Sunday, 24th November 2024

IPL 2025: ಲಖನೌ ಸೂಪರ್‌ ಜಯಂಟ್ಸ್‌ ತೊರೆಯಲು ಬಲವಾದ ಕಾರಣ ತಿಳಿಸಿದ ಕೆಎಲ್‌ ರಾಹುಲ್!

IPL 2025: 'Wanted to start fresh, needed freedom'-KL Rahul explains reason behind LSG exit

ನವದೆಹಲಿ: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ಈ ಬಾರಿ ಸ್ಟಾರ್‌ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಭಾರತ ತಂಡದ ಸ್ಟಾರ್‌ ಆಟಗಾರರಾದ ಕೆಎಲ್‌ ರಾಹುಲ್‌ (KL Rahul), ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಮೊಹಮ್ಮದ್‌ ಸಿರಾಜ್‌ ಸೇರಿದಂತೆ ಘಟಾನುಘಟಿಗಳು ದೊಡ್ಡ ಮೊತ್ತವನ್ನು ಜೇಬಿಗಿಳಿಸಿಕೊಳ್ಳುವ ಸಾಧ್ಯತೆ ಇದೆ. 2022 ರಿಂದ 2024ರವರೆಗೆ ಕೆಎಲ್‌ ರಾಹುಲ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರ ಆಡಿದ್ದರು. ಆದರೆ, 2025ರ ಐಪಿಎಲ್‌ ಮೆಗಾ ಹರಾಜಿನ ನಿಮಿತ್ತ ಲಖನೌ ಫ್ರಾಂಚೈಸಿಯು ಕೆಎಲ್‌ ರಾಹುಲ್‌ ಅವರನ್ನು ರಿಲೀಸ್‌ ಮಾಡಿದೆ. ಇದಕ್ಕೆ ಬಲವಾದ ಕಾರಣವೇನೆಂದು ಸ್ವತಃ ಕೆಎಲ್‌ ರಾಹುಲ್‌ ಅವರೇ ಬಹಿರಂಗಪಡಿಸಿದ್ದಾರೆ.

2025ರ ಐಪಿಎಲ್‌ ಟೂರ್ನಿಯ ಆಟಗಾರರ ಮೆಗಾ ಹರಾಜು ನಿಮಿತ್ತ ಸ್ಟಾರ್‌ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿದ ಕೆಎಲ್‌ ರಾಹುಲ್‌, ಕಳೆದ ಮೂರು ವರ್ಷಗಳಿಂದ ನಾಯಕತ್ವ ವಹಿಸಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡವನ್ನು ಇದೀಗ ತೊರೆಯಲು ಬಲವಾದ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಪಂದ್ಯದಲ್ಲಿ ಮುಕ್ತವಾಗಿ ಆಡುವ ಸಲುವಾಗಿ ತಾನು ಎಲ್‌ಎಸ್‌ಜಿ ತಂಡವನ್ನು ತೊರೆದಿದ್ದೇನೆಂದು ಅವರು ತಿಳಿಸಿದ್ದಾರೆ.

ಸ್ವಾತಂತ್ರ ಇರುವ ತಂಡದಲ್ಲಿ ಆಡಲು ಬಯಸುತ್ತೇನೆ

“ನಾನು ಹೊಸದಾಗಿ ಆಟವನ್ನು ಆರಂಭಿಸಲು ಬಯಸುತ್ತೇನೆ, ನನ್ನ ಆಯ್ಕೆಗಳನ್ನು ಅನ್ವೇಷಿಸಲು ನಾನು ಬಯಸುತ್ತೇನೆ ಮತ್ತು ನಾನು ಸ್ವಲ್ಪ ಸ್ವಾತಂತ್ರವನ್ನು ಕಂಡುಕೊಳ್ಳುವ ಸ್ಥಳಕ್ಕೆ ಹೋಗಿ ಆಡಲು ಬಯಸುತ್ತೇನೆ. ಅಲ್ಲಿ ತಂಡದ ವಾತಾವರಣ ಸಂಪೂರ್ಣವಾಗಿ ಹಗುರವಾಗಿರಬೇಕು. ಕೆಲವೊಮ್ಮೆ ನೀವು ನಿಮ್ಮಲ್ಲಿರುವ ಒಳ್ಳೆಯದನ್ನು ಹೊರಗೆಳೆಯಲು ಹೊರಬೇಕಾಗುತ್ತದೆ,” ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

“ತುಂಬಾ ದಿನಗಳಿಂದ ನಾನು ಭಾರತ ಟಿ20 ತಂಡದಿಂದ ಹೊರಗುಳಿದಿದ್ದೇನೆ. ಸದ್ಯ ನಾನು ಎಲ್ಲಿ ನಿಲ್ಲಬೇಕು ಹಾಗೂ ನಾನು ಮತ್ತೆ ತಂಡಕ್ಕೆ ಮರಳಲು ಏನು ಮಾಡಬೇಕೆಂದು ನನಗೆ ತಿಳಿದಿದೆ. ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದೇನೆ. ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಐಪಿಎಲ್‌ ನಿಮಗೆ ಉತ್ತಮ ವೇದಿಕೆ. ಭಾರತ ಟಿ20 ತಂಡಕ್ಕೆ ಕಮ್‌ಬ್ಯಾಕ್‌ ಮಾಡುವುದು ನನ್ನ ಪ್ರಮುಖ ಗುರಿ,” ಎಂದು ಕನ್ನಡಿಗ ಹೇಳಿದ್ದಾರೆ.

2024ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪ್ರದರ್ಶನ

ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಕೆಎಲ್‌ ರಾಹುಲ್‌ ಅವರು ನಾಯಕನಾಗಿ ಹಾಗೂ ಆಟಗಾರನಾಗಿ ವೈಫಲ್ಯ ಅನುಭವಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಲಖನೌ ಸೂಪರ್‌ ಜಯಂಟ್ಸ್‌ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿರಲಿಲ್ಲ. ರಾಹಲ್‌ ಕೂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. 2024ರಲ್ಲಿ ಲಖನೌ ಆಡಿದ್ದ 14 ಪಂದ್ಯಗಳಿಂದ 14 ಅಂಕಗಳನ್ನು ಕಲೆ ಹಾಕಿತ್ತು ಹಾಗೂ 7ನೇ ಸ್ಥಾನದ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು. ಆದರೆ, ಕೆಎಲ್‌ ರಾಹುಲ್‌ ಅವರು 520 ರನ್‌ಗಳನ್ನು ಕಲೆ ಹಾಕಿದರೂ ಕೆಲ ನಿರ್ಣಾಯಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ವಿಫಲರಾಗಿದ್ದರು.

ಈ ಸುದ್ದಿಯನ್ನುಓದಿ: KL Rahul: ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ಸಿಹಿ ಸುದ್ದಿ ಹಂಚಿಕೊಂಡ ಕೆಎಲ್‌ ರಾಹುಲ್‌!