Friday, 20th September 2024

ದೌರ್ಜನ್ಯ ತಡೆಗಟ್ಟುವಲ್ಲಿ ಹೆತ್ತವರ ಪಾತ್ರ ಏನು ?

ಅಭಿವ್ಯಕ್ತಿ

ಕೀರ್ತನಾ ವಿ.ಭಟ್‌

ಸಮಾಜದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚುತ್ತಲೇ ಇದೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನೂ ಕೆಲವು ಪ್ರಕರಣಗಳು ಕತ್ತಲಲ್ಲೇ ಉಳಿದು ಬಿಡುತ್ತವೆ. ಬೆಳಕಿಗೆ ಬಂದ ಪ್ರಕರಣಗಳಿಗಿಂತ ಕತ್ತಲಲ್ಲಿ ಮುಚ್ಚಿ ಹೋದ ಪ್ರಕರಣಗಳೇ ಹೆಚ್ಚು. ಜಾಗತಿಕವಾಗಿ ಭಾರತವು, ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಸ್ತುವಿನ (ಸಿಎಸ್‌ಎಎಮ್) ಪೂರೈಕೆಯಲ್ಲಿ ಶೇಕಡಾ 11.7ರಷ್ಟು ಕೊಡುಗೆ ನೀಡಿ ಕಳಂಕದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಪಾಕಿಸ್ತಾನವು ಶೇಕಡಾ 6.8 ವರದಿಯಿಂದ ಎರಡನೇ ಸ್ಥಾನದಲ್ಲಿದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ದೇಶದಲ್ಲಿ ಅತೀ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ ವರದಿಯಾಗಿತ್ತು. ಅದರಲ್ಲಿ ಹೆಚ್ಚಿನವು ದಕ್ಷಿಣ ಭಾರತದ ರಾಜ್ಯಗಳಲ್ಲಿ ವರದಿಯಾಗಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಮಕ್ಕಳ ಮೇಲಿನ ಕಿರಿಕುಳ
ವರದಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಕಾರ ರಾಜ್ಯವು 312 ಮಕ್ಕಳ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ.

ಲೈಂಗಿಕ ಕಿರುಕುಳ ಮಾತ್ರವಲ್ಲದೇ ದೈಹಿಕ ಕಿರುಕುಳ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಮತ್ತು ಕಳ್ಳ ಸಾಗಾಣೆಯ ಪ್ರಕರಣಗಳೂ ಬೆಳಕಿಗೆ ಬಂದಿವೆ. ಕರ್ನಾಟಕದ ನಂತರ ನೆರೆ ರಾಜ್ಯಗಳಾದ ತಮಿಳುನಾಡಿನಲ್ಲಿ 224 ಪ್ರಕರಣಗಳು, ಕೇರಳದಲ್ಲಿ 181, ಆಂಧ್ರಪ್ರದೇಶ 129 ಮತ್ತು ತೆಲಂಗಾಣದಲ್ಲಿ 10 ಪ್ರಕರಣಗಳು ದಾಖಲಾಗಿವೆ.

ಸಾಂಕ್ರಾಮಿಕ ಸಂದರ್ಭವನ್ನು ಲಾಭಪಡಿಸಿಕೊಂಡು ಅನೇಕರು ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ವಿಷಾದ ಕರ ಸಂಗತಿ. ‘ಅವರು ಏನು ಮಾಡುತ್ತಿದ್ದಾರೆ ಎಂದು ಅರ್ಥವಾಗಲೂ ನನಗೆ ಒಂದು ವರ್ಷ ಬೇಕಾಯಿತು. ತಕ್ಷಣ ನನ್ನ ತಂದೆಗೆ ನಾನು ಇಮೇಲ್ ಬರೆದು ನನ್ನನ್ನು ನಾನು ಕೆಟ್ಟ ಪರಿಸ್ಥಿತಿಯಿಂದ ಪಾರು ಮಾಡಿಕೊಂಡೆನು ಎಂದು ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಇತ್ತೀಚೆಗೆ ಬರೆದುಕೊಂಡಿದ್ದರು’. ನಾನು ಹದಿಹರೆಯದವನಾಗಿ ದ್ದಾಗ ಮೊದಲ ಬಾರಿಗೆ ಲೈಂಗಿಕತೆಯನ್ನು ಹೊಂದಿದ್ದೆ, ನಾನು ಹದಿನೆಂಟು ವರ್ಷದವನಾಗಿದ್ದಾಗ ಒಬ್ಬ ಮನುಷ್ಯನಿಂದ ಕಿರುಕುಳಕ್ಕೆ ಒಳಗಾಗಿ, ಒಂದು ವ್ಯಾನ್ ಹಿಂಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದೆ, ಎಂದು ಅಮೆರಿಕದ ನಟ ಮ್ಯಾಥ್ಯೂ ಮೆಕೊನೌಹೆ ತನ್ನ ಹೊಸ ಆತ್ಮಚರಿತ್ರೆಯಲ್ಲಿ ತಿಳಿಸಿದ್ದಾರೆ.

ಇವರು ತಮ್ಮ ಬಾಲ್ಯದಲ್ಲೇ ಲೈಂಗಿಕ ಕಿರುಕುಳಕ್ಕೆ ಒಳಗಾದವರು. ಇಂದು ನಮ್ಮ ಸಮಾಜದಲ್ಲಿ ಇರಾ ಮತ್ತು ಮ್ಯಾಥ್ಯೂನಂತೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಕಷ್ಟಗಳನ್ನು ಏದುರಿಸುತ್ತಿರುವ ಹಲವಾರು ಮಕ್ಕಳು ಇದ್ದಾರೆ. ಇಂತಹ ಸಂದರ್ಭದಲ್ಲಿ
ಕೆಲವೊಂದು ಮಕ್ಕಳು ತಮಗೆ ಏನಾಗುತ್ತಿದೆ ಎಂದು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇನ್ನು ಕೆಲವರು ತಮಗೆ ತಿಳಿದಿ ದ್ದರೂ ಸಹ ಏನು ಮಾಡಲೂ ಸಾಧ್ಯವಾಗದೆ ಬಲಹೀನರಾಗಿರುತ್ತಾರೆ. ಇಂತಹ ಘಟನೆಗಳಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಹಾನಿಗಳನ್ನು ಸರಿಪಡಿಸುವ ಕೆಲಸ ಪೋಷಕರಿಂದ ಆಗಬೇಕು. ಇದಕ್ಕಾಗಿ ಪೋಷಕರು ಏನು ಮಾಡಬಹುದು?

ಮಕ್ಕಳಿಗೆ ಉತ್ತಮ ವಾತಾವರಣವನ್ನು ರೂಪಿಸಿಕೊಡಿ: ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಗಂಡು ಹೆಣ್ಣು ಎಂಬ ಭೇದಲ್ಲದೆ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ಮಾಹಿತಿ ನೀಡಬೇಕು. ಮಕ್ಕಳ ಅಭಿರುಚಿಗೆ ಹೊಂದುವಂತಹ ಪರಿಸರ ವನ್ನು ರೂಪಿಸಿಕೊಟ್ಟು, ಯಾವುದೇ ಅಂಜಿಕೆಯಿಲ್ಲದೇ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವಂತಹ ಗುಂಪು ಮತ್ತು ವಾತಾ ವರಣವನ್ನು ಸೃಷ್ಟಿಸಬೇಕು. ಯಾವುದೇ ಸಂದರ್ಭವಿರಲಿ ಅವರ ರಕ್ಷಣೆಗೆ ಹೆತ್ತವರು ಎಂದಿಗೂ ಇರುತ್ತಾರೆ ಎಂಬ ನಂಬಿಕೆ ಅವರಲ್ಲಿ ಮೂಡುವಂತೆ ಮಾಡಬೇಕು.

ಆತ್ಮವಿಶ್ವಾಸ ಬೆಳೆಸಿ: ಲೈಂಗಿಕ ಕಿರುಕುಳ ವಯಸ್ಸು, ಲಿಂಗ ಅಥವಾ ಸಂಸ್ಕೃತಿಯನ್ನು ನೋಡುವುದಿಲ್ಲ. ಹೆಚ್ಚಿನ ಸಮಯದಲ್ಲಿ ಅಪರಾಧಿಗಳು ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಕೆಲವೊಮ್ಮೆ ಈ ಕಾರಣಕ್ಕಾಗಿ ಮಕ್ಕಳು ತಮಗೆ ಆಗುತ್ತಿರುವ ಕಷ್ಟಗಳನ್ನು ಯಾರೊಂದಿಗೂ ಚರ್ಚಿಸದೆ ಆಘಾತವನ್ನು ಒಪ್ಪಿಕೊಳ್ಳುತ್ತಾರೆ. ಅಪರಾಧಿಯು ಕುಟುಂಬಕ್ಕೆ ಸೇರಿದವನಾಗಿದ್ದರೆ ಅವನು ಅಥವಾ ಅವಳು ತನ್ನ ಕ್ರಿಯೆಗಳಲ್ಲಿ ಕುಟುಂಬವನ್ನು ಕುಶಲತೆಯಿಂದ ತೊಡಗಿಸಿಕೊಳ್ಳಬಹುದು ಮತ್ತು ಈ ಕಾರಣದಿಂದಾಗಿ ಮಗುವಿನ ದುರುಪಯೋಗದ ಬಗ್ಗೆ ವ್ಯಕ್ತ ಪಡಿಸಬೇಕಾದರೆ ಅವನು ಅಥವಾ ಅವಳು ನನ್ನನ್ನು ತಾನು ಸಮರ್ಥಿಸಿಕೊಳ್ಳುವಲ್ಲಿ ಸಫಲರಾಗ ಬಹುದು. ಇಂತಹ ಸಂದರ್ಭವನ್ನು ಎದುರಿಸುವಂಥ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಹೆತ್ತವರ ಪ್ರೀತಿ ಮತ್ತು ಭರವಸೆಯ ಮಾತುಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಸಾಧ್ಯ.

ಕಷ್ಟದಿಂದ ಪಾರುಗುವ ಕೌಶಲ್ಯ ಬೆಳೆಸಿ: ಮಕ್ಕಳನ್ನು ದುರುಪಯೋಗ ಅಥವಾ ಲೈಂಗಿಕ ಕಿರುಕುಳದಿಂದ ಪಾರುಮಾಡಲು ಇಂತಹದ್ದೇ ಮಾರ್ಗ ಎಂದು ಸಾಬೀತಾದ ಸಿದ್ದ ಸೂತ್ರಗಳಿಲ್ಲ. ಆದರೆ ಕೆಲವು ವಿಧಾನಗಳಿಂದ ನಾವು ಅಪಾಯವನ್ನು ಕಡಿಮೆ ಮಾಡಬಹುದು. ಮಕ್ಕಳಿಗೆ ಪ್ರಪಂಚ ಜ್ಞಾನ ತಿಳಿಯುತ್ತಿದ್ದಂತೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಬಗ್ಗೆ ಪೋಷಕರು ತಿಳಿಸ ಬೇಕು. ಏಕೆಂದರೆ ಮಕ್ಕಳಿಗೆ ಅವರ ಪರಿಸರದಲ್ಲಿ ಹೆಚ್ಚಿನ ವಿಶ್ವಾಸಾರ್ಹ ಜನರು ಪೋಷಕರಾಗಿರುತ್ತಾರೆ. ದೇಹದ ಭಾಗಗಳು ಮತ್ತು ಯಾರೊಬ್ಬರು ಬೇರೆಯವರ ದೇಹದ ಭಾಗವನ್ನು ಮುಟ್ಟಬಾರದು ಎಂದು ಅರಿವು ಮೂಡಿಸಬೇಕು.

ಮಕ್ಕಳನ್ನು ಪ್ರೀತಿಸಿ: ಮೊದಲಿಗೆ ನಿಮ್ಮ ಮಗು ಪ್ರೀತಿ, ವಿಶ್ವಾಸ ಮತ್ತು ಬೆಂಬಲದ ಅನುಭವ ಪಡೆಯುತ್ತಿದೆ ಎಂದು ಖಾತ್ರಿಪಡಿಸಿ ಕೊಳ್ಳಿ. ಮುಖ್ಯವಾದ ವಿಷಯವೆಂದರೆ ಹೆತ್ತವರು ಮಗುವನ್ನು ಪ್ರೀತಿಸಬೇಕು. ಮಕ್ಕಳು ಹೆತ್ತವರಿಂದ ನಿಸ್ವಾರ್ಥ ಪ್ರೀತಿಯನ್ನು ಬಯಸುತ್ತಾರೆ. ನೀವು ಅವರನ್ನು ಪ್ರೀತಿಸಿದಾಗ ಅವರು ನಿಮ್ಮನ್ನೂ ಪ್ರೀತಿಸುತ್ತಾರೆ. ಮಕ್ಕಳು ಏನೇ ಸರಿ ತಪ್ಪು ಮಾಡಿದರೂ, ಅದನ್ನು ಪೋಷಕರಲ್ಲಿ ಹೇಳಿಕೊಳ್ಳುವಂಥ ನಂಬಿಕೆಯನ್ನು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಲ್ಲಿ ಮೂಡುವಂತೆ ಮಾಡಬೇಕು. ಮಕ್ಕಳಿಗೆ ಸೂಕ್ತ ವಾತಾವರಣ, ಪ್ರೀತಿ, ಆತ್ಮವಿಶ್ವಾಸ, ನಂಬಿಕೆ ಬೆಳೆಸುವಂತೆ ಮಾಡುವುದು ಹೆತ್ತವರ ಕರ್ತವ್ಯ. ಒಂದುವೇಳೆ ಮಕ್ಕಳು ತಿಳಿಯದೆ ತಪ್ಪು ಮಾಡಿದರೂ ಸಹ ಪೋಷಕರು ಅವರ ಸಹಾಯಕ್ಕೆ  ನಿಲ್ಲುತ್ತಾರೆ ಎನ್ನುವ ಭರವಸೆ ಅವರಲ್ಲಿ ಮೂಡುವಂತೆ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕುಟುಂಬಗಳಲ್ಲಿ ಇಬ್ಬರೂ ಪೋಷಕರು ಕೆಲಸ ಮಾಡುತ್ತಿರುತ್ತಾರೆ. ಅವರ ಬಿಡುವಿಲ್ಲದ ವೇಳಾ ಪಟ್ಟಿಯೊಂದಿಗೆ ಮಕ್ಕಳ ಕಾಳಜಿ ವಹಿಸುವಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಮಕ್ಕಳ ಪರಿಪಾಲನೆ ಒಂದು ಭಾರವೆಂದು ಭಾವಿಸದೆ, ತನ್ನ ಕರ್ತವ್ಯ ಎಂದು ಪರಿಗಣಿಸಿದಾಗ ಮಾತ್ರ ಜವಬ್ದಾರಿಯುತರಾದ ಪೋಷಕರಾಗಲೂ ಸಾಧ್ಯ.
ಅಲ್ಲದೇ ತಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಪ್ರತಿಯೊಂದು ಪೋಷಕರ ಕರ್ತವ್ಯ ವಾಗಿರುತ್ತದೆ.