Monday, 25th November 2024

ENG vs WI: ಮೇಡಿನ್‌ ವಿಕೆಟ್‌ ಪಡೆದ ಬಳಿಕ ಕೋಪದೊಂದಿಗೆ ಮೈದಾನ ತೊರೆದ ಆಲ್ಝಾರಿ ಜೋಸೆಫ್‌! ವಿಡಿಯೊ

Alzarri Joseph leaves field in anger after bowling wicket maiden against England

ನವದೆಹಲಿ: ಇಂಗ್ಲೆಂಡ್‌ ವಿರುದ್ದ (ENG vs WI) ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಸ್ಟ್‌ ಇಂಡೀಸ್‌ ತಂಡದ ವೇಗಿ ಆಲ್ಝಾರಿ ಜೋಸೆಫ್‌ (Alzarri Joseph) ಅವರು ಅಸಮಾಧಾನದೊಂದಿಗೆ ಮೈದಾನ ತೊರೆದಿದ್ದ ಅಚ್ಚರಿ ಘಟನೆಯೊಂದು ನಡೆದಿದೆ. ಈ ವಿಡಿಯೋ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದ ಜೋಸೆಫ್‌, ವಿಂಡೀಸ್‌ ತಂಡದ 8 ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದ್ದರು. ಈ ಪಂದ್ಯದ ಗೆಲುವಿನ ಮೂಲಕ ವೆಸ್ಟ್‌ ಇಂಡೀಸ್‌ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ.

ಗುರುವಾರ ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಇಂಗ್ಲೆಂಡ್‌ ತಂಡಕ್ಕೆ ವಿಂಡೀಸ್‌ ಬೌಲರ್‌ಗಳು ಆರಂಭಿಕ ಆಘಾತ ನೀಡಿದ್ದರು. ಅಂದಹಾಗೆ ಪಂದ್ಯದ ನಾಲ್ಕನೇ ಓವರ್‌ನಲ್ಲಿ ಆಲ್ಝಾರಿ ಜೋಸೆಫ್‌ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದರು. ಈ ಓವರ್‌ನ ಮೊದಲನೇ ಎಸೆತದ ಬಳಿಕ ಜೋಸೆಫ್‌, ಫೀಲ್ಡ್‌ ಸೆಟ್‌ ಅಪ್‌ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಜಾರ್ಡನ್‌ ಕಾಕ್ಸ್‌, ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸುತ್ತಾರೆ.

ಜಾರ್ಡನ್‌ ಕಾಕ್ಸ್‌ ಅವರನ್ನು ಔಟ್‌ ಮಾಡಿದ ಬಳಿಕ ಆಲ್ಝಾರಿ ಜೋಸೆಫ್‌, ನಾಯಕ ಶೇಯ್‌ ಹೋಪ್‌ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಮೇಡಿನ್‌ ವಿಕೆಟ್‌ ಪಡೆದ ಬಳಿಕ ವಿಂಡೀಸ್‌ ವೇಗಿ ಬೇಸರದೊಂದಿಗೆ ಡ್ರೆಸ್ಸಿಂಗ್‌ ರೂಂಗೆ ಹೆಜ್ಜೆ ಹಾಕಿದರು. ಡಗ್‌ಔಟ್‌ನಲ್ಲಿಯೂ ಸಹ ಆಟಹಗಾರರೊಬ್ಬರ ಜೊತೆ ಜೋಸೆಫ್‌ ತಮ್ಮ ಅಸಮಾಧಾನದ ಮಾತುಗಳನ್ನು ಆಡುತ್ತಿದ್ದ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಂದ ಹಾಗೆ ಐದನೇ ಓವರ್‌ ಬಳಿಕ ಆಲ್ಝಾರಿ ಜೋಸೆಫ್‌ ಅವರು ಮೈದಾನಕ್ಕೆ ಮರಳಿದ್ದರು.

ವೆಸ್ಟ್‌ ಇಂಡೀಸ್‌ಗೆ 8 ವಿಕೆಟ್‌ ಜಯ

ಈ ಪಂದ್ಯದಲ್ಲಿ ಆಲ್ಝಾರಿ ಜೋಸೆಫ್‌ ಅವರು 10 ಓವರ್‌ಗಳಿಗೆ 45 ರನ್‌ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 263 ರನ್‌ಗಳನ್ನು ಕಲೆ ಹಾಕಿತು. ಇದರೊಂದಿಗೆ ವೆಸ್ಟ್‌ ಇಂಡೀಸ್‌ ತಂಡಕ್ಕೆ 264 ರನ್‌ಗಳ ಗುರಿಯನ್ನು ನೀಡಿತ್ತು. ಇಂಗ್ಲೆಂಡ್‌ ಪರ ಡಾನ್‌ ಮೌಸ್ಲಿ 57 ರನ್‌ಗಳಿಸಿದರೆ, ಫಿಲ್‌ ಸಾಲ್ಟ್‌ ಅವರು 74 ರನ್‌ಗಳನ್ನು ದಾಖಲಿಸಿದ್ದರು. ಇವರ ಜೊತೆಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್‌ ಕರನ್‌ (40 ರನ್‌), ಜೇಮಿ ಓವರ್ಟನ್‌ (32 ರನ್‌) ಹಾಗೂ ಜೋಫ್ರಾ ಆರ್ಚರ್‌ (38 ರನ್‌) ಗಳಿಸಿದ್ದರು.

ಬಳಿಕ 264 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಇಂಡೀಸ್‌ ತಂಡ, ಬ್ರೆಂಡನ್‌ ಕಿಂಗ್‌ (102 ರನ್)‌ ಹಾಗೂ ಕೀಸಿ ಕಾರ್ಟಿ (128* ರನ್‌) ಅವರ ಶತಕಗಳ ಬಳದಿಂದ 43 ಓವರ್‌ಗಳಿಗೆ 2 ವಿಕೆಟ್‌ಗಳ ನಷ್ಟಕ್ಕೆ 267 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಶತಕ ಸಿಡಿಸಿದ್ದ ಬ್ರೆಂಡನ್‌ ಕಿಂಗ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಸುದ್ದಿಯನ್ನು ಓದಿ: WI vs ENG: ಕಾರ್ಟಿ-ಕಿಂಗ್‌ ಶತಕಗಳ ಅಬ್ಬರಕ್ಕೆ ಶರಣಾದ ಆಂಗ್ಲರು, ವಿಂಡೀಸ್‌ಗೆ ಒಡಿಐ ಸರಣಿ!