Thursday, 7th November 2024

Kash Patel: ಭಾರತೀಯ ಮೂಲದ ಕಾಶ್ ಪಟೇಲ್ ಡೋನಾಲ್ಡ್ ಟ್ರಂಪ್‌ನ ಗಮನ ಸೆಳೆದಿದ್ದು ಹೇಗೆ? ಇವರ ಹಿನ್ನೆಲೆ ಏನು?

Kash Patel

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಆಯ್ಕೆಯಾದ ಬಳಿಕ ಇದೀಗ ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಸಿಐಎ (Central Intelligence Agency)ಯ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್‌ (Kash Patel) ಆಯ್ಕೆಯಾಗುವ ನಿರೀಕ್ಷೆ ಇದೆ. ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರ ಅವಧಿಯಲ್ಲಿ ರಕ್ಷಣಾ ಮತ್ತು ಗುಪ್ತಚರ ವಿಭಾಗದ ವಿವಿಧ ಉನ್ನತ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿದ ರಿಪಬ್ಲಿಕನ್ ಹೌಸ್ ನ ಮಾಜಿ ಸಿಬ್ಬಂದಿ ಕಾಶ್ ಪಟೇಲ್ ಹೆಸರು ಈಗ ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಸಿಐಎನ ನಿರ್ದೇಶಕ ಹುದ್ದೆಗೆ ಕೇಳಿ ಬರುತ್ತಿದೆ.

ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲೂ ಪಾಲ್ಗೊಂಡಿದ್ದ ಕಾಶ್ ಪಟೇಲ್ ಅವರು ರಕ್ಷಣಾ ಕಾರ್ಯದರ್ಶಿಯಾಗಿದ್ದ ಕ್ರಿಸ್ಟೋಫರ್ ಮಿಲ್ಲರ್ ಅವರ ತಂಡದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಯಾರು ಈ ಕಾಶ್ ಪಟೇಲ್ ?

1980ರ ಫೆಬ್ರವರಿ 25ರಂದು ನ್ಯೂಯಾರ್ಕ್‌ಗೆ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತ್ ನ ವಡೋದರ ಮೂಲದ ದಂಪತಿಯ ಮಗನಾಗಿ ಜನಿಸಿದ ಕಾಶ್ ಪಟೇಲ್ ಅವರ ಮೂಲ ಹೆಸರು ಕಶ್ಯಪ್‌ ಪಟೇಲ್‌. ರಿಚ್ಮಂಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ಅವರು ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಕಾನೂನು ಪದವಿಯನ್ನು ಪಡೆದರು.

ವೃತ್ತಿ ಜೀವನದ ಆರಂಭದಲ್ಲಿ ಉನ್ನತ ಕಾನೂನು ಸಂಸ್ಥೆಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಕಾಶ್, ಸುಮಾರು ಒಂಬತ್ತು ವರ್ಷಗಳ ಕಾಲ ಮಿಯಾಮಿ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. ಕೊಲೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಆರ್ಥಿಕ ಅಪರಾಧಗಳು ಸೇರಿದಂತೆ ಹಲವು ಸಂಕೀರ್ಣ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರು. ಟ್ರಂಪ್ ಅವರ ಅನೇಕ ರಾಜಕೀಯ ವಿರೋಧಿಗಳನ್ನು ಕಟಕಟೆಗೆ ಬಂದು ನಿಲ್ಲುವಂತೆ ಮಾಡಿದ ಕಾಶ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

Kash Patel

ಆಡಳಿತ ಅನುಭವ

ಕಾಶ್ ಪಟೇಲ್ ಅವರು ನ್ಯಾಯಾಂಗ ಇಲಾಖೆಯಲ್ಲಿ ಭಯೋತ್ಪಾದನಾ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್-ಖೈದಾ ಮತ್ತು ಐಸಿಸ್‌ನಂತಹ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ತನಿಖೆ, ಕಾನೂನು ಕ್ರಮ ಕೈಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಹಯೋಗದೊಂದಿಗೆ ಜಂಟಿ ವಿಶೇಷ ಕಾರ್ಯಾಚರಣೆಗಳ ಕಮಾಂಡ್ ಗೆ (JSOC) ನ್ಯಾಯಾಂಗ ಇಲಾಖೆಯ ಸಂಪರ್ಕ ಅಧಿಕಾರಿಯಾಗಿಯು ಅವರು ಕೆಲಸ ಮಾಡಿದ್ದಾರೆ.

17 ಗುಪ್ತಚರ ಸಮುದಾಯ ಏಜೆನ್ಸಿಗಳ ಮೇಲ್ವಿಚಾರಣೆ ಮತ್ತು ಅಧ್ಯಕ್ಷರ ದೈನಂದಿನ ಕಾರ್ಯಕ್ರಮಗಳ ವಿವರಗಳನ್ನು ವಿತರಿಸುವ ರಾಷ್ಟ್ರೀಯ ಗುಪ್ತಚರ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪ್ರಧಾನ ಉಪನಾಯಕರಾಗಿಯೂ ಅವರು ಕೆಲಸ ಮಾಡಿದ್ದಾರೆ. 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ ಹೌಸ್ ಇಂಟೆಲ್ ಮತ್ತು ನ್ಯೂನ್ಸ್ ಮೆಮೊ ಸಮಿತಿ ತನಿಖೆಯನ್ನು ಮುನ್ನಡೆಸಲು ಗುಪ್ತಚರ ಗೃಹ ಖಾಯಂ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ರೆಪ್. ಡೆವಿನ್ ನ್ಯೂನ್ಸ್ ಅವರು ಪಟೇಲ್ ಅವರನ್ನು ಆಯ್ಕೆ ಮಾಡಿಕೊಂಡದ್ದು ಪಟೇಲ್ ಅವರ ವೃತ್ತಿಜೀವನದ ಪ್ರಮುಖ ಘಟ್ಟವಾಗಿತ್ತು.

ಟ್ರಂಪ್ ಅವರ ಪ್ರಚಾರ ಸ್ವಯಂಸೇವಕರಿಗೆ ಬಂಧನದ ಭೀತಿ ಎದುರಾದಾಗ ನ್ಯಾಯಾಂಗ ಇಲಾಖೆಯ ವಿಧಾನಗಳನ್ನು ಟೀಕಿಸುವ ನಾಲ್ಕು ಪುಟಗಳ ವರದಿಯಾದ “ನ್ಯೂನ್ಸ್ ಮೆಮೊ” ಕರಡು ರಚನೆಯಲ್ಲಿ ಪಟೇಲ್ ಮಹತ್ವದ ಪಾತ್ರ ವಹಿಸಿದ್ದಾರೆ. ಇದು ಟ್ರಂಪ್ ಅವರ ಮೇಲೆ ಪ್ರಭಾವ ಬೀರಿತ್ತು. ನ್ಯೂನ್ಸ್ ಮೆಮೊ ಸಮಿತಿಯಲ್ಲಿದ್ದ ಪಟೇಲ್ ಅವರು ಟ್ರಂಪ್ ಆಡಳಿತದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. 2019ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಗೆ (NSC) ಸಿಬ್ಬಂದಿಯಾಗಿ ಸೇರಿದ ಪಟೇಲ್ ಅನಂತರ ಭಯೋತ್ಪಾದನಾ ನಿಗ್ರಹ ನಿರ್ದೇಶನಾಲಯದ ಹಿರಿಯ ನಿರ್ದೇಶಕರಾದರು.

ಈ ಸಂದರ್ಭದಲ್ಲಿ ಪಟೇಲ್ ಅವರು ಐಸಿಸ್ ಮತ್ತು ಅಲ್- ಖೈದಾ ನಾಯಕರ ವಿರುದ್ಧದ ಕಾರ್ಯಾಚರಣೆ, ಸಿರಿಯನ್ ಸರ್ಕಾರ ಹಿಡಿದಿದ್ದ ಅಮೆರಿಕನ್ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ವಾಪಸಾತಿ ಸೇರಿದಂತೆ ಹಲವಾರು ಪ್ರಕರಣಗಳ ಮೇಲ್ವಿಚಾರಣೆಯನ್ನು ಮಾಡಿದರು.

2020ರ ಫೆಬ್ರವರಿಯಲ್ಲಿ ಪಟೇಲ್ ಅವರು ಕಾರ್ಯನಿರ್ವಾಹಕ ನಿರ್ದೇಶಕ ರಿಚರ್ಡ್ ಗ್ರೆನೆಲ್ ಅವರಿಗೆ ಪ್ರಧಾನ ಉಪನಿರ್ದೇಶಕರಾಗಿ ಆಯ್ಕೆಯಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ (ODNI) ಕಚೇರಿಗೆ ಸೇರ್ಪಡೆಯಾದರು. ಅನಂತರ ಅವರು ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್ ಮಿಲ್ಲರ್‌ ಅವರ ಮುಖ್ಯ ಸಿಬ್ಬಂದಿಯಾದರು. ರಕ್ಷಣಾ ಇಲಾಖೆಯ ಕಾರ್ಯಾಚರಣೆ ಮತ್ತು ಪರಿವರ್ತನೆಯ ಪ್ರಕ್ರಿಯೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿದರು.

ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಮುದಾಯದ ಸವಾಲುಗಳ ಬಗ್ಗೆ ಕಾಶ್ ಪಟೇಲ್ ಮತ್ತು ಟ್ರಂಪ್ ಅವರ ಅಭಿಪ್ರಾಯಗಳು ಒಂದೇ ರೀತಿಯಾಗಿದೆ. ಟ್ರಂಪ್ ಅವರ ಮೊದಲ ಅವಧಿಯ ಅಂತ್ಯದ ವೇಳೆಗೆ ಸಿಐಎ ಅಥವಾ ಎಫ್ ಬಿಐಯ ಉಪ ನಿರ್ದೇಶಕರ ಪಾತ್ರಕ್ಕೆ ಪಟೇಲ್ ಅವರನ್ನು ಪರಿಗಣಿಸಲಾಗಿತ್ತು. ಆದರೆ ಇದನ್ನು ಸಿಐಎ ನಿರ್ದೇಶಕಿ ಗಿನಾ ಹ್ಯಾಸ್ಪೆಲ್ ಮತ್ತು ಅಟಾರ್ನಿ ಜನರಲ್ ಬಿಲ್ ಬಾರ್ ವಿರೋಧಿಸಿದ್ದರು. ಪಟೇಲ್ ಅವರಿಗೆ ಅಗತ್ಯ ಅನುಭವದ ಕೊರತೆ ಇರುವುದಾಗಿ ವಾದಿಸಿದರು.

Kash Patel

ಹಿಂದಿನ ಚುನಾವಣೆಯಲ್ಲಿ ಟ್ರಂಪ್ ಸರ್ಕಾರ ಸೋತ ಬಳಿಕವೂ ಪಟೇಲ್ ಅವರು ಟ್ರಂಪ್ ಅವರ ಕಾರ್ಯಸೂಚಿಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ವ್ಯಾಪಾರ ಮತ್ತು ಮಾಧ್ಯಮ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.

Kash Patel: ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ CIA ಮುಖ್ಯಸ್ಥರಾಗಿ ಭಾರತೀಯ ಮೂಲದ ಕಾಶ್ ಪಟೇಲ್‌ ಆಯ್ಕೆ? ಏನಿವರ ಹಿನ್ನೆಲೆ?

ಗವರ್ನಮೆಂಟ್ ಗ್ಯಾಂಗ್‌ಸ್ಟರ್ಸ್: ದಿ ಡೀಪ್ ಸ್ಟೇಟ್, ದಿ ಟ್ರೂತ್, ಅಂಡ್ ದಿ ಬ್ಯಾಟಲ್ ಫಾರ್ ಅವರ್ ಡೆಮಾಕ್ರಸಿ ಸ್ಮರಣ ಸಂಚಿಕೆಯನ್ನು ಬರೆದಿರುವ ಪಟೇಲ್, ಮಕ್ಕಳ ಕಾಲ್ಪನಿಕ ಕಥೆಯನ್ನು ರಚಿಸಿದ್ದಾರೆ. ಪ್ರಸ್ತುತ ಪಟೇಲ್ ಅವರು ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್‌ನ ನಿರ್ದೇಶಕರ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.