Monday, 25th November 2024

Shakib Al Hasan: ಶಕಿಬ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ಗಳ ಆಕ್ಷೇಪ

ಲಂಡನ್:‌ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್(Shakib Al Hasan) ಅವರ ಶಂಕಿತ ಬೌಲಿಂಗ್ ಕ್ರಮದ ಬಗ್ಗೆ ಅಂಪೈರ್‌ಗಳು ವರದಿ ಮಾಡಿದ್ದಾರೆ. ಈ ಋತುವಿನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ಪರ ಶಕೀಬ್ ಆಡಿದ್ದರು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಶಕೀಬ್ ಅವರ ಬೌಲಿಂಗ್ ಕ್ರಮದ ವಿಶ್ಲೇಷಣೆಗೆ ಒಳಗಾಗುವಂತೆ ಕೇಳಿದೆ ಎಂದು ವರದಿಯಾಗಿದೆ. ಶಕೀಬ್‌ರನ್ನು ಆಟದಿಂದ ಅಮಾನತುಗೊಳಿಸಲಾಗಿಲ್ಲ ಆದರೆ ಮುಂದಿನ ಎರಡು ವಾರಗಳಲ್ಲಿ ಅವರು ಅನುಮೋದಿತ ಸ್ಥಳದಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್‌ನಲ್ಲಿ ಸೋಮರ್‌ಸೆಟ್ ವಿರುದ್ಧ ನಡೆದ ಪಂದ್ಯದಲ್ಲಿ ಸರ್ರೆ ಪರ ಶಾಕಿಬ್ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದರು. 63 ಓವರ್‌ಗಳಿಗಿಂತ ಹೆಚ್ಚು ಬೌಲ್ ಮಾಡಿ ಒಂಬತ್ತು ವಿಕೆಟ್‌ಗಳನ್ನು ಪಡೆದರು. ಆದರೆ ಆನ್-ಫೀಲ್ಡ್ ಅಂಪೈರ್‌ಗಳಾದ ಸ್ಟೀವ್ ಓ’ಶೌಗ್ನೆಸ್ಸಿ ಮತ್ತು ಡೇವಿಡ್ ಮಿಲ್ಸ್, ತರುವಾಯ ಅವರ ಬೌಲಿಂಗ್ ಕ್ರಮವನ್ನು ಅನುಮಾನಾಸ್ಪದವೆಂದು ಪರಿಗಣಿಸಿದ್ದಾರೆ ಎಂದು ಈಗ ತಿಳಿದು ಬಂದಿದೆ.

ಆಗಸ್ಟ್‌ನಲ್ಲಿ ಶೇಖ್ ಹಸೀನಾ ಆಡಳಿತದ ರಾಜಕೀಯ ಕ್ರಾಂತಿಯ ನಂತರ 37 ವರ್ಷದ ಶಕೀಬ್ ಬಾಂಗ್ಲಾದೇಶಕ್ಕೆ ಪ್ರಯಾಣಿಸಿಲ್ಲ. ಮಾಜಿ ಪ್ರಧಾನಿ ಶೇಕ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷದ ಸದಸ್ಯನಾಗಿದ್ದರು. ಕಳೆದ ತಿಂಗಳು ಢಾಕಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಸಲಾದ 147 ಜನರಲ್ಲಿ ಶಕೀಬ್ ಅಲ್ ಹಸನ್ ಹೆಸರೂ ಕೂಡ ಇತ್ತು. ಹೀಗಾಗಿ ಶಕೀಬ್ ಸದ್ಯ ಲಂಡನ್‌ನಲ್ಲಿಯೇ ವಾಸವಾಗಿದ್ದಾರೆ.

ಬಾಂಗ್ಲಾ ಪರ ಶಕೀಬ್‌ 71 ಟಿ20 ಪಂದ್ಯಗಳನ್ನು ಆಡಿ 2551 ರನ್‌ ಮತ್ತು 149 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. 20 ರನ್‌ಗೆ 5 ವಿಕೆಟ್‌ ಕಿತ್ತದ್ದು ವೈಯಕ್ತಿಕ ಸಾಧನೆಯಾಗಿದೆ. 70 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ 128 ಇನಿಂಗ್ಸ್‌ಗಳಿಂದ​ 4,600 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಶತಕ, 1 ದ್ವಿಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 242 ವಿಕೆಟ್​ಗಳನ್ನು ಕಬಳಿಸಿದ್ದಾರೆ. 19 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.