Sunday, 24th November 2024

ಅಂಧರ ಟಿ20 ವಿಶ್ವಕಪ್: ಪಾಕ್‌ಗೆ ಭಾರತ ತಂಡದ ಪ್ರಯಾಣ ಅನುಮಾನ

ನವದೆಹಲಿ: ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯವನ್ನಾಡಲು ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದ ಬೆನ್ನಲ್ಲೇ, ಇದೇ ನವೆಂಬರ್ 22 ರಿಂದ ಡಿಸೆಂಬರ್ 3 ರವರೆಗೆ ಪಾಕಿಸ್ತಾನದಲ್ಲಿ ನಡೆಯುವ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್(Blind T20 World Cup) ಟೂರ್ನಿಯಲ್ಲಿಯೂ ಭಾರತ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ. ಪಾಕ್‌ಗೆ ತೆರಳಲು ಭಾರತೀಯ ಪುರುಷರ ಅಂಧರ ಕ್ರಿಕೆಟ್ ತಂಡಕ್ಕೆ(India Blind Cricket Team) ವಿದೇಶಾಂಗ ವ್ಯವಹಾರಗಳ ಸಚಿವಾಲಯ(Ministry of External Affairs) ಇನ್ನೂ ಅನುಮತಿ ನೀಡಿಲ್ಲ.

ಭಾರತೀಯ ಅಂಧರ ಕ್ರಿಕೆಟ್ ತಂಡವು ಈಗಾಗಲೇ ಪಾಕ್‌ಗೆ ತೆರಳುವ ಬಗ್ಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಸ್ವೀಕರಿಸಿದೆ ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅಧಿಕೃತ ಅನುಮತಿ ಪಡೆದಿಲ್ಲ. ಒಂದೊಮ್ಮೆ ಅನುಮತಿ ಸಿಗದಿದ್ದರೆ ಭಾರತ ವಿಶ್ವಕಪ್‌ನಲ್ಲಿ ಭಾಗವಹಿಸುವಂತಿಲ್ಲ. ಇದುವರೆಗಿನ ಮೂರು ಆವೃತ್ತಿಯ T20 ವಿಶ್ವಕಪ್‌ಗಳಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು.

ಇದನ್ನೂ ಓದಿ IND vs SA 3rd T20I Match Preview: ಸೆಂಚುರಿಯನ್‌ನಲ್ಲಿ ಕಮ್‌ಬ್ಯಾಕ್‌ ಮಾಡುತ್ತಾ ಟೀಮ್‌ ಇಂಡಿಯಾ?

ʼಅಂಧ ಕ್ರಿಕೆಟಿಗರು ತಮ್ಮ ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಲು ವಿಶ್ವಕಪ್‌ ಅತಿದೊಡ್ಡ ವೇದಿಕೆಯಾಗಿದೆ. ದೇಶವನ್ನು ಪ್ರತಿನಿಧಿಸುವುದು ಮತ್ತು ಪಾಕಿಸ್ತಾನದಲ್ಲಿ ವಿಶ್ವಕಪ್ ಆಡುವುದು ಎಲ್ಲಾ ಆಟಗಾರರಿಗೆ ಅಪರೂಪದ ಅವಕಾಶವಾಗಿದೆ. ಭಾರತ ಸಚಿವಾಲಯ/ಸರ್ಕಾರವು ಶೀಘ್ರವಾಗಿ ಎನ್​ಒಸಿ ನೀಡುತ್ತದೆ ಎಂದು ನಾವು ಭಾವಿಸುತ್ತೇವೆʼ ಎಂದು ಸಿಎಬಿಐ ಅಧ್ಯಕ್ಷ ಮಹಾಂತೇಶ್ ಜಿ ಕಿವಡಸನ್ನವರ್ ಹೇಳಿದ್ದಾರೆ. ಒಂದೊಮ್ಮೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಅಂಧರ ಕ್ರಿಕೆಟ್‌ ತಂಡಕ್ಕೆ ಪಾಕಿಸ್ತಾನಕ್ಕೆ ತೆರಳುವ ಅನುಮತಿ ನೀಡಿದರೆ, ಆಗ ಚಾಂಪಿಯನ್ಸ್‌ ಟ್ರೋಫಿ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

B1 ವರ್ಗದಲ್ಲಿ (ಸಂಪೂರ್ಣವಾಗಿ ಕುರುಡರು): ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ (ಆಂಧ್ರಪ್ರದೇಶ), ದೇಬರಾಜ್ ಬೆಹೆರಾ (ಒಡಿಶಾ), ನರೇಶ್‌ಭಾಯ್ ಬಲುಭಾಯಿ ತುಮ್ಡಾ (ಗುಜರಾತ್), ನೀಲೇಶ್ ಯಾದವ್ (ದೆಹಲಿ), ಸಂಜಯ್ ಕುಮಾರ್ ಶಾ (ದೆಹಲಿ), ಮತ್ತು ಪ್ರವೀಣ್ ಕುಮಾರ್ ಶರ್ಮಾ (ಹರಿಯಾಣ).

B2 ವರ್ಗ (ಭಾಗಶಃ ಕುರುಡು – 2 ಮೀಟರ್‌ವರೆಗಿನ ದೃಷ್ಟಿ): ವೆಂಕಟೇಶ್ವರ ರಾವ್ ದುನ್ನಾ (ಆಂಧ್ರ ಪ್ರದೇಶ), ಪಂಕಜ್ ಭೂಯೆ (ಒಡಿಶಾ), ಲೋಕೇಶ (ಕರ್ನಾಟಕ), ರಂಬೀರ್ ಸಿಂಗ್ (ದೆಹಲಿ), ಮತ್ತು ಇರ್ಫಾನ್ ದಿವಾನ್ (ದೆಹಲಿ).

B3 ವರ್ಗದಲ್ಲಿ (ಭಾಗಶಃ ದೃಷ್ಟಿ – 6 ಮೀಟರ್‌ವರೆಗಿನ ದೃಷ್ಟಿ): ತಂಡವು ದುರ್ಗಾ ರಾವ್ ತೋಂಪಕಿ (ಆಂಧ್ರಪ್ರದೇಶ), ಸುನಿಲ್ ರಮೇಶ್ (ಕರ್ನಾಟಕ), ಸುಖರಾಮ್ ಮಾಝಿ (ಒಡಿಶಾ), ರವಿ ಅಮಿತ್ (ಆಂಧ್ರಪ್ರದೇಶ), ದಿನೇಶ್‌ಭಾಯ್ ಚಮೈದಭಾಯಿ ರಥ್ವಾ (ಗುಜರಾತ್) , ಮತ್ತು ಧಿನಗರ ಗೋಪು (ಪಾಂಡಿಚೆರಿ).