Wednesday, 27th November 2024

IND vs AUS: ರಹಸ್ಯ ಸ್ಥಳದಲ್ಲಿ ಟೀಮ್‌ ಇಂಡಿಯಾ ಅಭ್ಯಾಸ

ಪರ್ತ್‌:  ಹೆಚ್ಚುವರಿ ನೆಟ್‌ ಅಭ್ಯಾಸ ನಡೆಸುವ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಭಾರತೀಯ ಕ್ರಿಕೆಟ್ ತಂಡ  ಭಾರತ “ಎ’ ವಿರುದ್ಧ ಆಡಬೇಕಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ರದ್ದು ಮಾಡಿತ್ತು. ಇದೀಗ ಟೀಮ್‌ ಇಂಡಿಯಾ(Indian cricket team) ಆಟಗಾರರು ರಹಸ್ಯ ಸ್ಥಳದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸದ ಅವಧಿಗೆ ಸಾರ್ವಜನಿಕ ವೀಕ್ಷಣೆ ನಿಷೇಧ, ಫೋನ್ ಬಳಕೆ ಸೇರಿದಂತೆ ಸಿಬ್ಬಂದಿಗೆ ಭಾರೀ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲಿನ ಬಳಿಕ ಮಾಜಿ ಆಟಗಾರರಿಂದ ಭಾರೀ ಟೀಕೆಗಳು ಕೇಳಿ ಬಂದಿತ್ತು. ಹೀಗಾಗಿ ಕೋಚ್‌ ಗೌತಮ್‌ ಗಂಭೀರ್‌ ಮತ್ತು ತಂಡದ ಕೆಲವು ಹಿರಿಯ ಆಟಗಾರರು ಹೆಚ್ಚುವರಿ ಅಭ್ಯಾಸದ ಅವಧಿಯನ್ನು ಬಯಸಿದ್ದರಿಂದ ಅಭ್ಯಾಸ ಪಂದ್ಯವನ್ನು ಕೈಬಿಡಲಾಗಿತ್ತು. ಭಾರತ ಹಿಂದಿನೆರಡೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಪಂದ್ಯವನ್ನಾಡಿಯೇ ಟೆಸ್ಟ್‌ ಸರಣಿಯನ್ನು ಆಡಲಿಳಿದಿತ್ತು. ನವೆಂಬರ್ 22ರಿಂದ ಜನವರಿ 7ರವರೆಗೆ ಐದು ಪಂದ್ಯಗಳು ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.

ಭಾರತ ತಂಡದ ಅಭ್ಯಾಸಕ್ಕೆ ಸಾರ್ವಜನಿಕ ವೀಕ್ಷಣೆಯನ್ನು ನಿರ್ಬಂಧಿಸಲಾಗಿದ್ದರೂ ರಿಷಭ್‌ ಪಂತ್‌, ಯಶಸ್ವಿ ಜೈಸ್ವಾಲ್‌ ಮತ್ತು ಕೆಲ ಆಟಗಾರರು ಬ್ಯಾಟಿಂಗ್‌ ಕೋಚ್‌ ಅಭಿಷೇಕ್‌ ನಾಯರ್‌ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. 1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಇದು ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಇದನ್ನೂ ಓದಿ IND vs PAK: ಪಾಕಿಸ್ತಾನಕ್ಕೆ ಏಕೆ ಬರುವುದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್‌

ನಾಯಕ ರೋಹಿತ್‌ ಶರ್ಮಾ ಸದ್ಯ ಆಸೀಸ್‌ಗೆ ತೆರಳುವ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆಸೀಸ್​ ನೆಲದಲ್ಲಿ ಯಾವುದೇ ರೀತಿಯ ಪಿಚ್​ ಎದುರಾದರೂ ಭಾರತ ಅತ್ಯುತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದೆ ಎಂದು ಕೋಚ್‌ ಗಂಭೀರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿರ್ಮಾಣವಾಗುವ ಪಿಚ್​ಗಳ ಮೇಲೆ ನಾವು ನಿಯಂತ್ರಣ ಹೊಂದಿಲ್ಲ. ಅದು ಅವರ ಆಯ್ಕೆ. ಅವರು ಯಾವುದೇ ರೀತಿಯ ಪಿಚ್​ ಸಿದ್ಧಪಡಿಸಿದರೂ, ನಾವು ಅದರಲ್ಲಿ ಆಡಲು ಸಿದ್ಧ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಯಾವುದೇ ತಂಡವನ್ನಾದರೂ ಸೋಲಿಸಬಲ್ಲೆವು ಎಂದು ಗಂಭೀರ್‌ ಆಸೀಸ್‌ ಪ್ರವಾಸಕ್ಕೂ ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.