Friday, 15th November 2024

KL Rahul: ಐಪಿಎಲ್‌ ಮೂಲಕ ಟಿ20 ತಂಡಕ್ಕೆ ಕಮ್‌ಬ್ಯಾಕ್‌; ರಾಹುಲ್‌ ವಿಶ್ವಾಸ

ಸಿಡ್ನಿ: ಐಪಿಎಲ್‌(IPL 2025) ಟೂರ್ನಿಯಲ್ಲಿ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಭಾರತ ಟಿ20 ತಂಡಕ್ಕೆ ಮತ್ತೆ ಕಮ್‌ ಬ್ಯಾಕ್‌ ಮಾಡುವುದಾಗಿ ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಹೇಳಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್‌ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ರಾಹುಲ್‌ ಈ ವಿಚಾರ ತಿಳಿಸಿದ್ದಾರೆ.

ʼಸ್ವಲ್ಪ ಸಮಯದಿಂದ ನಾನು ಟಿ20 ತಂಡದಿಂದ ಹೊರಗಿದ್ದೇನೆ. ತಂಡಕ್ಕೆ ಕಂಬ್ಯಾಕ್ ಮಾಡಲು ಏನು ಮಾಡಬೇಕೆಂದು ನನಗೆ ತಿಳಿದಿದೆ. ಹಾಗಾಗಿ, ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮತ್ತೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ರಾಹುಲ್ ಹೇಳಿದ್ದಾರೆ.

ಭಾರತದ ಪರ 72 ಟಿ20 ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 68 ಇನಿಂಗ್ಸ್​ಗಳಲ್ಲಿ ಒಟ್ಟು 2265 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿದ್ದಾರೆ. ರಾಹುಲ್‌ ಭಾರತ ಪರ ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿದ್ದು 2022ರಲ್ಲಿ ನಡೆದಿದ್ದ ಟಿ20 ವಿಶ್ವ ಕಪ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಸೆಮಿ ಫೈನಲ್‌ ಪಂದ್ಯ. ಇದಾದ ಬಳಿಕ ರಾಹುಲ್‌ ಅವರಿಗೆ ಅವಕಾಶ ಸಿಗಲಿಲ್ಲ.

ಇದೇ ಸಂದರ್ಶನದಲ್ಲಿ ರಾಹುಲ್‌ ಲಕ್ನೋ ಸೂಪರ್​ಜೈಂಟ್ಸ್​ ತಂಡದಿಂದ ಹೊರ ಬಂದ ಬಗ್ಗೆಯೂ ತಿಳಿಸಿದರು. ‘ನಾನು ಹೊಸ ಆರಂಭ ಕಾಣಲು ಮುಂದಾಗಿದ್ದೇನೆ. ನನ್ನ ಮುಂದಿರುವ ಹೊಸ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೇನೆ. ಸ್ವತಂತ್ರವಾಗಿ ಆಡುವ ಹಂಬಲದಲ್ಲಿದ್ದೇನೆ. ತಂಡದ ವಾತಾವರಣ ತಿಳಿಯಾಗಿರುವ ಕಡೆ ಆಡಬೇಕೆಂದಿದ್ದೇನೆ’ ಎಂದು ಹೇಳಿದ್ದಾರೆ. ರಾಹುಲ್‌ರನ್ನು ತಂಡದಿಂದ ಕೈ ಬಿಟ್ಟ ವೇಳೆ ಪ್ರತಿಕ್ರಿಯೆ ನೀಡಿದ್ದ ಲಕ್ನೋ ತಂಡದ ಮಾಲೀಕ ಸಂಜೀವ್​ ಗೋಯೆಂಕಾ, ನಮಗೆ ತಂಡಕ್ಕಾಗಿ ಆಡುವ ಆಟಗಾರರಷ್ಟೇ ಬೇಕು ಎಂದಿದ್ದರು.

ಇದನ್ನೂ ಓದಿ IND vs SA 3rd T20I Match Preview: ಸೆಂಚುರಿಯನ್‌ನಲ್ಲಿ ಕಮ್‌ಬ್ಯಾಕ್‌ ಮಾಡುತ್ತಾ ಟೀಮ್‌ ಇಂಡಿಯಾ?

ಪರ್ತ್‌ ಟೆಸ್ಟ್‌ನಲ್ಲಿ ರಾಹುಲ್‌ ಆರಂಭಿಕ

ರೋಹಿತ್​ ಶರ್ಮ ಮೊದಲ ಟೆಸ್ಟ್​ಗೆ ಗೈರಾದರೆ ಯಶಸ್ವಿ ಜೈಸ್ವಾಲ್​ ಜತೆಗೆ ಇನಿಂಗ್ಸ್​ ಆರಂಭಿಸಲು ಅಭಿಮನ್ಯು ಈಶ್ವರನ್​ ಮತ್ತು ಕೆಎಲ್​ ರಾಹುಲ್(KL Rahul)​ ರೇಸ್​ನಲ್ಲಿದ್ದಾರೆ. ಈ ಪೈಕಿ ಅನುಭವದ ಆಧಾರದಲ್ಲಿ ರಾಹುಲ್‌ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕ. ಈಗಾಗಕೇ ಕೋಚ್‌ ಗಂಭೀರ್‌ ಕೂಡ​ ರಾಹುಲ್‌ರನ್ನು ಆರಂಭಿಕನಾಗಿ ಆಡಿಸುವ ಒಲವು ತೋರಿದ್ದಾರೆ.

ರಾಹುಲ್‌ ಆರಂಭಿಕನಾಗಿ ವಿದೇಶಿ ಪ್ರವಾಸದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ರಾಹುಲ್‌ ಇದುವರೆಗೆ ಆರಂಭಿನಾಗಿ ವಿದೇಶಿ ನೆಲದಲ್ಲಿ ಒಟ್ಟು 29 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 48.93 ಸ್ಟ್ರೇಕ್‌ ರೇಟ್‌ನೊಂದಿಗೆ1682 ರನ್‌ ಕಲೆ ಹಾಕಿದ್ದಾರೆ. ಓಪನರ್ ಆಗಿ ವಿದೇಶದಲ್ಲಿ 158 ರನ್ ಗಳಿಸಿದ್ದು ಅವರ ಗರಿಷ್ಠ ಸಾಧನೆ. ಇದೇ ವೇಳೆ ನಾಲ್ಕು ಬಾರಿ ಶೂನ್ಯ ಸಂಕಟಕ್ಕೂ ಸಿಲುಕಿದ್ದರು. ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವ ರಾಹುಲ್‌ಗೆ ಆಸೀಸ್‌ ಪ್ರವಾಸ ಒಂದು ರೀತಿಯಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಆಸೀಸ್‌ ಎ ತಂಡದ ವಿರುದ್ಧ ರಾಹುಲ್‌ ಎರಡೂ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದರು. ಇದೀಗ ಆಸೀಸ್‌ ಟೆಸ್ಟ್‌ನಲ್ಲಿಯೂ ವಿಫಲವಾದರೆ ರಾಹುಲ್‌ಗೆ ತಂಡದಿಂದ ಗೇಟ್‌ ಪಾಸ್‌ ಸಿಗುವುದು ಖಚಿತ. ನಿರೀಕ್ಷಿತ ಪ್ರದರ್ಶನ ತೋರಿದರೆ ತಂಡದಲ್ಲಿ ಇನ್ನೂ ಕೆಲ ಕಾಲ ಮುಂದುವರಿಯಬಹುದು.