರತವು 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಬಯಸಿದೆ ಎಂದು ಈ ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ 2028ರಲ್ಲಿ ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಆಟ ಸೇರ್ಪಡೆ ಖಚಿತ

ದೇಶವು ಒಲಿಂಪಿಕ್ಸ್‌ ಕ್ರೀಡಾ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಭಾರತದ ನೆಲದಲ್ಲಿ ನಡೆಯಬೇಕು ಎಂಬುದು ಭಾರತೀಯರ ಕನಸಾಗಿದೆ. ಅದಕ್ಕಾಗಿ ತಯಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದೇವೆ ಎಂದು ಮೋದಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಹೇಳಿದ್ದರು.

2036ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಆತಿಥೇಯ ದೇಶದ ಆಯ್ಕೆ ಮುಂದಿನ ವರ್ಷ ನಡೆಯಲಿದೆ. ಭಾರತದೊಂದಿಗೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಬಿಡ್‌ ಸಲ್ಲಿಸಲು ಉತ್ಸುಕವಾಗಿವೆ. ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜನೆಯಾದರೆ ಅಹ್ಮದಾಬಾದ್‌ ಪ್ರಮುಖ ನಗರವಾಗಲಿದೆ.

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಕೂಡ 2036 ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಭಾರತ ಆಯೋಜಿಸಬಲ್ಲದು ಎಂದು ಹೇಳಿದ್ದರು. ಸಂದರ್ಶನವೊಂದರಲ್ಲಿ ಭಾರತದ ಬಗ್ಗೆ ಮಾತನಾಡಿದ್ದ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌, ಭಾರತದ ಭವಿಷ್ಯದ ಬಗ್ಗೆ ನನಗೆ ಬಲವಾದ ನಂಬಿಕೆಯಿದೆ. ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹೇಳಿದ್ದರು.