ಮುಂಬೈ: ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ದದ ಕಾನೂನು ಹೋರಾಟದಲ್ಲಿ ನಟಿ ಕಂಗನಾ ರಾಣಾವತ್ ಗೆಲುವಿನ ನಗೆ ಬೀರಿದ್ದಾರೆ.
ಕಂಗನಾ ಅವರಿಗೆ ಸೇರಿದ ಕಟ್ಟಡದ ಒಂದು ಭಾಗವನ್ನು ಕೆಡವಿರುವ ಬಿಎಂಸಿ ಧೋರಣೆ ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಿದೆ.
ಬಿಎಂಸಿ ವಿರುದ್ಧ ರಾಣಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ಎಸ್.ಜೆ.ಕಾತಾವಾಲ ಮತ್ತು ಆರ್.ಐ.ಚಾಗ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಯಾವುದೇ ವ್ಯಕ್ತಿಗಳ ವಿರುದ್ಧ ಕಾರ್ಪೋರೇಷನ್‍ನವರು ಶಕ್ತಿ ಪ್ರಯೋಗ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ಸೆ.9ರಂದು ಬಾಂದ್ರಾದಲ್ಲಿರುವ ಕಂಗನಾ ಅವರಿಗೆ ಸೇರಿದ ಪಲಿಹಿಲ್ ಬಂಗ್ಲಾ ಅಕ್ರಮವಾಗಿದೆ ಎಂದು ಆರೋಪಿಸಿ ಬಿಎಂಸಿ ಅವರು ಕಟ್ಟಡದ ಒಂದು ಭಾಗವನ್ನು ತೆರವುಗೊಳಿಸಿದ್ದರು.
ಪ್ರತಿಯಾಗಿ, ಕಂಗನಾ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕವಚನ ಪ್ರಯೋಗಿಸಿ ವಾಗ್ದಾಳಿ ನಡೆಸಿದ್ದಲ್ಲದೆ, ಕಾರ್ಪೋರೇಷನ್ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.