Friday, 22nd November 2024

Susie Wiles: ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರಾಗಿ ಟ್ರಂಪ್‌ ಆಪ್ತೆ ಸೂಸಿ ವೈಲ್ಸ್ ನೇಮಕ- ಈಕೆ ಯಾರು? ಏನಿವರ ಹಿನ್ನೆಲೆ?

Susie Wiles

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ (American President) ಎರಡನೇ ಬಾರಿಗೆ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಅವರು ಶ್ವೇತ ಭವನದ ಮೊದಲ ಮಹಿಳಾ ಸಿಬ್ಬಂದಿ ಮುಖ್ಯಸ್ಥರನ್ನಾಗಿ (White House chief of staff) ನೇಮಕ ಮಾಡಿದ್ದಾರೆ. ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಸೂಸಿ ವೈಲ್ಸ್ (Susie Wiles) ಯುಎಸ್ ಇತಿಹಾಸದಲ್ಲೇ ಆ ಸ್ಥಾನವನ್ನು ಅಲಂಕರಿಸಿರುವ ಮೊದಲ ಮಹಿಳೆಯಾಗಿದ್ದಾರೆ.

ಜನವರಿ 20ರಂದು ಶ್ವೇತಭವನಕ್ಕೆ ಮರಳಲು ಡೊನಾಲ್ಡ್ ಟ್ರಂಪ್ ತಯಾರಿ ನಡೆಸುತ್ತಿದ್ದು, ಸೂಸಿ ವೈಲ್ಸ್ ಅವರ ನೇಮಕದೊಂದಿಗೆ ಅವರ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಸೂಸಿ ವೈಲ್ಸ್ ಅವರು ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ವ್ಯವಸ್ಥಾಪಕರಾಗಿದ್ದರು. ಸೂಸಿ ಅವರು ಕಠಿಣ, ಬುದ್ದಿವಂತ, ನವೀನ ಮತ್ತು ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದ ಗೌರವಾನ್ವಿತರು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ಏಳಿಗೆಗೆ ಸೂಸಿ ಅವರು ದಣಿವರಿಯದೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ. ಅಮೆರಿಕದ ಇತಿಹಾಸದಲ್ಲೇ ಸೂಸಿ ಮೊಟ್ಟ ಮೊದಲ ಮಹಿಳಾ ಸಿಬ್ಬಂದಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ಅವರಿಗೆ ಸಲ್ಲುವ ಸೂಕ್ತ ಗೌರವವಾಗಿದೆ ಎಂದು ಹೇಳಿದ್ದಾರೆ.

Susie Wiles

ಸೂಸಿ ವೈಲ್ಸ್ ಯಾರು?

ಟ್ರಂಪ್ ವಲಯದಲ್ಲಿ ಮಾತ್ರವಲ್ಲ ಅದರಾಚೆಗೂ ಗುರುತಿಸಲ್ಪಟ್ಟಿರುವ ಸೂಸಿ ವೈಲ್ಸ್ ಅತ್ಯಂತ ಶಿಸ್ತುಬದ್ಧ ಮತ್ತು ಪ್ರಚಾರ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ದಾಖಲಿಸಿದಾಗ ಈ ಕುರಿತು ವೇದಿಕೆಯಲ್ಲಿ ಮಾತನಾಡಲು ನಿರಾಕರಿಸಿದ ಸೂಸಿ ಯಾವುದೇ ಪ್ರಚಾರವನ್ನು ಬಯಸುವವರಲ್ಲ. ಪದೇಪದೇ ಪ್ರಚಾರದ ನಾಯಕತ್ವವನ್ನು ಬದಲಾಯಿಸುವ ಟ್ರಂಪ್‌ ಅವರ ನೀತಿಯನ್ನು ಬದಲಾಯಿಸಿದ ಸೂಸಿ ಸುದೀರ್ಘ ಕಾಲದಿಂದ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸೂಸಿ ಅವರಿಗೆ ಫೆಡರಲ್ ಸರ್ಕಾರದ ಅನುಭವ ಅಷ್ಟಾಗಿ ಇಲ್ಲವೆನ್ನಬಹುದು.

ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ (ಎನ್‌ಎಫ್‌ಎಲ್) ಆಟಗಾರ ಮತ್ತು ಕ್ರೀಡಾ ವೀಕ್ಷಕವಿವರಣೆಗಾರ ಪ್ಯಾಟ್ ಸಮ್ಮರಾಲ್ ಅವರ ಮಗಳಾದ ಸೂಸಿ, 1970ರ ದಶಕದಲ್ಲಿ ನ್ಯೂಯಾರ್ಕ್ ರಿಪಬ್ಲಿಕನ್ ಜಾಕ್ ಕೆಂಪ್ ಅವರ ವಾಷಿಂಗ್ಟನ್ ಹೌಸ್ ಮೂಲಕ ರಾಜಕೀಯ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಅವರು 1980ರ ದಶಕದಲ್ಲಿ ರೊನಾಲ್ಡ್ ರೀಗನ್ ಅವರ ಅಧ್ಯಕ್ಷೀಯ ಪ್ರಚಾರ ತಂಡ ಸೇರಿಕೊಂಡಿದ್ದರು. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ್ದರು.

ಫ್ಲೋರಿಡಾ ಮೂಲದವರಾದ ವೈಲ್ಸ್ ಅವರು 2016 ಮತ್ತು 2020 ರಲ್ಲಿ ಟ್ರಂಪ್ ಅವರ ರಾಜ್ಯ ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದರು. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರ 2018ರ ವಿಜಯದ ಪ್ರಚಾರ ಕಾರ್ಯವನ್ನೂ ನಿರ್ವಹಿಸಿದ್ದರು.

ಸೂಸಿ ಅವರು ನೇರವಾದ ಮತ್ತು ದಿಟ್ಟವಾದ ನಡೆನುಡಿಗೆ ಹೆಸರಾಗಿದ್ದಾರೆ. ಟ್ರಂಪ್ ಅವರೊಂದಿಗೆ ಕೆಲಸ ಮಾಡಲು ಸೂಕ್ತವಾದವರು. ಟ್ರಂಪ್ ಅವರಿಗೆ ಕಠಿಣ ಸತ್ಯಗಳನ್ನು ಹೇಳಬಲ್ಲರು ಎಂದು ಶ್ವೇತಭವನದ ದಿ ಗೇಟ್‌ಕೀಪರ್ಸ್‌ನ ಲೇಖಕ ಕ್ರಿಸ್ ವಿಪ್ಪಲ್ ಹೇಳಿದ್ದಾರೆ. ಶ್ವೇತ ಭವನದ ಮುಖ್ಯಸ್ಥರು ಅಧ್ಯಕ್ಷ ಸ್ಥಾನದ ಮೇಲೆ ಪ್ರಭಾವ ಬೀರುತ್ತಾರೆ. ಸೂಸಿ ಅವರಿಗೆ ವೈಟ್ ಹೌಸ್ ಅನುಭವವಿಲ್ಲ. 40 ವರ್ಷಗಳಲ್ಲಿ ವಾಷಿಂಗ್ಟನ್ ನಲ್ಲಿ ಅವರು ಕೆಲಸ ಮಾಡಿಲ್ಲ. ಹೀಗಾಗಿ ಇವರು ಯಾವ ರೀತಿಯಾಗಿ ಕೆಲಸ ಮಾಡುವರು ಎನ್ನುವ ಕುತೂಹಲವಿದೆ ಎಂದಿದ್ದಾರೆ ಕ್ರಿಸ್.

Susie Wiles

ಸಿಬ್ಬಂದಿ ಮುಖ್ಯಸ್ಥರ ಕೆಲಸ ಏನು?

ಶ್ವೇತ ಭವನದ ಸಿಬ್ಬಂದಿ ಮುಖ್ಯಸ್ಥರು ಅಧ್ಯಕ್ಷರ ವಿಶ್ವಾಸಾರ್ಹರಾಗಿ ಕಾರ್ಯನಿರ್ವಹಿಸುತ್ತಾರೆ. ಅಧ್ಯಕ್ಷರ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಾರೆ. ಸ್ಪರ್ಧಾತ್ಮಕ ರಾಜಕೀಯ ಮತ್ತು ನೀತಿ ಹಿತಾಸಕ್ತಿಗಳನ್ನು ನಿರ್ವಹಿಸುತ್ತಾರೆ. ಅಧ್ಯಕ್ಷರು ಯಾರನ್ನು ಭೇಟಿಯಾಗಬೇಕು, ಯಾರೊಂದಿಗೆ ಮಾತನಾಡಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಸಿಬ್ಬಂದಿ ಮುಖ್ಯಸ್ಥರು ಶ್ವೇತಭವನದ ಸಂಪೂರ್ಣವಾಗಿ ನಿರ್ಣಾಯಕರಾಗಿದ್ದಾರೆ ಎಂದು ಕ್ರಿಸ್ ವಿಪ್ಪಲ್ ಹೇಳಿದರು.

S Jaishankar: ಜೈಶಂಕರ್‌ ಸಂದರ್ಶನ ಪ್ರಸಾರ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮ ನಿರ್ಬಂಧಿಸಿದ ಕೆನಡಾಕ್ಕೆ ಚಾಟಿ ಬೀಸಿದ ಭಾರತ