Tuesday, 26th November 2024

Samosa Row: ಸಿಐಡಿ ತನಿಖೆಗೆ ಆದೇಶಿಸಿದ್ದ CMಗೆ ಆನ್‌ಲೈನ್‌ನಲ್ಲಿ 11 ಸಮೋಸ ಆರ್ಡರ್‌ ಮಾಡಿದ ಶಾಸಕ

samosa row

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭುಗಿಲೆದ್ದಿರುವ ಸಮೋಸ ವಿವಾದ(Samosa Row) ಕಾಂಗ್ರೆಸ್‌-ಬಿಜೆಪಿ ನಡುವಿನ ಕೆಸರೆರಚಾಟಕ್ಕೆ ವೇದಿಕೆ ಕಲ್ಪಿಸಿದೆ. ಮುಖ್ಯಮಂತ್ರಿಗಾಗಿ ತಂದಿದ್ದ ಸಮೋಸಾವನ್ನು ಭದ್ರತಾ ಸಿಬ್ಬಂದಿಗೆ ವಿತರಿಸಿರುವ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿರುವ ವಿಚಾರಕ್ಕೆ ಟಾಂಗ್‌ ಬಿಜೆಪಿ ಟಾಂಗ್‌ ಕೊಟ್ಟಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ ಬಿಜೆಪಿ ಶಾಸಕರೊಬ್ಬರು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ 11 ಸಮೋಸಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ.

ಹಮೀರ್‌ಪುರ ಶಾಸಕ ಆಶಿಶ್ ಶರ್ಮಾ ಅವರು ಈ ಸಮೋಸಗಳನ್ನು ಆರ್ಡರ್‌ ಮಾಡಿದ್ದು, ಸಿಎಂ ಸಿಖ್ವಿಂದರ್‌ ಸಿಂಗ್‌ ಸುಖು ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯವು ಈಗಾಗಲೇ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ನೌಕರರ ಪಿಂಚಣಿ ವಿಳಂಬ ಮತ್ತು ತುಟ್ಟಿಭತ್ಯೆಯ ಬಾಕಿಯಂತಹ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ಅಂತಹ ಸಮಯದಲ್ಲಿ ಮುಖ್ಯಮಂತ್ರಿ ಸುಖು ಅವರು ಸಮೋಸಾಗಳ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸುವುದು ತುಂಬಾ ನಿರಾಶಾದಾಯಕವಾಗಿದೆ ಎಂದು ಶರ್ಮಾ ಹೇಳಿದರು.

ಗುಡ್ಡಗಾಡು ರಾಜ್ಯದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ, ಸರ್ಕಾರವು ನೈಜ ಸಮಸ್ಯೆಗಳತ್ತ ಗಮನಹರಿಸಬೇಕು. ಪ್ರತಿಭಟನೆಯಾಗಿ, ನಾನು ಮುಖ್ಯಮಂತ್ರಿಗಳಿಗೆ 11 ಸಮೋಸಾಗಳನ್ನು ಕಳುಹಿಸಿದ್ದೇನೆ, ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸುವುದು ಹೆಚ್ಚು ಮುಖ್ಯವಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆದರೆ, ರಾಜ್ಯ ಸರ್ಕಾರ ಅಂತಹ ಯಾವುದೇ ತನಿಖೆಗೆ ಆದೇಶಿಸಿಲ್ಲ ಮತ್ತು ಇದು ಸಿಐಡಿ ಆಂತರಿಕ ವಿಷಯವಾಗಿರಬಹುದು ಎಂದು ಆಡಳಿತಾರೂಢ ಕಾಂಗ್ರೆಸ್ ಹೇಳಿದೆ. ಘಟನೆಯ ಬಗ್ಗೆ ಯಾವುದೇ ಔಪಚಾರಿಕ ತನಿಖೆಗೆ ಆದೇಶಿಸಲಾಗಿಲ್ಲ ಎಂದು ಸಿಐಡಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಘಟನೆ?

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿಐಡಿ ಪ್ರಧಾನ ಕಚೇರಿಗೆ ತೆರಳಿದ್ದ ಮುಖ್ಯಮಂತ್ರಿಗಳಿಗೆ ಉಪಹಾರಕ್ಕಾಗಿ ಲಕ್ಕರ್ ಬಜಾರ್‌ನ ಹೋಟೆಲ್ ರಾಡಿಸನ್ ಬ್ಲೂನಿಂದ ಮೂರು ಬಾಕ್ಸ್ ಸಮೋಸಾವನ್ನು ತರಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳಿಗೆಂದು ನೀಡಲಾದ ತಿಂಡಿಯನ್ನು ಸಿಎಂ ಭದ್ರತಾ ಸಿಬ್ಬಂದಿಗೆ ಹಂಚಲಾಗಿತ್ತು. ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಹೋಟೆಲ್‌ನಿಂದ 3 ಸೀಲ್ಡ್ ಬಾಕ್ಸ್‌ಗಳಲ್ಲಿ ತಿಂಡಿಗಳನ್ನು ತಂದು ಸಂಬಂಧಿಸಿದ ಎಸ್‌ಐಗೆ ತಿಳಿಸಿದ್ದಾರೆ. ತನಿಖೆಯ ವೇಳೆ ಮೂರು ಕಂಪಾರ್ಟ್‌ಮೆಂಟ್‌ಗಳಲ್ಲಿ ಇಟ್ಟಿರುವ ತಿಂಡಿ ತಿನಿಸುಗಳನ್ನು ಸಿಎಂ ಸುಖ್ವಿಂದರ್‌ ಸುಖು ಅವರಿಗೆ ನೀಡಬೇಕೇ ಎಂದು ಪ್ರವಾಸೋದ್ಯಮ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದವರನ್ನು ಕೇಳಿದಾಗ ಈ ವಿಷಯಗಳನ್ನು ಮೆನುವಿನಲ್ಲಿ ಸೇರಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಅಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತೀರಾ ಅಸಮಾಧಾನಗೊಂಡ ಸಿಎಂ ಸಾಹೇಬ್ರು ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಆದೇಶಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Samosa Row: ಸಮೋಸಾ ಮಂಗಮಾಯ; ಸಿಟ್ಟಿಗೆದ್ದ ಸಿಎಂ ಸಿಬಿಐ ತನಿಖೆಗೆ ಆದೇಶ