ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ(Mangalore University) ಮತ್ತು ಬೆಸೆಂಟ್ ಮಹಿಳಾ ಕಾಲೇಜು(Besant Women’s College) ಸಹಯೋಗದಲ್ಲಿ ನಡೆಯುವ 2 ದಿನಗಳ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟಕ್ಕೆ ಇಂದು(ನ.8) ರಂದು ಅದ್ಧೂರಿ ಚಾಲನೆ ದೊರಕಿದೆ. ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
ಪಂದ್ಯಕೂಟ ಉದ್ಘಾಟನೆ ಬಳಿಕ ಮಾತನಾಡಿದ ಮೇಯರ್ ಮನೋಜ್ ಕುಮಾರ್, ಭಾರತದ ದೇಶೀಯ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಇಂದಿಗೂ ಹಳ್ಳಿಗಾಡಿನಲ್ಲಿ ಅತ್ಯಂತ ಜನಪ್ರಿಯ. ಕಬಡ್ಡಿಆಟಗಾರರನ್ನು ನಿಯಮಬದ್ಧವಾಗಿ ತರಬೇತುಗೊಳಿಸಿ ಉತ್ತಮ ಕಬಡ್ಡಿಪಟುಗಳನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಲವು ವರ್ಷಗಳಿಂದ ಶ್ರಮಿಸುತ್ತಲೇ ಬಂದಿದೆ. ಕ್ರಿಕೆಟ್‌ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತ್ತಿದೆ. ಇಂದು ಆಟದಲ್ಲಿ ಮುಂದೆ ಬರುವವರಿಗೆ ದೇಶದಲ್ಲಿ ಉತ್ತಮ ಗೌರವವಿದೆ. ಆಟದಲ್ಲಿ ಸೋಲು ಗೆಲುವು ಎರಡನ್ನು ಸಮವಾಗಿ ಸ್ವೀಕರಿಸುವುದು ಉತ್ತಮ ಎಂದರು.
ಇದನ್ನೂ ಓದಿ IND vs SA: ಇಂದು ಮೊದಲ ಟಿ20; ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಯುವ ಶಕ್ತಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಪ್ರದೀಪ್ ಡಿಸೋಜಾ ಮಾತನಾಡಿ ಸರಕಾರದಿಂದ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹ ಅಪಾರ ಇದರ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ, ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು.
ಇದೇ ವೇಳೆ ಮಾತನಾಡಿದ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಮಾಜಿ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಪೂಜಾರಿ ಬಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದ್ದಲ್ಲಿ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಬಹುದು. ಜೊತೆಗೆ ವಿದ್ಯಾರ್ಥಿಗಳಿಗೆ ಪರಿಶ್ರಮ ಅತೀ ಮುಖ್ಯ ಜೊತೆಗೆ ತಂಡಶಕ್ತಿಯು ಮತ್ತು ಸಹನೆಯು ಹೇಗೆ ಬೆಳೆಯುತ್ತದೆ ಎಂಬುದರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಬೆಸಂಟ್ ಮಹಿಳಾ ಕಾಲೇಜಿನ ಉಪಾಧ್ಯಕ್ಷೆ ಹಾಗೂ WNES ನ ಸಂಚಾಲಕಿ ಡಾ.ಮಂಜುಳಾ ಕೆ.ಟಿ ಅವರು ಕ್ರೀಡಾಪಟುಗಳು ಕ್ರೀಡಾತ್ಮಕ ಮನೋಭಾವವನ್ನು ಬೆಳೆಸಲು ಪ್ರೋತ್ಸಾಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆಯನ್ನು ಬಳಸಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, WNES ನ ಅಧ್ಯಕ್ಷರಾದ ಮಣೇಲ್ ಅಣ್ಣಪ್ಪ ನಾಯಕ್, IQAC ಸಂಯೋಜಕ ಡಾ. ಸತೀಶ ಕೆ, WNES ನ ಕಾರ್ಯದರ್ಶಿ ಸುರೇಶ್ ಪೈ ಕಾಲೇಜು ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್ ಕೆ ಸಿ, ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ. ಗೇರಾಲ್ಡ್ ಸಂತೋಷ್ ಡಿಸೋಜಾ, ಕಾಲೇಜಿನ ದೈಹಿಕ ನಿರ್ದೇಶಕಿ ರೂಪತಿ ಎಮ್, ಸದಸ್ಯರಾದ ಡಾ. ಲೋಕರಾಜ್ ವಿ.ಎಸ್ ಮತ್ತು ಕ್ರೀಡಾ ಕಾರ್ಯದರ್ಶಿ ರಚನಾ ಕೋಟ್ಯಾನ್ ಉಪಸ್ಥಿತರಿದ್ದರು.