Friday, 22nd November 2024

Donald Trump: ಯುದ್ಧ ನಿಲ್ಲಿಸುವುದೇ ನಮ್ಮ ಗುರಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

Donald Trump

ವಾಷಿಂಗ್ಟನ್‌: ʼʼನಾನು ಯುದ್ಧವನ್ನು ಆರಂಭಿಸುವುದಿಲ್ಲ ಬದಲಾಗಿ ನಿಲ್ಲಿಸುತ್ತೇನೆʼʼ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಿಸಿದರು. ಅಮೆರಿಕ ಅ‍ಧ್ಯಕ್ಷೀಯ ಚುನಾವಣೆಯಲ್ಲಿ(US presidential elections 2024) ಪ್ರಚಂಡ ಗೆಲುವು ಸಾಧಿಸಿದ ಬಳಿಕ ಅವರು ಮಾತನಾಡಿದರು. ʼʼಈ ಹಿಂದೆಯೂ ನಾವು ಐಎಸ್‌ಐಎಸ್‌ ಭಯೋತ್ಪಾದಕ ಸಂಘಟನೆಯನ್ನು ಮಟ್ಟ ಹಾಕುವುದು ಬಿಟ್ಟರೆ ಯಾವುದೇ ಯುದ್ದ ಮಾಡಿಲ್ಲʼʼ ಎಂದು ತಿಳಿಸಿದರು.

ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ಘೋಷಣೆಯನ್ನು ಪುನರುಚ್ಚರಿಸಿದ ಅವರು ಪ್ರತಿ ಕ್ಷಣವೂ ದೇಶಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು. ʼʼಇದು ಅಮೆರಿಕ ಹಿಂದೆಂದೂ ಕಂಡಿರದ ರಾಜಕೀಯ ಗೆಲುವು. ನಾನು ನಿಮಗಾಗಿ ಪ್ರತಿ ದಿನ, ಪ್ರತಿ ಕ್ಷಣ ಹೋರಾಡುತ್ತೇನೆ. ನಾನು ಎಂದಿಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲʼʼ ಎಂದು ಭರವಸೆ ನೀಡಿದರು.

ಇದೇ ವೇಳೆ ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಉದ್ಯಮಿ ಎಲಾನ್‌ ಮಾಸ್ಕ್‌ ಅವರನ್ನು ಡೊನಾಲ್ಡ್‌ ಟ್ರಂಪ್‌ ಕೊಂಡಾಡಿದರು. ಅವರನ್ನು ಶ್ರೇಷ್ಠ ಮತ್ತು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದರು. ಎಲಾನ್‌ ಮಾಸ್ಕ್‌ ಅವರು ಟ್ರಂಪ್‌ ಪರ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರು.

ಈ ವೇಳೆ ಟ್ರಂಪ್‌ ದೇಶವನ್ನು ಒಗ್ಗೂಡಿಸುವ ಕರೆ ನೀಡಿದರು. “ಕಳೆದ 4 ವರ್ಷಗಳಲ್ಲಿ ನಡೆದ ವಿಭಜನೆಗಳನ್ನು ಒಂದುಗೂಡಿಸುವ ಸಮಯ ಬಂದಿದೆ. ನಮ್ಮ ದೇಶವನ್ನು ನಂಬರ್‌ 1 ಮಾಡುತ್ತೇನೆ” ಎಂದು ತಿಳಿಸಿದರು. “ಬಲವಾದ ಮತ್ತು ಸಮೃದ್ಧ ಅಮೆರಿಕದ ಗುರಿ ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ” ಎಂದು ಘೋಷಿಸಿದರು. “ಪ್ರತಿದಿನ, ನನ್ನ ದೇಹದಲ್ಲಿ ಉಸಿರು ಇವರುವರೆಗೂ ನಾನು ನಿಮಗಾಗಿ ಹೋರಾಡುತ್ತೇನೆ” ಎಂದು ಟ್ರಂಪ್ ಹೇಳಿದರು.

ಈ ವಿಜಯವನ್ನು ಐತಿಹಾಸಿಕ ಎಂದು ಬಣ್ಣಿಸಿದ ಟ್ರಂಪ್, “ಇದು ಹಿಂದೆಂದೂ ನೋಡದ ಚಳುವಳಿಯಾಗಿ ಬದಲಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳುವಳಿ ಎಂದು ನಾನು ನಂಬುತ್ತೇನೆ. ನಾವು ನಮ್ಮ ಗಡಿಗಳನ್ನು ಸರಿಪಡಿಸಲಿದ್ದೇವೆ. ನಾವು ನಮ್ಮ ದೇಶದಲ್ಲಿ ಹದಗೆಟ್ಟ ಎಲ್ಲ ಪರಿಸ್ಥಿತಿಯನ್ನೂ ಸರಿಪಡಿಸಲಿದ್ದೇವೆʼʼ ಎಂದರು.

ಮೋದಿ ಅಭಿನಂದನೆ

ಪ್ರಚಂಡ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್‌(Donald Trump) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಮೋದಿ, ನಮ್ಮ ಜನರ ಒಳಿತಿಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ ಎಂದು ಆಶಯ ವ್ಯಕ್ತಪಡಿಸಿದ್ದಾರೆ. “ಐತಿಹಾಸಿಕ ಚುನಾವಣಾ ವಿಜಯಕ್ಕಾಗಿ ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸಿನ ಮೇಲೆ ನೀವು ನಿರ್ಮಿಸುತ್ತಿರುವಂತೆ, ಭಾರತ-ಅಮೆರಿಕ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಮ್ಮ ಜನರ ಒಳಿತಿಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ ”ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: US presidential elections 2024: ಭಾರತೀಯ ನಟಿ ಅಮೆರಿಕದಲ್ಲಿ ವೋಟಿಂಗ್‌; ನೆಟ್ಟಿಗರು ಫುಲ್‌ ಸರ್ಪ್ರೈಸ್‌!