ಚೆನ್ನೈ: ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ಹಾಗೂ ನಟಿ ಸಾಯಿ ಪಲ್ಲವಿ (Sai Pallavi) ನಟನೆಯ ‘ಅಮರನ್’ ಸಿನಿಮಾ (Amaran Movie) ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿಯೂ ಸಖತ್ ಸದ್ದು ಮಾಡುತ್ತಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಸ್ಪೂರ್ತಿದಾಯಕ ಕಥೆ ಹೇಳುವ ಬಹುನಿರೀಕ್ಷಿತ ಬಯೋಪಿಕ್ ಸಿನಿಮಾ 2024ರ ತಮಿಳು ಚಿತ್ರರಂಗದ ಅತಿದೊಡ್ಡ ಬ್ಲಾಕ್ಬಸ್ಟರ್ಗಳಲ್ಲಿ ಒಂದಾಗಿದೆ. ಅ. 31ರಂದು ತೆರೆಕಂಡ ʼಅಮರನ್ʼ ಸಿನಿಮಾ ಪ್ರೇಕ್ಷಕರು, ವಿಮರ್ಶಕರು ಸೇರಿ ಎಲ್ಲ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ 180 ಕೋಟಿ ರೂ. ಗಳಿಸಿದೆ.
ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ನಟಿ ಸಾಯಿ ಪಲ್ಲವಿ ಅದ್ಭುತವಾಗಿ ಸಾಥ್ ಕೊಟ್ಟಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಈಗಾಗಲೇ ಹಿಟ್ ಲಿಸ್ಟ್ ಸೇರಿದೆ.
Thank you sir 😊👍 https://t.co/8rJPYxgqol
— Sivakarthikeyan (@Siva_Kartikeyan) November 8, 2024
ಶಿವಕಾರ್ತಿಕೇಯನ್ ಅವರು ಮೇಜರ್ ಮುಕುಂದ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಪತ್ನಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶನಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ದೀಪಾವಳಿ ಹಬ್ಬದ ದಿನದಂದು ತಮಿಳು ಜತೆಗೆ ಕನ್ನಡ, ತೆಲುಗು, ಹಿಂದಿ, ಮಲಯಾಳಂನಲ್ಲಿಯೂ ಚಿತ್ರ ತೆರೆ ಕಂಡಿದೆ.
2ನೇ ಸೋಮವಾರ 4 ಕೋಟಿ ರೂ. ಕಲೆಕ್ಷನ್
ಚಿತ್ರ ತೆರೆಕಂಡ 2ನೇ ಸೋಮವಾರ ʼಅಮರನ್ʼ ತಮಿಳುನಾಡಿನಲ್ಲಿ ಬರೋಬ್ಬರಿ 4 ಕೋಟಿ ರೂ. ಗಳಿಸಿದೆ. ಆ ಮೂಲಕ ತಮಿಳುನಾಡು ಒಂದರಲ್ಲೇ 122.75 ಕೋಟಿ ರೂ. ಕಲೆಕ್ಷನ್ ಮಾಡಿದೆ. ದೇಶಾದ್ಯಂತ 6.75 ಕೋಟಿ ರೂ. ಬಾಚಿಕೊಳ್ಳುವ ಮೂಲಕ 12 ದಿನಗಳ ಒಟ್ಟು ಗಳಿಕೆ 186.50 ಕೋಟಿ ರೂ.ಗೆ ತಲುಪಿದೆ.
ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂ. ಕಲೆಕ್ಷನ್
ಭಾನುವಾರದ ವೇಳೆಗೆ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ʼಅಮರನ್ʼ ಒಟ್ಟು ಬರೋಬ್ಬರಿ 259 ಕೋಟಿ ರೂ. ಗಳಿಸುವ ಮೂಲಕ 250 ಕೋಟಿ ರೂ. ಮೈಲಿಗಲ್ಲು ದಾಟಿದೆ. ಈ ಮೂಲಕ 300 ಕೋಟಿ ರೂ. ಕ್ಲಬ್ ಸೇರಲು ಸಜ್ಜಾಗಿದೆ. ಭುವನ್ ಅರೋರಾ, ರಾಹುಲ್ ಬೋಸ್, ಲಲ್ಲು, ಶ್ರೀಕುಮಾರ್, ಶ್ಯಾಮ್ ಮೋಹನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಇಂಡಿಯಾಸ್ ಮೋಸ್ಟ್ ಫಿಯರ್ಲೆಸ್ʼ ಕೃತಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಈ ಕೃತಿಯಲ್ಲಿ ಮೇಜರ್ ವರದರಾಜನ್ ಅವರ ಬಗ್ಗೆ ಸಾಕಷ್ಟು ಬರೆದಿದ್ದು ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಕಥೆ ಬರೆದು, ನಿರ್ದೇಶಿಸಿದ್ದಾರೆ. ಇತರ ಬಿಗ್ ಬಜೆಟ್ ಚಿತ್ರಗಳ ಹೊರತಾಗಿಯೂ ʼಅಮರನ್ʼ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ.
ಈ ಸುದ್ದಿಯನ್ನೂ ಓದಿ: Navjot Singh Sidhu: ‘ಠೋಕೋ ಭಾಯಿ ಠೋಕೋ..’- ಕಪಿಲ್ ಶರ್ಮಾ ಶೋಗೆ ಮರಳಿದ ನವಜೋತ್ ಸಿಂಗ್ ಸಿಧು -5 ವರ್ಷಗಳ ಹಿಂದೆ ಏನಾಗಿತ್ತು?