Thursday, 21st November 2024

Pradeep Eshwar: ಗುರಿಯತ್ತ ಒಲವು, ಪೋಷಕರ ಬಲವಿದ್ದರೆ ಕ್ರೀಡಾ ಸಾಧಕರಾಗಬಹುದು: ಶಾಸಕ ಪ್ರದೀಪ್ ಈಶ್ವರ್

Pradeep Eshwar

ಚಿಕ್ಕಬಳ್ಳಾಪುರ: ಶಾಲಾ ಕಾಲೇಜು ದಿನಗಳಲ್ಲಿಯೇ ನಿರ್ದಿಷ್ಟ ಗುರಿಯಿಟ್ಟುಕೊಂಡು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಜತೆಗೆ, ಸಾಧನೆಯ ಹಾದಿಗೆ ನೀರೆರೆಯಲು ಪೋಷಕರೂ ಕೂಡ ಬೆಂಬಲವಾಗಿ ನಿಂತಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ವಿಫುಲ ಅವಕಾಶಗಳಿವೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದರು.

ನಗರ ಹೊರವಲಯದ ಮಹಿಳಾ ಕಾಲೇಜಿನಲ್ಲಿ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೌಂಟ್ ಎವರೆಸ್ಟ್ ಶಿಖರವನ್ನೇರಿದ ತೇನ್‌ಸಿಂಗ್ ಶೇರ್ಫಾ ತಾಯಿಯ ಮಾತುಗಳಿಂದ ಪ್ರೇರಣೆಗೊಂಡೇ ಶಿಖರಾರೋಹಣದ ಸಾಧನೆ ಮಾಡಿದ್ದು ಇಂದಿಗೆ ಇತಿಹಾಸ. ಹಾರ್‌ಮೋನಲ್ ಡಿಫಿಸಿಯೆನ್ಸಿ ಸಿಂಡ್ರೋಮ್ ಕಾಯಿಲೆಯಿಂದ ನರಳುತ್ತಿದ್ದರೂ, ಇಂಜೆಕ್ಷನ್ ತೆಗೆದುಕೊಂಡು ನೊಂದಿದ್ದರೂ ಎದೆಗುಂದದೆ ಕ್ರೀಡಾಪಟುವಾಗಲೇ ಬೇಕು ಎಂದು ಮುನ್ನುಗ್ಗಿದ್ದರಿಂದಲೇ ಲಿಯೋನಲ್ ಮೆಸ್ಸಿ ಅಪ್ರತಿಮ ಸಾಧನೆ ಮಾಡಿದರು. ಇವರ ಬದುಕು ನಿಮಗೆ ಮಾದರಿಯಾಗಬೇಕಿದೆ ಎಂದರು.

ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರು ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಎಸ್‌ಎಸ್‌ಎಲ್‌ಸಿ ಪಾಸಾಗಲು ಹೆಣಗಾಡಿದ ಸಚಿನ್ ತೆಂಡೂಲ್ಕರ್ ಇಂದು ಮಹಾರಾಷ್ಟ್ರ ಶಾಲಾ ಕಾಲೇಜು ಪಠ್ಯಕ್ರಮದ ವಸ್ತುವಾಗಿದ್ದಾರೆ. ಪಿ.ವಿ.ಸಿಂಧೂ ತರ ಒಲಿಂಪಿಕ್ಸ್ ಸಾಧನೆ ಮಾಡಿದವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುವಾಗ ಪ್ರತಿಯೊಬ್ಬ ಪೋಷಕರಿಗೂ ನನ್ನ ಮಗಳು ಹೀಗೆ ಆಗಬಾರದ ಎನಿಸುವುದು ಸಹಜ. ಆದರೆ ನಮ್ಮ ಪೋಷಕರು ಮಕ್ಕಳು ಅವರಿಗೆ ತಿಳಿಸದೆ ಏಣಿಯ ನಾಲ್ಕು ಮೆಟ್ಟಿಲು ಹತ್ತಿದರೆ ಸಾಕು ಮಗುವಿನ ಮೈಮೇಲೆ ಬಾಸುಂಡೆಗಳ ಚಿತ್ತಾರ ಬಿಡಿಸಿ ಹತ್ತುವ ಆಸಕ್ತಿಯನ್ನೇ ಕೊಂದು ಬಿಡುತ್ತಾ ಧೈರ್ಯದ ಬದಲಿಗೆ ಭಯಭೀತಿಯನ್ನು ಬಿತ್ತುತ್ತಾರೆ. ಹೀಗಾದರೆ ಕ್ರೀಡಾಸಕ್ತಿ ಹೇಗೆ ಮೂಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾವ್ಯಾರೂ ಕೂಡ ಶ್ರೀಮಂತ ಮನೆತನದಿಂದ ಬಂದವರಲ್ಲದಿದ್ದರೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ತೊಡಗಿದ್ದೇವೆ ಎಂದು ಹೇಳುತ್ತಿರುವುದು ಸಂತೋಷ ತಂದಿದೆ. A Daughter is Not Equal to Tension, But Ten Sons ಎಂಬುದು ನೆನಪಿರಲಿ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಸೋತವರು ಕುಗ್ಗುವ ಅಗತ್ಯವಿಲ್ಲ. ಶೇ 90 ಅಂಕಗಳಿದ್ದವರು ವೈದ್ಯರಾಗಬಹುದು, ಎಂಜಿನಿಯರ್ ಆಗಬಹುದು. ಕೇವಲ ಪಾಸಾದವರು ಸ್ವಾಮೀಜಿಗಳಾಗಿ ಎಲ್ಲರನ್ನೂ ಕಾಲಿಗೆ ಬೀಳಿಸಿಕೊಳ್ಳಬಹುದು. ಆದರೆ ಶೇ.60 ಅಂಕಗಳಿಸಿದವರು ರಾಜಕಾರಣಿಗಳಾಗಿ ಇವರೆಲ್ಲರನ್ನೂ ಆಳಬಹುದು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡುವ ಉದ್ದೇಶದಿಂದ ನವೆಂಬರ್ 4 ರಿಂದ ಡಿಸೆಂಬರ್ ಕೊನೆಯವರೆಗೆ ಪ್ರತಿದಿನ 48 ಸರಣಿ ಪರೀಕ್ಷೆಗಳನ್ನು ಪರಿಚಯಿಸಿದ್ದೇನೆ. ಕಾರಣ ಸರಕಾರಿ ಶಾಲಾ ಕಾಲೇಜು ಆಸ್ಪತ್ರೆಗಳು ನನ್ನ ಪಾಲಿಗೆ ದೇವಾಲಯಗಳು. ಇಲ್ಲಿ ಸುಧಾರಣೆ ಆದರೆ ಬಡವರ ಬದುಕು ಸುಧಾರಣೆ ಕಾಣಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೀವನದ ಮುಖ್ಯಘಟ್ಟವಾದ್ದರಿಂದ ಇತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಇದಕ್ಕೆ ಇಲ್ಲಿನ ಬಿಇಒ,ಡಿಡಿಪಿಐ ಅವರ ಸಹಕಾರ, ಶಿಕ್ಷಕರ ಸಹಕಾರ ಇರಲಿದೆ ಎಂದರು.

ನಾನು ಶಾಸಕನಾಗಿ ಆಯ್ಕೆಯಾಗಿರಬಹುದು, ಇದು ಅಧಿಕಾರವನ್ನು ಸವಿಯಲು ಅಲ್ಲ ಬದಲಿಗೆ ಜನರು ನನ್ನ ಮೇಲಿಟ್ಟಿರುವ ನಿರೀಕ್ಷೆಗಳು ಹುಸಿಯಾಗದಂತೆ ನಡೆದುಕೊಳ್ಳುವ ಭಾರ ಎಂದು ಭಾವಿಸಿದ್ದೇನೆ. ಮುಂದಿನ ವರ್ಷ ಇಲ್ಲಿ ಬಿಎಸ್‌ಸಿ ಪದವಿ ಪ್ರಾರಂಭಿಸಲು ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ. 4 ಕೋಟಿ ವೆಚ್ಚದಲ್ಲಿ 10 ಕೊಠಡಿಗಳ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ನಿಮಗೆ ಉತ್ತಮ ಶಿಕ್ಷಣ ಪಡೆಯಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಶಾಸಕನಾಗಿ ಮಾಡಿಕೊಡಲು ಸದಾ ಸಿದ್ಧನಿದ್ದೇನೆ. ನೀವು ನಿಮ್ಮ ನಿಮ್ಮ ಪದವಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದರೆ ಅಷ್ಟೇಸಾಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರನ್ನು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರೀಡಾಪಟು ಎಂ.ಆರ್.ಪೂಜಿತ, ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಪ್ರಾಧ್ಯಾಪಕರಾದ ಹರೀಶ್, ಅಶ್ವತ್ಥನಾರಾಯಣ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಮಹಿಳಾ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.

ರಾಜ್ಯದ ಮಾದರಿ ಶಾಸಕನಾಗುವ ಹಂಬಲದಿಂದ ಕ್ಷೇತ್ರದ ಅಭಿವೃದ್ಧಿಗೆ ಕೈ ಹಾಕಿದ್ದೇನೆ

ಚಿಕ್ಕಬಳ್ಳಾಪುರ: ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಶಾಸಕರ ಪೈಕಿ ಚಿಕ್ಕಬಳ್ಳಾಪುರದ ಎಂಎಲ್‌ಎ ಭಿನ್ನವಾಗಿ ಕಾಣಬೇಕು. ಈ ಮಹದಾಸೆಯನ್ನು ಇಟ್ಟುಕೊಂಡೇ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದೇನೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ, ಬಡವರಿಗೆ ಏನೆಲ್ಲಾ ಮಾಡಬೇಕೋ ಅದನ್ನು ಹಂತಹMತವಾಗಿ ಮಾಡಿಕೊಂಡು ಸಾಗಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರದ ಸೆಂಟ್ ಜೋಸೆಫ್ ಶಾಲೆಯ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಿ ಬಡಮಕ್ಕಳ ಬಾಳಲ್ಲಿ ಬೆಳಕು ಮೂಡಿಸಲು ನಾನಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಶಿಕ್ಷಕರು ಮನಸ್ಸು ಮಾಡಿದರೆ ಅಸಾಧ್ಯವಾದ್ದು ಯಾವುದೂ ಇಲ್ಲ ಎಂಬುದು ನನ್ನ ನಂಬಿಕೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಲು ನನ್ನನ್ನು ಕರೆದಿರುವುದು ಸಂತೋಷ ತಂದಿದೆ. ಕಾರಣ ಪೆರೇಸಂದ್ರ ಪ್ರೌಢಶಾಲೆಯಲ್ಲಿ ಓದುವಾಗ ನಾನು ಕೂಡ ಕ್ವಿಜ್ ಮೂಲಕ ತಾಲೂಕು ಮಟ್ಟಕ್ಕೆ ಸ್ಪರ್ಧಿಯಾಗಿ ಬಂದಿದ್ದೆ ಎಂದು ಸ್ಮರಿಸಿದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಯಾಂತ್ರಿಕವಾಗಿ ಮಾಡಿ ಕೈತೊಳೆದುಕೊಳ್ಳದೆ, ಮಕ್ಕಳಲ್ಲಿ ಅಡಗಿರುವ ನಿಜವಾದ ಪ್ರತಿಭಾನ್ವೇಷಣೆ ಮಾಡುವ ವೇದಿಕೆ ಆಗಬೇಕಿದೆ. ತಾಲೂಕಿನ ನಾನಾ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳೇ ಇಲ್ಲಿ ಬರುವ ಕಾರಣ ತೀರ್ಪುಗಾರರು ಯಾವುದೇ ಪಕ್ಷಪಾತ ಮಾಡದೆ ಅರ್ಹರನ್ನು ಜಿಲ್ಲಾ ಮಟ್ಟಕ್ಕೆ ಆರಿಸಿ ಕಳಿಸಬೇಕಿದೆ. ನಿಮ್ಮ ಪ್ರದೀಪ್ ಈಶ್ವರ್ ತಾನು ದುಡಿದ ಹಣದಲ್ಲಿ ಮಕ್ಕಳಿಗೆ ಬಟ್ಟೆ, ಮಹಿಳೆಯರಿಗೆ ಅರಿಶಿಣ ಕುಂಕುಮ, ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿದಾರೆಯೇ ವಿನಃ ರಾಜಕಾರಣದಲ್ಲಿ ಹಣ ಮಾಡಿ ಇದನ್ನೆಲ್ಲಾ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಬಿಇಒ ನರೇಂದ್ರಕುಮಾರ್, ಗಂಗರೇಕಾಲುವೆ ನಾರಾಯಣಸ್ವಾಮಿ, ಶಿಕ್ಷಕರ ಸಂಘದ ನಾರಾಯಣಸ್ವಾಮಿ, ಕೆ.ಜಿ.ಶ್ರೀನಿವಾಸ್, ಪಾತಮುತ್ತಕಪಲ್ಲಿ ಚಲಪತಿಗೌಡ, ಶಶಿಧರ್, ರಾಜೇಂದ್ರಬಾಬು, ನರೇಶ್, ನಾಗೇಶ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.