Monday, 25th November 2024

Women’s Champions Trophy: ಮಹಿಳೆಯರಿಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ

ದುಬೈ: ಪುರುಷರಂತೆ ಮಹಿಳೆಯರಿಗೂ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಲೀಗ್‌(Women’s Champions Trophy) ಆಯೋಜಿಸುವುದಾಗಿ ಐಸಿಸಿ ಘೋಷಿಸಿದ ಬೆನ್ನಲ್ಲೇ ಈ ನಿರ್ಧಾರವನ್ನು ಮಾಜಿ ಆಟಗಾರ್ತಿಯರು ಸ್ವಾಗತಿಸಿದ್ದಾರೆ. ಚೊಚ್ಚಲ ಆವೃತ್ತಿ ಟೂರ್ನಿ 2027ರಲ್ಲಿ ಶ್ರೀಲಂಕಾದಲ್ಲಿ ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿಯ ಸೇರ್ಪಡೆಯಿಂದ ಮುಂದಿನ ಐದು ವರ್ಷಗಳಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಮಹತ್ವದ ಟೂರ್ನಿಗಳು ಏರ್ಪಡಲಿದೆ. ಅವುಗಳೆಂದರೆ, 2026ರಲ್ಲಿ ಟಿ20 ವಿಶ್ವಕಪ್‌, 2028 ರಲ್ಲಿ T20 ವಿಶ್ವಕಪ್, ಮತ್ತು ಲಾಸ್ ಏಂಜಲೀಸ್ ಒಲಿಂಪಿಕ್ಸ್. 2025 ಮತ್ತು 2029ರಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದೆ.

2025-29ರ ಐಸಿಸಿ ಮಹಿಳಾ ಏಕದಿನ ಚಾಂಪಿಯನ್‌ಶಿಪ್‌ಗೆ ಜಿಂಬಾಬ್ವೆ ಕೂಡಾ ಸೇರ್ಪಡೆಗೊಂಡಿದ್ದು, ತಂಡಗಳ ಸಂಖ್ಯೆ 11ಕ್ಕೆ ಹೆಚ್ಚಳವಾಗಿದೆ. ಇದರ ಭಾಗವಾಗಿ ಭಾರತ ತಂಡ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಕಿವೀಸ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌ ಹಾಗೂ ಐರ್ಲೆಂಡ್‌ ವಿರುದ್ಧ ತವರಿನಲ್ಲೇ ಸರಣಿ ಆಡಲಿದೆ. ಒಟ್ಟಾರೆ ಮಹಿಳಾ ಕ್ರಿಕೆಟ್‌ ತಂಡಗಳಿಗೆ ಮುಂದಿನ ಐದು ವರ್ಷ ಬಿಡುವಿಲ್ಲದ ಕ್ರಿಕೆಟ್‌ ಸರಣಿ ಇರಲಿದೆ.

ಮುಂದಿನ ವರ್ಷ ಪುರುಷರ ಚಾಂಪಿಯನ್ಸ್‌ ಟ್ರೋಫಿ

ಪುರುಷರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಂದಿನ ವರ್ಷ(2025) ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಆದರೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣದಿಂದ ಕೂಟ ಬೇರೆ ಕಡೆಗೆ ಸ್ಥಳಾಂತರವಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್‌ ವಾನ್‌!

ಭಾರತ ಪಾಕ್‌ಗೆ ತೆರಳುವ ಸಂಪೂರ್ಣ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿಯವರ ಹೆಗಲ ಮೇಲಿದೆ. ಅವರು ಒಪ್ಪಿದರೆ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಬಹುದು. ಇಲ್ಲದಿದ್ದರೆ, ಚೆಂಡು ಐಸಿಸಿಯ ಅಂಗಳದಲ್ಲಿರುತ್ತದೆ.

2 ತಿಂಗಳ ಹಿಂದೆ ಐಸಿಸಿ ಆಯೋಗವು ಪಂದ್ಯಾವಳಿ ನಡೆಯುವ ಲಾಹೋರ್‌ನ ಗಡಾಫಿ ಸ್ಟೇಡಿಯಂ, ರಾವಲ್ಪಿಂಡಿ, ಕರಾಚಿ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ಕ್ರಮಗಳು, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಈ ವೇಳೆ ಐಸಿಸಿ ಅಧಿಕಾರಿಗಳು ಪಿಸಿಬಿಯ ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಐಸಿಸಿಯ ಕಾರ್ಯಕ್ರಮ ಮತ್ತು ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಹಾಗೂ ಕ್ರಿಕೆಟ್‌ ಮತ್ತು ಪ್ರೊಡಕ್ಷನ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಈ ನಿಯೋಗದಲ್ಲಿದ್ದರು.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು.