Thursday, 14th November 2024

Iraq Marriage act: 9 ವರ್ಷದ ಬಾಲಕಿರನ್ನೂ ವರಿಸಬಹುದು- ಸರ್ಕಾರದ ಹೊಸ ನಿಯಮಕ್ಕೆ ನಾಗರಿಕರು ಕಿಡಿ

Iraq marriage act

ಬಾಗ್ದಾದ್‌: ಇರಾಕ್‌ ಸರ್ಕಾರ (Iraq Government) ಮಹತ್ವದ ಕಾನೂನನ್ನು ಜಾರಿಗೊಳಿಸಲು ಸಜ್ಜಾಗಿದ್ದು ಇರಾಕ್‌ನ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಒಂಬತ್ತು ವರ್ಷ ಮೇಲ್ಪಟ್ಟ ಹುಡುಗಿಯರನ್ನು ಮದುವೆಯಾಗಲು (Iraq marriage act) ಪುರುಷರಿಗೆ ಅವಕಾಶ ನೀಡುವ ವಿವಾಹ ಕಾನೂನನ್ನು ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ. ಇಷ್ಟೇ ಅಲ್ಲದೆ ಮಹಿಳೆಯರಿಗೆ ವಿಚ್ಛೇದನ, ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರದ ಹಕ್ಕುಗಳನ್ನು ಕಸಿದುಕೊಳ್ಳಲು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

ಶಿಯಾ ಪಕ್ಷಗಳ ಒಕ್ಕೂಟದ ನೇತೃತ್ವದ ಸಂಪ್ರದಾಯವಾದಿ ಸರ್ಕಾರವು ಅನೈತಿಕ ಸಂಬಂಧಗಳಿಂದ ಹುಡುಗಿಯರನ್ನು ರಕ್ಷಿಸುವ ಸಲುವಾಗಿ ಈ ಕಾನೂನು ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದೆ. ಹೊಸ ಕಾನೂನಿನ ತಿದ್ದುಪಡಿಯನ್ನು  ಸೆಪ್ಟೆಂಬರ್ 16 ರಂದು ಅಂಗೀಕರಿಸಲಾಗಿದೆ. ಇದನ್ನು ಲಾ 188 ಎಂದು ಹೆಸರಿಸಲಾಗಿದ್ದು, 1959 ರಲ್ಲಿ ಇದನ್ನು ಪರಿಚಯಿಸಲಾಗಿತ್ತು. ಇದು ಪಶ್ಚಿಮ ಏಷ್ಯಾದಲ್ಲಿ ಅತ್ಯಂತ ಪ್ರಗತಿಪರ ಕಾನೂನುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಪ್ರಸ್ತಾವಿತ ತಿದ್ದುಪಡಿಯು ಇಸ್ಲಾಮಿಕ್ ಷರಿಯಾ ಕಾನೂನಿನ ಕಟ್ಟುನಿಟ್ಟಾದ ವ್ಯಾಖ್ಯಾನಕ್ಕೆ ಅನುಗುಣವಾಗಿದೆ ಮತ್ತು ಯುವತಿಯರನ್ನು “ರಕ್ಷಿಸುವ” ಗುರಿಯನ್ನು ಹೊಂದಿದೆ ಎಂದು ಸಮ್ಮಿಶ್ರ ಸರ್ಕಾರ ಹೇಳಿದೆ. ಈ ಹೊಸ ಕಾನೂನಿನ ವಿರುದ್ಧ ಇರಾಕ್‌ನ ಮಾನವ ಹಕ್ಕು ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಸಂಘಟನೆಗಳು ಸಿಡಿದೆದ್ದಿವೆ. ಬಾಲಕಿಯರ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಈ ಕಾನೂನು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವುದರಿಂದ ಗರ್ಭಪಾತ, ಬಾಲ ಗರ್ಭಧಾರಣೆ, ಗರ್ಭಿಣಿಯರ ಸಾವು ಹಾಗೂ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಳ ಆಗುತ್ತವೆ ಎಂದು ಸಂಘಟನೆಗಳು ವಾದಿಸಿವೆ.

ಇದನ್ನೂ ಓದಿ: ಇರಾಕ್‌ನಲ್ಲಿ 6 ಸಾವಿರ ವರ್ಷಗಳ ಪ್ರಾಚೀನ ರಾಮ, ಹನುಮಾನ್ ಕೆತ್ತನೆ ಪತ್ತೆ

ವಿಶ್ವಸಂಸ್ಥೆಯ ಯುನಿಸೆಫ್‌ ಪ್ರಕಾರ ಇರಾಕಿನಲ್ಲಿ ಈಗಾಗಲೇ ಬಾಲ್ಯವಿವಾಹ ಹೆಚ್ಚಾಗಿದೆ. ಇತ್ತೀಚೆಗೆ ಬಂದ ವರದಿಯ ಪ್ರಕಾರ ಸುಮಾರು ಶೇ 28 ರಷ್ಟು ಹುಡುಗಿಯರು 18 ವರ್ಷ ವಯಸ್ಸಿನೊಳಗೆ ಮದುವೆಯಾಗುತ್ತಾರೆ ಎಂದು ತಿಳಿದು ಬಂದಿದೆ. ಇನ್ನು ಈ ಕಾನೂನು ಜಾರಿಯಾದರೆ ಬಾಲ್ಯವಿವಾಹ ಇನ್ನೂ ಹೆಚ್ಚಾಗಬಹುದು.