Monday, 25th November 2024

IND vs SA: ಆಫ್ರಿಕಾ ಎದುರು ಭಾರತಕ್ಕೆ ಮೊದಲ ಸವಾಲು, ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

IND vs SA: India vs South Africa 1st T20I Match Preview, Probable Playing XI, Head to Head Record, Pitch Report

ಡರ್ಬನ್‌: ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ (India) ಇದೀಗ ಹರಿಣ ನಾಡಿನಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಚುಟುಕು ಸರಣಿ ಆಡಲು ಸಜ್ಜಾಗುತ್ತಿದೆ. ಉಭಯ ತಂಡಗಳ (IND vs SA) ನಡುವಣ 4 ಪಂದ್ಯಗಳ ಟಿ20ಐ ಸರಣಿಯ ಮೊದಲನೇ ಪಂದ್ಯ ನವೆಂಬರ್‌ 8 ರಂದು (ಶುಕ್ರವಾರ) ಇಲ್ಲಿನ ಕಿಂಗ್ಸ್‌ಮೀಡ್‌ ಸ್ಟೇಡಿಯಂನಲ್ಲಿ ನಡೆಯಲಿದೆ.

ಅಂದ ಹಾಗೆ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸೋಲಿನಂಚಿನಲ್ಲಿದ್ದ ಭಾರತ ತಂಡ ಅಂತಿಮವಾಗಿ ಗೆಲುವು ಪಡೆದು ಎರಡನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ದಕ್ಷಿಣ ಆಫ್ರಿಕಾ ತಂಡ, ಟಿ20 ವಿಶ್ವಕಪ್‌ ಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಅಂದ ಹಾಗೆ ದಕ್ಷಿಣ ಆಫ್ರಿಕಾ ತಂಡ, ಬಾಂಗ್ಲಾದೇಶ ವಿರುದ್ಧ 2-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆಲುವಿನ ಮೂಲಕ ಭಾರತದ ಎದುರು ಟಿ20 ಸರಣಿ ಆಡಲು ಸಜ್ಜಾಗುತ್ತಿದೆ. ಸೆಪ್ಟಂಬರ್‌ ಅಂತ್ಯದಲ್ಲಿ ಐರ್ಲೆಂಡ್‌ ಎದುರು ದಕ್ಷಿಣ ಆಫ್ರಿಕಾ ತಂಡ ತನ್ನ ಕೊನೆಯ ಟಿ20ಐ ಪಂದ್ಯವನ್ನು ಆಡಿತ್ತು. ಈ ಸರಣಿಯು ಅಂತಿಮವಾಗಿ ಸಮಬಲ ಕಂಡಿತ್ತು.

ಇನ್ನು ಭಾರತ ತಂಡ, ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯ ಗೆಲುವಿನ ಬಳಿಕ ನ್ಯೂಜಿಲೆಂಡ್‌ ಎದುರು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು. ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಕಾರಣ ಭಾರತ ತಂಡದ ಹಿರಿಯ ಆಟಗಾರರು ಈ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಸೂರ್ಯಕುಮಾರ್‌, ಸಂಜು ಸ್ಯಾಮ್ಸನ್‌, ಅರ್ಷದೀಪ್‌ ಸಿಂಗ್‌ ಬಿಟ್ಟರೆ ಇನ್ನುಳಿದಂತೆ ಯುವ ಆಟಗಾರರು ಟಿ20 ಸರಣಿಯಲ್ಲಿ ಕಠಿಣ ಸವಾಲನ್ನು ಎದುರಿಸಲಿದ್ದಾರೆ.

ಪಿಚ್‌ ರಿಪೋರ್ಟ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲನೇ ಟಿ20ಐ ಪಂದ್ಯ ನಡೆಯುವ ಕಿಂಗ್ಸ್‌ಮೀಡ್‌ ಸ್ಟೇಡಿಯಂ ಪಿಚ್‌ ಬೌಲರ್‌ಗಳಿಗೆ ನೆರವು ನೀಡಲಿದೆ. ಅದರಲ್ಲಿಯೂ ವಿಶೇಷವಾಗಿ ಫಾಸ್ಟ್‌ ಬೌಲರ್‌ಗಳ ಸ್ನೇಹಿಯಾಗಿದೆ. ಪಿಚ್‌ ಬೌಲರ್‌ಗಳ ಸ್ನೇಹಿಯಾಗಿದ್ದರೂ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ಕಲೆ ಹಾಕಬಹುದಾಗಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡದ ನಾಯಕ ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಇದೆ. ಆ ಮೂಲಕ ಎದುರಾಳಿ ತಂಡಕ್ಕೆ ಚೇಸಿಂಗ್‌ ನೀಡಲು ಬಯಸಬಹುದು.

ಉಭಯ ತಂಡಗಳ ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 27
ಭಾರತ ತಂಡದ ಗೆಲುವು: 15
ದಕ್ಷಿಣ ಆಫ್ರಿಕಾದ ಗೆಲುವು: 11
ಫಲಿತಾಂಶವಿಲ್ಲ: ೦1

ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI

ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿ.ಕೀ), ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌,ರಮಣ್‌ದೀಪ್‌ ಸಿಂಗ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ಯಶ್‌ ದಯಾಳ್‌

ದಕ್ಷಿಣ ಆಫ್ರಿಕಾದ ಸಂಭಾವ್ಯ ಪ್ಲೇಯಿಂಗ್‌ XI

ಏಡೆನ್‌ ಮಾರ್ಕ್ರಮ್‌ (ನಾಯಕ), ರೀಝಾ ಹೆಂಡ್ರಿಕ್ಸ್‌, ರಿಯಾನ್‌ ರಿಕಲ್ಟನ್‌, ಟ್ರಿಸ್ಟನ್‌ ಸ್ಟಬ್ಸ್‌, ಹೆನ್ರಿಕ್‌ ಕ್ಲಾಸೆನ್‌ (ವಿ.ಕೀ), ಡೇವಿಡ್‌ ಮಿಲ್ಲರ್‌, ಡೊನೊವಾನ್‌ ಪೆರಾರಿ, ಮಾರ್ಕೊ ಯೆನ್ಸನ್‌, ಜೆರಾಲ್ಡ್‌ ಕೊಯೇಡ್ಜಿ, ಒಟ್ಟಿನೀಲ್‌ ಬಾರ್ಟಮನ್‌, ಲುಥೊ ಸಿಪಾಮ್ಲ

ಪಂದ್ಯದ ವಿವರ

ಭಾರತ vs ದಕ್ಷಿಣ ಆಫ್ರಿಕಾ
ಮೊದಲನೇ ಟಿ20ಐ ಪಂದ್ಯ
ದಿನಾಂಕ: ನವೆಂಬರ್‌ 08, 2024
ಸಮಯ: ರಾತ್ರಿ 08: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಡರ್ಬನ್‌ನ ಕಿಂಗ್ಸ್‌ಮೀಡ್‌ ಸ್ಟೇಡಿಯಂ
ನೇರ ಪ್ರಸಾರ: ಸ್ಪೋರ್ಟ್‌ 18
ಲೈವ್‌ ಸ್ಟ್ರೀಮಿಂಗ್‌: ಜಿಯೋ ಸಿನಿಮಾ

ಈ ಸುದ್ದಿಯನ್ನು ಓದಿ: IND vs SA: ಸಂಜು-ಅಭಿಷೇಕ್‌ ಓಪನರ್ಸ್‌, ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI