ಅಭಿವ್ಯಕ್ತಿ
ಡಾ.ದಯಾಲಿಂಗೇಗೌಡ
ತತ್ತ್ವಶಾಸ್ತ್ರಗಳಲ್ಲಿ ಒಂದು ಪ್ರಸಿದ್ಧವಾದ ಹಡಗಿನ ಜಿಜ್ಞಾಸೆ ಇದೆ . ಅದಕ್ಕೆ ‘ಥೀಸಿಸ್’ ಹಡಗು ಎನ್ನುತ್ತಾರೆ. ಈ ಜಿಜ್ಞಾಸೆಯಲ್ಲಿ ಹಡಗಿನ ಭಾಗಗಳು ಹಳತಾಯಿತು ಎನ್ನುವ ಕಾರಣಕ್ಕೊ ಅಥವಾ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೋ, ಬಿಡಿಭಾಗಗಳನ್ನು
ಒಂದೊಂದೇ ಬದಲಾಯಿಸುತ್ತಾರೆ.
ಹಲವು ಬಾರಿ ಬಿಡಿಭಾಗಗಳ ಬದಲಾವಣೆಗಳ ನಂತರ, ಇಡೀ ಹಡಗು ಹೊಸ ಬಿಡಿ ಭಾಗಗಳಿಂದ ಮಾಡಲ್ಪಡುತ್ತದೆ. ಆಗ ನೀವು
ಹಡಗನ್ನು ಹಳೆಯ ಹಡಗಿನ ಹೆಸರಿಂದ ಗುರುತಿಸುತ್ತಿರೋ ಅಥವಾ ಇದು ಹೊಸ ಹಡಗು ಎನ್ನುತ್ತೀರೋ ಅಥವಾ ಹಳೆ
ಹಡಗಿನ ತದ್ರೂಪು ಎನ್ನುತ್ತೀರೋ ಎಂಬುದೇ ಜಿಜ್ಞಾಸೆ. ಏಕೆಂದರೆ ಹಡಗಿನಲ್ಲಿ ಉಳಿದಿರುವುದು ಹಳೆಯ ಹಡಗಿನ ರೂಪ ಅಷ್ಟೇ. ಅದರಲ್ಲಿರುವ ಪ್ರತಿ ಬಿಡಿಭಾಗಗಳು ಕೂಡ ಬೇರೆ ಯಾವುದೋ ಹಡಗಿನಿಂದ ತಂದ ಭಾಗವಾಗಿರುತ್ತದೆ.
ಆ ಕಾರಣದಿಂದ ಈ ಹಡಗಿಗೆ ಒಂದು ‘ಐಡೆಂಟಿಟಿ ಕ್ರೈಸಿಸ್’ ಹುಟ್ಟಿಕೊಳ್ಳುತ್ತದೆ. ತಾನಾರು ಎಂಬ ಭಾವನೆ ಕಾಡುತ್ತದೆ. ಇದೇ ವಿಷಯವನ್ನು ಮನುಷ್ಯನನ್ನು ಉದಾರಣೆ ತೆಗೆದುಕೊಂಡು ವಿವರಿಸೋಣ. ಒಬ್ಬ ಮನುಷ್ಯನಿಗೆ ಒಂದಾದ ಮೇಲೆ ಒಂದು ಅಂಗಗಳ ವಿಫಲತೆ ಕಾಡುತ್ತದೆ ಎಂದುಕೊಳ್ಳೋಣ. ಅವನು ಕಿಡ್ನಿ, ಲಿವರ್, ಶ್ವಾಸಕೋಶ, ಹೃದಯ, ಚರ್ಮ ಹೀಗೆ ಎಲ್ಲಾ ಅಂಗಾಂಗಳನ್ನು ಕಸಿ ಮಾಡಿಸಿಕೊಳ್ಳುತ್ತಾ ಹೋಗುತ್ತಾನೆ ಎಂದುಕೊಳ್ಳೋಣ. ಕೊನೆಗೆ ಈ ವ್ಯಕ್ತಿಯನ್ನು ಹೇಗೆ ಗುರುತಿಸುತ್ತೀರಿ?. ಅವನು ಪಡೆದ ಅಂಗಾಂಗಗಳ ವ್ಯಕ್ತಿಗಳ ಹೆಸರಿನಿಂದಲೂ ಅಥವಾ ಮೂಲ ವ್ಯಕ್ತಿಯ ಹೆಸರಿನಿಂದಲೂ?.
ಈ ವಿಷಯವನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಸೆಂಟ್ರಲ್ ಕೌನ್ಸಿಲ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಆಯು ರ್ವೇದದ ಬಗ್ಗೆ ಹೊರಡಿಸಿರುವ ಗೆಜೆಟ್ ಆದೇಶ. 2020 ತಿದ್ದುಪಡಿಯ ಪ್ರಕಾರ ಎಂಎಸ್ ಆಯುರ್ವೇದ ಶಲ್ಯತಂತ್ರ (ಜನರಲ್ ಸರ್ಜರಿ) ಮತ್ತು ಎಂಎಸ್ ಆಯುರ್ವೇದ ಶಾಲಾಕ್ಯ ತಂತ್ರ (ಕಣ್ಣು, ಮೂಗು, ಗಂಟಲು ಮತ್ತು ಮತ್ತು ದಂತ ಶಾಸ್ತ್ರ) ಇದರಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರಿಗೆ ಸುಮಾರು 58 ವಿಧದ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ.
ಕೌನ್ಸಿಲ್‌ನವರು ಕೊಡುವ ವಿವರಣೆಯ ಪ್ರಕಾರ ಈ ಶಸ್ತ್ರಚಿಕಿತ್ಸೆೆಗಳು ಮೊದಲಿನಿಂದಲೂ ಆಯುರ್ವೇದ ಪದ್ಧತಿಯಲ್ಲಿ ಮಾಡಲಾಗುತ್ತಿತ್ತು. ಇದಕ್ಕೆ ಆಧುನಿಕ ವೈದ್ಯಪದ್ಧತಿಯ ಹೆಸರುಗಳನ್ನು ಅಳವಡಿಸಿಕೊಂಡು, ಸ್ಪಷ್ಟತೆಗೋಸ್ಕರ ಮರುಪ್ರಕಟಣೆ ಮಾಡಲಾಗಿದೆ ಅಷ್ಟೇ. ಇದನ್ನ ಆಧುನಿಕ ವೈದ್ಯಪದ್ಧತಿಯವರು ಒಪ್ಪಲು ಸಿದ್ದವಿಲ್ಲ. ಕಾರಣ ಆದೇಶದಲ್ಲಿ ಆಯುರ್ವೇದಿಕ್ ವೈದ್ಯರುಗಳು ಮಾಡುವ ಸಾಮಾನ್ಯ ಶಸ್ತ್ರಚಿಕಿತ್ಸೆ ಮಾತ್ರವಲ್ಲದೆ, ಆಧುನಿಕ ವೈದ್ಯಪದ್ಧತಿಯವರು ಮಾತ್ರ ಮಾಡುವ ಪ್ಲಾಸ್ಟಿಕ್ ಸರ್ಜರಿ, ಕಣ್ಣಿನ ಶಸ್ತ್ರ ಚಿಕಿತ್ಸೆಯಂಥ ಉನ್ನತಮಟ್ಟದ ಶಸ್ತ್ರಚಿಕಿತ್ಸೆಗಳು ಕೂಡ ಸೇರಿಕೊಂಡಿರುವುದು ವಿವಾದಕ್ಕೆ ಎಡೆ ಮಾಡಿ ಕೊಟ್ಟಿದೆ.
ಆಧುನಿಕ ವೈದ್ಯಪದ್ಧತಿಯವರು ಈ ಬೆಳವಣಿಗೆಯನ್ನು ‘ಮಿಕ್ಸೋ ಪತಿ’ ಲೇವಡಿ ಮಾಡಿ ವಿರೋಧಿಸಿದ್ದಾರೆ. ಇವರ ಪ್ರಕಾರ ಈ ರೀತಿಯ ಆದೇಶದಿಂದ ಸಮಗ್ರ ವೈದ್ಯಪದ್ಧತಿ ಬೆಳವಣಿಗೆಯ ಬದಲು ‘ಕಿಚಡಿ’ ವೈದ್ಯಪದ್ಧತಿ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂದೊಂದು ಸರಕಾರಿ ಪ್ರಯೋಜಿತ ‘ನಕಲಿ ವೈದ್ಯ ಪದ್ಧತಿ’ ಎನ್ನುತ್ತಿದ್ದಾರೆ. ಇವರ ಅಭಿಪ್ರಾಯಕ್ಕೆ ಹಲವಾರು ಕಾರಣಗಳನ್ನು ಕೂಡ ಕೊಡುತ್ತಿದ್ದಾರೆ.
1.ಈ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಇರುವ ಕೆಲವೊಂದು ಶಸ್ತ್ರಚಿಕಿತ್ಸೆಗಳಿಗೆ, ಆಧುನಿಕ ವೈದ್ಯಪದ್ಧತಿಯ ಅರವಳಿಕೆ ಅವಶ್ಯಕತೆ ಇದೆ. ಆಧುನಿಕ ವೈದ್ಯಪದ್ಧತಿಯ ಅರವಳಿಕೆಯನ್ನು ಉಪಯೋಗಿಸಿಕೊಂಡು ಆಯುರ್ವೇದಿಕ್ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ ಇದು ಯಾವ ಪದ್ಧತಿ ಆಗುತ್ತದೆ?. ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ರೋಗಿಗೆ ಏನಾದರೂ ತೊಂದರೆ ಯಾದರೆ, ಅದಕ್ಕೆ ಆಯುರ್ವೇದ ಪದ್ಧತಿಯ ವೈದ್ಯರನ್ನು ಗುರಿ ಮಾಡಬೇಕೋ ಅಥವಾ ಅರವಳಿಕೆ ಪದ್ಧತಿ ವೈದ್ಯರನ್ನು ಇದಕ್ಕೆ ಜವಾಬ್ದಾರಿ ವಹಿಸಬೇಕು?
2.ಯಾವುದೇ ಶಸ್ತ್ರಚಿಕಿತ್ಸೆಯಿಂದ ರೋಗಿಗಳು ಹೊರಬರ ಬೇಕಾದರೆ ಆಂಟಿಬಯಾಟಿಕ್ಸ್‌ಗಳು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಅತ್ಯಾ ಧುನಿಕ ಚಿಕಿತ್ಸೆಗಳನ್ನು ಮಾಡುವಾಗ ತೀಕ್ಷ್ಣವಾದ ಅಂಟಿಬಯೋಟಿಕ್ಸ್ ಅಗತ್ಯವಿರುತ್ತದೆ. ಆಗ ಆಯುರ್ವೇದ ವೈದ್ಯ ಪದ್ಧತಿಯವರು ಆಧುನಿಕ ವೈದ್ಯಪದ್ಧತಿಯ ಆಂಟಿಬಯೋಟಿಕ್ಸ್‌ಗಳನ್ನು ಉಪಯೋಗಿಸುತ್ತಾರೆಯೇ? ಹಾಗೆ ಉಪಯೋಗಿಸಲು ಅನುಮತಿ ಇದೆಯೇ?
3.ಆಯುರ್ವೇದದವರು ಮಾಡಬಹುದಾದ ಶಸ್ತ್ರಚಿಕಿತ್ಸೆಗಳ ಪಟ್ಟಿಯಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು ಮಾತ್ರವಲ್ಲದೆ, ಅತ್ಯಂತ ಪರಿಣತರು ಮಾಡುವ ಉನ್ನತ ಮಟ್ಟದ ಆಪರೇಷನ್‌ಗಳೂ ಕೂಡ ಇವೆ. ಇಂತಹ ಶಸ್ತ್ರಚಿಕಿತ್ಸೆಯ ತರಬೇತಿಯನ್ನು ಆ ಯುರ್ವೇದ ವೈದ್ಯರುಗಳು ಎಲ್ಲಿ ಪಡೆದುಕೊಳ್ಳುತ್ತಾರೆ? ಹಾಗೆ ನೋಡಿದರೆ ಆಯುರ್ವೇದ ವೈದ್ಯ ಪದ್ಧತಿ ಈಗ ಶುದ್ಧ ರೂಪದಲ್ಲಿ ಉಳಿದು ಕೊಂಡಿಲ್ಲ. ಆಯುರ್ವೇದ ಪದವಿ ಕಲಿಕಾ ಹಂತದಲ್ಲಿಯೇ ಶರೀರಶಾಸ್ತ್ರದಂಥ ಹಲವಾರು ಆಧುನಿಕ ವೈದ್ಯ ಪದ್ಧತಿಯ ಪಠ್ಯಪುಸ್ತಕಗಳನ್ನು ಆಯುರ್ವೇದ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಅಧಿಕೃತವಾಗಿ, ಆಯುರ್ವೇದ ವೈದ್ಯರುಗಳು ಆಧುನಿಕ ವೈದ್ಯಪದ್ಧತಿಯ ಔಷಧಗಳನ್ನು ಉಪಯೋಗಿ ಸುತ್ತಿದ್ದರೆ . ಅನಧಿಕೃತವಾಗಿ ಬಹಳಷ್ಟು ಆಯುರ್ವೇದ ವೈದ್ಯರುಗಳು, ಆಧುನಿಕ ವೈದ್ಯಪದ್ಧತಿಯ ಔಷಧಗಳನ್ನು ಉಪಯೋ ಗಿಸುತ್ತಿದ್ದಾರೆ. ಬಹಳಷ್ಟು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ, ಕಡಿಮೆ ಸಂಬಳಕ್ಕೆ ಸಿಗುತ್ತಾರೆ ಎಂಬ ಕಾರಣದಿಂದ ಆಯುರ್ವೇದಿಕ್ ವೈದ್ಯರುಗಳನ್ನು ನೇಮಿಸಿಕೊಂಡಿದ್ದಾರೆ.
ಹಲವಾರು ಪ್ರತಿಷ್ಠಿತ ಆಧುನಿಕ ವೈದ್ಯ ಪದ್ಧತಿಯ ಆಸ್ಪತ್ರೆಗಳಲ್ಲಿ ಐಸಿಯು ನಡೆಸುವರು ಆಯುರ್ವೇದಿಕ್ ವೈದ್ಯರುಗಳು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಹಿನ್ನೆಲೆಯಲ್ಲಿ ನೋಡಿದರೆ ಆಯುರ್ವೇದಿಕ್ ವೈದ್ಯ ಪದ್ಧತಿಯನ್ನು ತನ್ನ ಮೂಲರೂಪದಲ್ಲಿ ಉಪಯೋಗಿಸುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಒಮ್ಮೆ
ಆಯುರ್ವೇದಿಕ್ ವೈದ್ಯಪದ್ಧತಿಯವರು ಆಧುನಿಕ ವೈದ್ಯಪದ್ಧತಿಯ ತರಬೇತಿ ಪಡೆದರೆ, ಆಯುರ್ವೇದ ವೈದ್ಯ ಪದ್ಧತಿಯನ್ನು ಮೂಲರೂಪದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ.
ಇದ್ದುದರಲ್ಲಿ ಆಯುರ್ವೇದಿಕ್ ವೈದ್ಯಪದ್ಧತಿ ಮತ್ತು ಆಧುನಿಕ ವೈದ್ಯಪದ್ಧತಿಗೆ, ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವಿಭಿನ್ನತೆ
ಇತ್ತು. ಆದರೆ ಈ ಗೆಜೆಟ್ ಆದೇಶದದಿಂದ ಒಂದು ವಿಭಿನ್ನತೆಯು ಕೂಡ ಮಾಯವಾಗುವ ಲಕ್ಷಣಗಳು ಇವೆ. ಆಯುರ್ವೇದದ ಅಡ್ಡಪರಿಣಾಮಗಳಿಲ್ಲದ ಚಿಕಿತ್ಸೆ ಎನ್ನುವ ಹಣೆಪಟ್ಟಿಯೊಂದಿಗೆ ಜನರು ಗುರುತಿಸುತ್ತಾರೆ. ಆದರೆ ಈಗ ಆಯುರ್ವೇದ ವೈದ್ಯ ಪದ್ಧತಿಯವರು ಶಸ್ತ್ರಚಿಕಿತ್ಸೆಗಳನ್ನು ಅಡ್ಡಪರಿಣಾಮವಿಲ್ಲದೆ ಮಾಡಲು ಸಾಧ್ಯವಿಲ್ಲದ್ದರಿಂದ, ಆಯುರ್ವೇದದ ಅಡ್ಡಪರಿಣಾಮ ರಹಿತ ಶಸ್ತ್ರಚಿಕಿತ್ಸೆ ಎಂಬ ಹಣೆಪಟ್ಟಿ ಕಳೆದುಕೊಳ್ಳುತ್ತದೆ ಎಂಬ ಸಂಶಯ ಉಂಟಾಗಿದೆ.
ರೋಗಿಯ ದೃಷ್ಟಿಕೋನದಿಂದ ನೋಡುವುದಾದರೆ, ಚಿಕಿತ್ಸೆ ಯಾವ ಪದ್ಧತಿಯಿಂದಲೂ ಬಂದಾದರೂ ರೋಗಿಗೆ ತೊಂದರೆ ಇಲ್ಲ. ಒಟ್ಟಿನಲ್ಲಿ ಅವನಿಗೆ ಗುಣವಾಗಬೇಕು. ಈ ದೃಷ್ಟಿಯನ್ನು ಇಟ್ಟುಕೊಂಡು ನೋಡಿದಾಗ ‘ಸಮಗ್ರ’ ವೈದ್ಯಪದ್ಧತಿಯ ಅವಶ್ಯಕತೆ ಖಂಡಿತ ಇದೆ. ಸಮಗ್ರ ವೈದ್ಯ ಪದ್ಧತಿ ಎಂದರೆ ಎಲ್ಲಾ ವೈದ್ಯಪದ್ಧತಿಯನ್ನು ಬೆರೆಸುವುದು ಎಂದು ಅರ್ಥವಲ್ಲ. ಸಮಗ್ರ ವೈದ್ಯ ಪದ್ಧತಿಯನ್ನು ಜಾರಿಗೆ ತರಲು ಪ್ರತಿಯೊಂದು ವೈದ್ಯಪದ್ಧತಿಯಲ್ಲಿರುವ ಶಕ್ತಿ ಮತ್ತು ದೌರ್ಬಲ್ಯಗಳನ್ನು ವೈಜ್ಞಾನಿಕವಾಗಿ ಗುರುತಿಸಬೇಕು.
ಪ್ರತಿಯೊಂದು ವೈದ್ಯಪದ್ಧತಿಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸಿದ ನಂತರ , ಪ್ರತಿ ರೋಗಕ್ಕೂ ಯಾವ ಪದ್ಧತಿಯಲ್ಲಿ ಚಿಕಿತ್ಸೆ ನೀಡಿದರೆ ಬೇಗ ಗುಣವಾಗುತ್ತದೆ ಎಂಬ ಅಧ್ಯಯನ ಮಾಡಿ, ಅದರ ಪ್ರಕಾರ ಸಾಮಾನ್ಯ ನಿಯಮಾವಳಿಗಳನ್ನು ಮಾಡಬೇಕಾಗುತ್ತದೆ. ಸಮಗ್ರ ವೈದ್ಯ ಪದ್ಧತಿ ರೂಢಿಯಲ್ಲಿರುವ ಆಸ್ಪತ್ರೆಗೆ ರೋಗಿಗಳು ಬಂದಾಗ, ಅವನಿಗೆ ರೋಗಕ್ಕೆ ಅನುಗುಣವಾಗಿ , ಅವಶ್ಯ ತಜ್ಞ ವೈದ್ಯರ ಬಳಿಗೆ ಕಳುಹಿಸಿದಾಗ ಸಮಗ್ರ ವೈದ್ಯಪದ್ಧತಿಗೆ ಒಂದು ಅರ್ಥ ಬರುತ್ತದೆ. ಆಧುನಿಕ ವೈದ್ಯ ಪದ್ಧತಿಯಲ್ಲಿ ಹಲವಾರು ವಿಭಾಗಗಳು ಇರುವಂತೆ, ಆಯುರ್ವೇದ ಕೂಡ ಒಂದು ವಿಭಾಗವಾಗಿ ಮೂಲ ರೂಪದಲ್ಲಿ ಕೆಲಸಮಾಡಲು ಸಾಧ್ಯ.
ಅದನ್ನು ಬಿಟ್ಟು ಒಂದು ವೈದ್ಯಪದ್ಧತಿಯ ವೈದ್ಯರನ್ನು, ಇನ್ನೊಂದು ವೈದ್ಯ ಪದ್ಧತಿಯಲ್ಲಿ ತರಬೇತಿ ಕೊಟ್ಟು ಅರೆಬೆಂದ ಹೈಬ್ರಿಡ್ ವೈದ್ಯರನ್ನು ತಯಾರು ಮಾಡುವುದು, ರೋಗಿಗಳ ಪ್ರಾಣದ ಜೊತೆ ಚಲ್ಲಾಟ ಮಾತ್ರವಲ್ಲದೆ, ವೈದ್ಯಪದ್ಧತಿಯ ಅಳಿವು-ಉಳಿವಿನ ಪ್ರಶ್ನೆ ಕಾಡುತ್ತದೆ. ಈ ವಿಷಯ ಸದ್ಯಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇದು ಯಾವ ಹಂತವನ್ನು ಹೋಗಿ ಮುಟ್ಟುತ್ತದೆ ಎಂಬುದು ಸದ್ಯಕ್ಕೆ ಹೇಳುವ ಹಾಗಿಲ್ಲ. ಆಲೋಪತಿ ಎಂಬುದು ಅಡ್ಡ ಪರಿಣಾಮಗಳ ಚಿಕಿತ್ಸಾ ಪದ್ಧತಿ ಎಂದು ಅಳಿಯುತ್ತಿದ್ದ, ಆಯುರ್ವೇದ
ಪದ್ಧತಿಯವರು ಈ ಗೆಜೆಟ್ ಆದೇಶವನ್ನು ಸ್ವಾಗತಿಸುವುದರ ಮೂಲಕ, ಆಧುನಿಕ ವೈದ್ಯ ಪದ್ಧತಿಯನ್ನು ಅಪ್ಪಿಕೊಂಡಿದ್ದಾರೆ.
ಹಲವಾರು ವರ್ಷ ಕಷ್ಟಪಟ್ಟು ಹಲವಾರು ವರ್ಷ ತನು, ಮನ ಧನ ವ್ಯಹಿಸಿ ಕಲಿತ ವಿದ್ಯೆಯನ್ನು, ಆಯುರ್ವೇದಿಕ್ ವೈದ್ಯರಿಗೆ ತಾಂಬೂಲದಲ್ಲಿ ಒಪ್ಪಿಸುವುದಕ್ಕೆ ಆಧುನಿಕ ವೈದ್ಯರು ಕೂಡ ತಯಾರಿಲ್ಲ. ಈ ಗೆಜೆಟ್ ಆದೇಶ, ಬ್ರಿಜ್ ಕೋರ್ಸ್ ಕಲ್ಪನೆಯಂತೆ ಆಯುರ್ವೇದಿಕ್ ವೈದ್ಯರನ್ನು, ಆಧುನಿಕ ವೈದ್ಯರನ್ನಾಗಿಸುವ ಸರಕಾರಿ ಪ್ರಾಯೋಜಿತ ಕಳ್ಳಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ರೂಪಾಂತರದಿಂದ, ಆಯುರ್ವೇದದ ಮೂಲ ರೂಪ ವಿರೂಪ ಗೊಳ್ಳುವುದೇ ಅಲ್ಲದೆ , ‘ಅನ್ಯ ಪದ್ಧತಿಯ ಅಲ್ಪ ವಿದ್ಯೆ, ಪೂರ್ಣ ವಿಪತ್ತು’ ತರಬಾರದು ಎನ್ನುತ್ತಿದ್ದಾರೆ. ಈಗಾದರೆ ಕುರಿ, ಕೋಳಿ ಮಾಂಸ ಕತ್ತರಿಸುವ ದಂಧೆ ಯವರು ಕೂಡ, ಸರ್ಜನ್‌ಗಳಾಗುವ ದಿನಗಳು ದೂರವಿಲ್ಲ.
ಕೊನೆಮಾತು: ಊಟದಲ್ಲಿ ಮುದ್ದೆ, ಚಪಾತಿ, ಅನ್ನ, ಸಾರು ರಸಂ, ಮಜ್ಜಿಗೆ, ಮೊಸರು, ಕಾಯಿಪಲ್ಯಗಳು ಮತ್ತು ಸಿಹಿತಿಂಡಿಗಳು ಇರುತ್ತವೆ. ಇವೆಲ್ಲವನ್ನು ಮೂಲರೂಪದಲ್ಲಿ ಒಂದೊಂದಾಗಿ ತಿಂದು ಆನಂದಿಸಬೇಕು ಹೊರತು, ಹೊಟ್ಟೆಯಲ್ಲಿ ಎಲ್ಲವು ಬೆರೆಯುತ್ತವೆ ಎಂಬ ವಿತಂಡ ವಾದ ಮಾಡಿ, ಎಲ್ಲವನ್ನೂ ತಟ್ಟೆೆಯಲ್ಲಿಯೇ ಒಟ್ಟಿಗೆ ಕಲಸಿ ತಿನ್ನುವುದರಿಂದ ಯಾವ ಸುಖವಿದೆ?