ನವದೆಹಲಿ: ಕಣಿವೆ ರಾಜ್ಯ ಜಮು-ಕಾಶ್ಮೀರದಲ್ಲಿ (jammu and Kashmir) ಶನಿವಾರ ಭದ್ರತಾ ಪಡೆಗಳಿಂದ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಬರಾಮುಲ್ಲಾ ಜಿಲ್ಲೆಯ ಸೊಪೊರ್‌ನಲ್ಲಿ ನಡೆದಿದ್ದ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಬಲಿ ಪಡೆಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಗಳು ಹಾಗೂ ಜಮ್ಮು-ಕಾಶ್ಮೀರ ಪೋಲಿಸರಿಂದ ಜಂಟಿ ಭಯೋತ್ಪಾದನ ವಿರೋಧಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಈ ವೇಳೆ ಭಯೋತ್ಪಾದಕರ ಜೊತೆ ಗುಂಡಿನ ಚಕಮಕಿ ನಡೆದಿತ್ತು. ಆದರೆ, ಎನ್‌ಕೌಂಟರ್‌ನಲ್ಲಿ ಎಷ್ಟು ಮಂದಿ ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆಂಬ ಸಂಪೂರ್ಣ ಮಾಹಿತಿ ಇನ್ನು ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಬರಮುಲ್ಲಾ ಮತ್ತು ಸೊಪೊರ್ ಪ್ರಾಂತ್ಯದಲ್ಲಿ ಭಯೋತ್ಪಾದಕರ ಚಟುವಟಿಕೆ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದವು. ಕಾರ್ಯಾಚರಣೆಯ ವೇಳೆ ಭಯೋತ್ಪಾದಕರು ಹಾಗೂ ನಮ್ಮ ನಡುವೆ ಗುಂಡಿನ ಕಾಳಗ ನಡೆದಿತ್ತು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಿದ್ದೇವೆ,” ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಜನಪ್ರಿಯ ಫ್ಲೀ ಮಾರ್ಕೆಟ್‌ನಲ್ಲಿ 12 ಜನರನ್ನು ಗಾಯಗೊಳಿಸಿದ್ದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಮೂವರು ಭಯೋತ್ಪಾದಕ ಸಹಚರರನ್ನು ಕೇಂದ್ರಾಡಳಿತ ಪ್ರದೇಶದ (ಯುಟಿ) ಪೊಲೀಸರು ಬಂಧಿಸಿದ ಒಂದು ದಿನದ ಬಳಿಕ ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಲಾಗಿದೆ.
ಬಂಧಿಸಿರುವವರನ್ನು ಉಸಾಮಾ ಯಾಸಿನ್, ಉಮರ್ ಫಜಾಝ್ ಶೇಖ್ ಹಾಗೂ ಅಫ್ನನ್ ಮನ್ಸೂರ್ ಶೇಖ್ ಎಂದು ಗುರುತಿಸಲಾಗಿದೆ. ಈ ಮೂವರು ಇಖ್ರಾಜ್‌ಪುರದವರಾಗಿದ್ದಾರೆಂದು ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿ.ಕೆ.ಬಿರ್ಡಿ ತಿಳಿಸಿದ್ದಾರೆ.