Thursday, 7th November 2024

Akbaruddin Owaisi: ಇನ್ನೂ15 ನಿಮಿಷ ಬಾಕಿ ಇದೆ… ದಶಕದ ಹಿಂದಿನ ವಿವಾದಕ್ಕೆ ಮತ್ತೆ ಕಿಚ್ಚು ಹಚ್ಚಿದ್ರಾ ಅಕ್ಬರುದ್ದೀನ್‌ ಓವೈಸಿ?

Akbaruddin Owaisi

ಔರಂಗಾಬಾದ್: ಕೇವಲ 15 ನಿಮಿಷ ಪೊಲೀಸರು ಸುಮ್ಮನಿದ್ದರೆ ಸಾಕು ಯಾರು ಶಕ್ತಿಶಾಲಿ ಎಂಬುದನ್ನು ತೋರಿಸುತ್ತೇವೆ ಎಂದು ದಶಕದ ಹಿಂದೆ ಪ್ರಚೋದನಾತ್ಮಕ ಹೇಳಿಕೆ ಮೂಲಕ ಸುದ್ದಿ ಮಾಡಿದ್ದ AIMIM ಮುಖಂಡ, ತೆಲಂಗಾಣ ಶಾಸಕ ಅಕ್ಬರುದ್ದೀನ್‌ ಓವೈಸಿ(Akbaruddin Owaisi) ಇದೀಗ ಮತ್ತೆ ಅದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಮತ್ತೆ ಭಾರೀ ವಿವಾದಕ್ಕೆ ಕಿಚ್ಚು ಹಚ್ಚಿದ್ದ ವಿಚಾರವನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಇನ್ನು ಓವೈಸಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಔರಂಗಾಬಾದ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಕ್ಬರುದ್ದೀನ್‌ ಓವೈಸಿ, ಇನ್ನೇನು 15 ನಿಮಿಷ ತಾಳ್ಮೆಯಿಂದ ಇರಿ. ತಮ್ಮ ರ್ಯಾಲಿಗೆ ನೀಡಿರುವ ಅವಧಿ ಮುಗಿಯಲು ಇನ್ನೂ 15ನಿಮಿಷ ಇದೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ಜನ ಜೋರಾಗಿ ಕಿರುಚಿ ಕೇಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಓವೈಸಿ ಹೇಳಿಕೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಕ್ಬರುದ್ದೀನ್‌ ಓವೈಸಿ ಅವರು 15ನಿಮಿಷಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ಪರೋಕ್ಷವಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಅಲ್ಲದೇ ಕೆಲವು ಬಿಜೆಪಿ ನಾಯಕರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವರು ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಯಾವುದೇ ಸಿದ್ಧಾಂತ ಉಳಿದಿಲ್ಲ ಎಂದು ಆರೋಪಿಸಿದರು ಮತ್ತು ಒಡೆದು ಆಳುವ ರಾಜಕೀಯದಲ್ಲಿ ತೊಡಗಿರುವವರು ರಾಜ್ಯ ಆಳುತ್ತಿದ್ದಾರೆ. ಅವರು ಕೋಮುವಾದಿಗಳು ಎಂದು ಟೀಕಿಸಿದ್ದಾರೆ.

ನಮ್ಮ ಪಕ್ಷ (ಎಐಎಂಐಎಂ) ಮುಸ್ಲಿಂ, ದಲಿತರು, ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮರಾಠರ ಪರ ಧ್ವನಿ ಎತ್ತುತ್ತದೆ. ನಾನು ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ. ಗುಂಪು ಘರ್ಷಣೆ, ‘ಘರ್ ವಾಪ್ಸಿ’, ಟೋಪಿ ಮತ್ತು ಗಡ್ಡದ ಕುರಿತು ಪ್ರವಚನ ಮತ್ತು ಹಿಂದೂ ಮತ್ತು ಮುಸ್ಲಿಮರ ನಡುವೆ ಘರ್ಷಣೆ ಇಂತಹವುಗಳು ದೇಶವನ್ನು ದುರ್ಬಲಗೊಳಿಸುವುದಿಲ್ಲವೇ?” ಎಂದು ಪ್ರಶ್ನಿಸಿದರು.

2013ರಲ್ಲಿ ಅಕ್ಬರುದ್ದೀನ್‌ ಹೇಳಿದ್ದೇನು?

2013 ರಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅವರು, 100 ಕೋಟಿ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರು 25 ಕೋಟಿ ಜನಸಂಖ್ಯೆ ಇದ್ದರೂ ಯಾರಿಗೂ ಹೆದರಲ್ಲ.ಕೇವಲ 15 ನಿಮಿಷ ಪೊಲೀಸರು ಸುಮ್ಮನಿದ್ದರೆ ಸಾಕು ಯಾರು ಶಕ್ತಿಶಾಲಿ ಎಂಬುದನ್ನು ತೋರಿಸಲು ಎಂದು ಹೇಳುವ ಮೂಲಕ ಪ್ರಚೋದಾತ್ಮಕ ಹೇಳಿಕೆ ನೀಡಿದ್ದರು. ಇದರು ದೇಶಾದ್ಯಂತ ಸುದ್ದಿಯಾಗಿತ್ತು.

ಈ ಸುದ್ದಿಯನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಓವೈಸಿಯಿಂದ ಜೈ ಪ್ಯಾಲೆಸ್ಟೈನ್ ಘೋಷಣೆ