Saturday, 23rd November 2024

Viral News: ಮತದಾನ ಮಾಡಲ್ಲ ಎಂದ ಭಾವೀ ಪತಿ- ಮದುವೆಯೇ ಬೇಡ ಎಂದು ಬ್ರೇಕ್‌ ಅಪ್‌ ಮಾಡ್ಕೊಂಡ ಯುವತಿ!

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ (US Presidential Election 2024) ನಿರ್ಣಾಯಕ ಹಂತವನ್ನು ತಲುಪಿದೆ.ರಿಪಬ್ಲಿಕನ್ ಪಕ್ಷದ (Republican Party) ಡೊನಾಲ್ಡ್ ಟ್ರಂಪ್ (Donald Trump) ಮತ್ತು ಡೆಮಾಕ್ರಾಟಿಕ್ ಪಕ್ಷದ (Democratic Party) ಕಮಲಾ ಹ್ಯಾರಿಸ್ (Kamala Harris) ನಡುವೆ ನೆಕ್-ಟು-ನೆಕ್ ಫೈಟ್ ಏರ್ಪಟ್ಟಿದೆ. ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗುತ್ತಾರೋ ಅಥವಾ ಭಾರತೀಯ ಮೂಲಲದ  ಕಮಲಾ ಹ್ಯಾರಿಸ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅಮೆರಿಕಾದ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಾರೋ ಎಂಬ ಕುತೂಹಲ ಇದೀಗ ಎಲ್ಲೆಡೆ ಗರಿಗೆದರಿರುವಂತೆ ಅಮೆರಿಕಾ ಚುನಾವಣೆಗೆ ಸಂಬಂಧಿಸಿದ ಒಂದೊಂದೇ ಸ್ವಾರಸ್ಯಕರ ವಿಚಾರಗಳು ಹೊರಬರುತ್ತಿವೆ (Viral News).

ಅಮೆರಿಕಾದ 47ನೇ ಅಧ್ಯಕ್ಷರಾಗಿ ಯಾರು ಆಯ್ಕೆಗೊಳ್ಳಲಿದ್ದಾರೆ ಎಂಬ ಕುತೂಹಲದ ನಡುವೆಯೇ, ತಾನು ಮದುವೆಯಾಗಬೇಕಿದ್ದ ತನ್ನ ಭಾವೀ ಪತಿ ಈ ಬಾರಿ ಮತ ಚಲಾಯಿಸಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ತಮ್ಮ ಎಂಗೇಜ್ಮೆಂಟನ್ನೇ ಬ್ರೇಕ್ ಅಪ್ ಮಾಡಿಕೊಳ್ಳಲು ನಿರ್ಧರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

26 ವರ್ಷ ಪ್ರಾಯದ ಯುವತಿಯೊಬ್ಬಳು ರೆಡ್ ಇಟ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಂತೆ, ಆಕೆಯ ಭಾವೀ ಪತಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಇಚ್ಛಿಸುತ್ತಿಲ್ಲವಾದ ಕಾರಣ, ನನಗೆ ಅದು ಇಷ್ಟವಾಗುತ್ತಿಲ್ಲ. ನಮ್ಮಿಬ್ಬರ ನಡುವೆ ನಡೆದಿರುವ ನಿಶ್ಚಿತಾರ್ಥವನ್ನು ಕೊನೆಗೊಳಿಸಲೇ ಎಂಬ ಗೊಂದಲಿದಲ್ಲಿದ್ದೇನೆ..!’ ಎಂದು ಆ ಯುವತಿ ಮಾಧ್ಯಮದ ಬಳಿ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾಳೆ.

ಫ್ಲೋರಿಡಾ ನಿವಾಸಿಯಾಗಿರುವ ಈ ಯುವತಿ ಹೇಳುವ ಪ್ರಕಾರ, ಈಕೆಯ ಭಾವೀ ಪತಿಗೆ ಸದ್ಯ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಾಗದ ಕಾರಣ ಆತ ಈ ಬಾರಿ ತನ್ನ ಮತವನ್ನು ಚಲಾಯಿಸದಿರಲು ನಿರ್ಧರಿಸಿದ್ದಾನೆ. ಆದರೆ ಯುವತಿ ಹೇಳುವಂತೆ. ‘ನಮ್ಮ ರಾಜಕೀಯ ನಿಲುವುಗಳು ಬಹುತೇಕ ಒಂದೇ ಆಗಿದ್ದು, ಆತ ಮತದಾನ ಮಾಡುವಲ್ಲಿ ಯಾಕಿಷ್ಟು ನಿರಾಸಕ್ತಿ ಹೊಂದಿದ್ದಾನೆಂದು ನನಗೆ ಅರ್ಥವಾಗುತ್ತಿಲ್ಲ..’ ಎಂದು ಆ ಯುವತಿ ಹೇಳಿಕೊಂಡಿದ್ದಾಳೆ.

ಈ ವಿಚಿತ್ರ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಬ್ಬುತ್ತಿದ್ದಂತೆ ನೆಟ್ಟಿಗರು ಈ ವಿಚಾರಕ್ಕೆ ಸಂಬಂದಿಸಿದಂತೆ ಪರ-ವಿರೋ‍ಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈಕೆಯ ನಿರ್ಧಾರವನ್ನು ಬೆಂಬಲಿಸಿದರೆ ಇನ್ನು ಕೆಲವರು ಮತದಾನ ಮಾಡುವುದು ವ್ಯಕ್ತಿಯೊಬ್ಬನ ವೈಯಕ್ತಿಕ ನಿರ್ಧಾರವಾಗಿದ್ದು, ಇದು ಅವರ ವೈಯಕ್ತಿಕ ಸಂಬಂಧಗಳ ಮೇಲೆ ಪ್ರಭಾವ ಬೀರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

“ನೀವು ಆತನ ಕ್ರಿಯೆ, ವರ್ತನೆ ಅಥವಾ ಆಯ್ಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ – ನಿಮ್ಮನ್ನು ಮಾತ್ರವೇ ನೀವು ನಿಯಂತ್ರಿಸಿಕೊಳ್ಳಬಹುದು. ನಿಮಗೆ ಮತದಾನ ಮಾಡುವುದೇ ಪ್ರಮುಖ ವಿಚಾರವಾಗಿದ್ದಲ್ಲಿ, ನೀವು ಆತನಿಂದ ದೂರವಾಗಬಹುದು (ಒಂದು ವೇಳೆ ಆತ ಮತದಾನ ಮಾಡಿದ್ದರೆ, ಅಥವಾ ನೀವು ಮತದಾನ ಮಾಡಿದ ಅಭ್ಯರ್ಥಿಗೆ ವಿರುದ್ಧವಾಗಿ ಆತ ಮತ ಹಾಕಿದ್ದರೆ, ಆಗ ನಿಮಗಿದು ಸಮ್ಮತವಾಗುತ್ತಿತ್ತೇ..!?) ಯಾವುದೇ ಕಾರಣನ್ನು ಕೊಟ್ಟಾದರೂ ನೀವು ನಿಮ್ಮ ಸಂಬಂಧವನ್ನು ಕೊನೆಗೊಳಿಸಿಕೊಳ್ಳಬಹುದು.” ಎಂದು ಒಬ್ಬ ಓದುಗರು ಸುದೀರ್ಘವಾಗಿ ಪ್ರತಿಕ್ರಿಯಿಸಿದ್ದಾರೆ.

“ನನ್ನ ಪ್ರಕಾರ ಇದೊಂದು ಡೀಲ್ ಬ್ರೇಕರ್ ರೀತಿ ಕಾಣಿಸುತ್ತಿದೆ..” ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದರೆ, “ಒಂದು ವೇಳೆ ಆತ ನಿಮ್ಮ ಇಷ್ಟಕ್ಕೆ ವಿರುದ್ಧವಾದ ಅಭ್ಯರ್ಥಿಗೆ ಮತ ಹಾಕಿದ್ದಿದ್ದರೆ ಆವಾಗಲೂ ನೀವು ಆತನನ್ನು ಮದುವೆಯಾಗುತ್ತಿರಲಿಲ್ಲವೇ..?” ಎಂದು ಒಬ್ಬಾತ ಪ್ರಶ್ನಿಸಿದ್ದಾನೆ.

ಇದನ್ನೂ ಓದಿ: Viral Video: ಸ್ಪೀಡ್ ಫ್ಲೈ ಮಾಡಲು ಹೋಗಿ ಜೀವ ಕಳೆದುಕೊಂಡ ತರಬೇತುದಾರ

ಹೀಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಒಟ್ಟಿನಲ್ಲಿ ಮತನದಾನ ಮಾಡಲಿಲ್ಲವೆಂದು ತಮ್ಮ ನಿಶ್ಚಿತಾರ್ಥವನ್ನೇ ಮುರಿದುಕೊಳ್ಳಲು ನಿರ್ಧರಿಸಿರುವ ಫ್ಲೋರಿಡಾದ ಈ ಯುವತಿಯ ನಿರ್ಧಾರ ಮಾತ್ರ ಇದೀಗ ನೆಟ್ಟಿಗರ ನಡುವೆ ಚರ್ಚೆ ನಡೆಯುವಂತೆ ಮಾಡಿದೆ.