Monday, 25th November 2024

Ranji Trophy: ಸತತ 2 ಶತಕಗಳನ್ನು ಸಿಡಿಸಿ ಬಿಸಿಸಿಐಗೆ ಸಂದೇಶ ರವಾನಿಸಿದ ಶ್ರೇಯಸ್‌ ಅಯ್ಯರ್‌!

Ranji Trophy: Shreyas Iyer scores back-to-back hundreds for Mumbai and Sends Loud Message To BCCI

ನವದೆಹಲಿ: ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಮುಂಬೈ ಸ್ಟಾರ್‌ ಬ್ಯಾಟ್ಸ್‌ಮನ್‌ ಶ್ರೇಯುಸ್‌ ಅಯ್ಯರ್‌ (Shreyas Iyer) ಪ್ರಸ್ತುತ ನಡೆಯುತ್ತಿರುವ 2024-25ರ ಸಾಲಿನ ರಣಜಿ ಟ್ರೋಫಿ (Ranji Trophy 2024-25) ಟೂರ್ನಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ತನ್ನನ್ನು ರಾಷ್ಟ್ರೀಯ ತಂಡಕ್ಕೆ ಕಡೆಗಣಿಸಿರುವ ಬಿಸಿಸಿಐ ಆಯ್ಕೆದಾರರಿಗೆ ತಿರುಗೇಟು ನೀಡಿದ್ದಾರೆ.

ಸದ್ಯ ಶರದ್‌ ಪವಾರ್‌ ಅಕಾಡೆಮಿಯಲ್ಲಿ ಒಡಿಶಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಅವರು ಸೆಂಚುರಿಯನ್ನು ಬಾರಿಸಿದ್ದಾರೆ. ಸತತ ಮೂರು ವರ್ಷಗಳ ಬಳಿಕ ಬಲಗೈ ಬ್ಯಾಟ್ಸ್‌ಮನ್‌ ಕಳೆದ ತಿಂಗಳು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕವನ್ನು ಸಿಡಿಸಿದ್ದರು. ತ್ರಿಪುರ ವಿರುದ್ದದ ಕೊನೆಯ ಟೆಸ್ಟ್‌ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರ ಹೊರತಾಗಿಯೂ ಶ್ರೇಯಸ್‌, ನೆಟ್ಸ್‌ನಲ್ಲಿ ಸಾಕಷ್ಟು ಅಭ್ಯಾಸವನ್ನು ನಡೆಸಿದ್ದರು. ಇದರ ಫಲವಾಗಿ ಮತ್ತೊಂದು ಶತಕವನ್ನು ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ನ 15ನೇ ಫ್ರಥಮ ದರ್ಜೆ ಶತಕ ಹಾಗೂ ಪ್ರಸಕ್ತ ಟೂರ್ನಿಯಲ್ಲಿ ಎರಡನೇ ಶತಕ ಇದಾಗಿದೆ.

92 ರನ್‌ ಗಳಿಸಿದ ಅಂಗ್‌ಕ್ರಿಶ್‌ ರಘುವಂಶಿ ಅವರ ಬ್ಯಾಟಿಂಗ್‌ ಬಲದಿಂದ ಮುಂಬೈ ತಂಡ ಈ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದಿತ್ತು. ಇದರ ನಡುವೆ ನಾಯಕ ಅಜಿಂಕ್ಯ ರಹಾನೆ ಗೋಲ್ಡನ್‌ ಡಕ್‌ಔಟ್‌ ಆಗಿದ್ದರೆ, ಆರಂಭಿಕ ಆಯುಷ್‌ ಮೆಲ್ಹೋತ್ರ ಕೇವಲ 18 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ನಂತರ ಜೊತೆಯಾದ ಶ್ರೇಯಸ್‌ ಅಯ್ಯರ್‌ ಮತ್ತು ಸಿದ್ದಾರ್ಥ್‌ ಮೆಲ್ಹೋರ್ಥ ಅವರು 150 ರನ್‌ಗಳ ಜತೆಯಾಟವನ್ನು ಆಡುವ ಮೂಲಕ ತಂಡವನ್ನು ಮೇಲೆತ್ತಿದ್ದಾರೆ.

ಬಿಸಿಸಿಐಗೆ ಸಂದೇಶ ರವಾನಿಸಿದ ಶ್ರೇಯಸ್‌ ಅಯ್ಯರ್‌

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರೆಣಿಯ ಬಳಿಕ ಶ್ರೇಯಸ್‌ ಅಯ್ಯರ್‌ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇದೀಗ ಸತತ ಎರಡು ಶತಕಗಳನ್ನು ಸಿಡಿಸಿದ ಬಳಿಕ ಬಿಸಿಸಿಐ ಆಯ್ಕದಾರರ ಗಮನವನ್ನು ಸೆಳೆದಿದ್ದಾರೆ. 2021ರಲ್ಲಿ ನ್ಯೂಜಿಲೆಂಡ್‌ ವಿರುದ್ದ ಕಾನ್ಪುರ್‌ ಟೆಸ್ಟ್‌ನಲ್ಲಿ ಕೊನೆಯ ಪ್ರಥಮ ದರ್ಜೆ ಶತಕವನ್ನು ಬಾರಿಸಿದ್ದರು. ಮತ್ತೊಂದೆಡೆ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಶ್ರೇಯಸ್‌ ಅಯ್ಯರ್‌ ಅವರ ಪಾಲಿಗೆ ವರದಾನವಾಗಬಹುದು.

ಕಳೆದ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರಿಂದ ಹೇಳಿಕೊಳ್ಳುವಂಥ ರನ್‌ಗಳ ಮೂಡಿ ಬಂದಿರಲಿಲ್ಲ. ಅವರು ಆರು ಇನಿಂಗ್ಸ್‌ಗಳಿಂದ ಎರಡು ಅರ್ಧಶತಕಗಳೊಂದಿಗೆ 154 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಪರಿಣಾಮವಾಗಿ ಅವರನ್ನು ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗಳ ಭಾರತ ತಂಡದಿಂದ ಕೈ ಬಿಡಲಾಗಿತ್ತು.

ಬಿಸಿಸಿಐ ಗುತ್ತಿಗೆಯಿಂದಲೂ ಹೊರಬಿದ್ದಿದ್ದ ಅಯ್ಯರ್‌

ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಅವರೊಂದಿಗೆ ಶ್ರೇಯಸ್‌ ಅಯ್ಯರ್‌ ಅವರನ್ನು ಈ ವರ್ಷದ ಆರಂಭದಲ್ಲಿ ಬಿಸಿಸಿಐ ಗುತ್ತಿಗೆಯಿಂದ ಕೈ ಬಿಡಲಾಗಿತ್ತು. ಈ ಇಬ್ಬರೂ ದೇಶಿ ಕ್ರಿಕೆಟ್‌ ಆಡಲು ನಿರಾಕರಿಸಿದ್ದ ಕಾರಣ ಅವರನ್ನು ಬಿಸಿಸಿಐ ಗುತ್ತಿಗೆಯಿಂದ ಕಡೆಗಣಿಸಲಾಗಿತ್ತು. ಅಂದಹಾಗೆ ಗಾಯದ ಕಾರಣ ಶ್ರೇಯಸ್‌ ಅಯ್ಯರ್‌ ಅವರು ಮುಂಬೈ ತಂಡದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು.

ಈ ಸುದ್ದಿಯನ್ನು ಓದಿ: Shreyas Iyer: ಕೆಕೆಆರ್‌ನಿಂದ ಶ್ರೇಯಸ್‌ ಅಯ್ಯರ್‌ ಕೈ ಬಿಡಲು ಅಸಲಿ ಕಾರಣ ಇದು!