Sunday, 24th November 2024

IND vs AUS: ಪರ್ತ್‌ ಟೆಸ್ಟ್‌ಗೆ ಬೌನ್ಸಿ ಪಿಚ್‌; ಎಚ್ಚರಿಕೆ ನೀಡಿದ ಕ್ಯುರೇಟರ್‌

ಪರ್ತ್: ಬಾರ್ಡರ್‌-ಗಾವಸ್ಕರ್ ಟ್ರೋಫಿ(Border-Gavaskar Trophy) ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯ(IND vs AUS) ನಡೆಯಲಿರುವ ಪರ್ತ್‌ನ ಓಪ್ಟಸ್‌ ಕ್ರೀಡಾಂಗಣದ(Optus Stadium) ಪಿಚ್‌ ಹೆಚ್ಚು ವೇಗ ಹಾಗೂ ಬೌನ್ಸಿಯಿಂದ(Perth pitch report) ಕೂಡಿರಲಿದೆ ಎಂದು ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್‌ (ಡಬ್ಲ್ಯುಎಸಿಎ) ಮುಖ್ಯ ಕ್ಯೂರೇಟರ್ ಐಸಾಕ್ ಮೆಕ್‌ಡೊನಾಲ್ಡ್‌ ಹೇಳಿದ್ದಾರೆ.

ಸದ್ಯ ಭಾರತ ತಂಡವು ಡಬ್ಲ್ಯುಎಸಿಎ ಕ್ರೀಡಾಂಗಣದ ಸಮೀಪವಿರುವ ಸೆಂಟರ್‌ನಲ್ಲಿ ಅಭ್ಯಾಸ ಮಾಡುವದರತ್ತ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ತಂಡವೂ ಇಲ್ಲಿ ತಾಲೀಮು ನಡೆಸುತ್ತಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್‌ ಪಂದ್ಯಕ್ಕೆ ನೀಡಲಾಗಿದ್ದ ಮಾದರಿಯ ಪಿಚ್‌ ಅನ್ನೇ ಈಗಲೂ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ. ಅಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೂವರು ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಸೇರಿಕೊಂಡು ಒಟ್ಟು 12 ವಿಕೆಟ್‌ ಕಿತ್ತಿದ್ದರು.

ಟೀಮ್‌ ಇಂಡಿಯಾ(Indian cricket team) ಆಟಗಾರರು ರಹಸ್ಯ ಸ್ಥಳದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸದ ಅವಧಿಗೆ ಸಾರ್ವಜನಿಕ ವೀಕ್ಷಣೆ ನಿಷೇಧ, ಫೋನ್ ಬಳಕೆ ಸೇರಿದಂತೆ ಸಿಬ್ಬಂದಿಗೆ ಭಾರೀ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಭಾರತ ಹಿಂದಿನೆರಡೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಪಂದ್ಯವನ್ನಾಡಿಯೇ ಟೆಸ್ಟ್‌ ಸರಣಿಯನ್ನು ಆಡಲಿಳಿದಿತ್ತು. ಆದರೆ ಈ ಬಾರಿ ಅಭ್ಯಾಸ ಪಂದ್ಯವನ್ನಾಡದೆ ನೇರವಾಗಿ ಕಣಕ್ಕಿಳಿಯಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಸೋತರೆ ಮತ್ತೆ ಗಂಭೀರ್‌ ವಿರುದ್ಧ ಮಾಜಿ ಆಟಗಾರರು ಟೀಕಾಪ್ರಹಾರ ಮಾಡುವುದು ಖಚಿತ. ಸೋಲಿಗೆ ಗಂಭೀರ್‌ ಕೆಟ್ಟ ನಿರ್ಧಾರವೇ ಕಾರಣ ಎಂದರೂ ಅಚ್ಚರಿಯಿಲ್ಲ. ಏಕೆಂದರೆ  ಭಾರತ “ಎ’ ವಿರುದ್ಧ ಆಡಬೇಕಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ಗಂಭೀರ್‌ ರದ್ದು ಮಾಡಿದ್ದರು. ಇದರ ಬದಲಾಗಿ ಹೆಚ್ಚುವರಿ ನೆಟ್‌ ಅಭ್ಯಾಸ ಮಾಡುವುದಾಗಿ ತಿಳಿಸಿದ್ದರು.

ಇದನ್ನೂ ಓದಿ IND vs SA: ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಖಚಿತ

 1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಇದು ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಸರಣಿ ಸೋತರೆ ನಾಯಕ ರೋಹಿತ್‌,ವಿರಾಟ್‌ ಕೊಹ್ಲಿ, ಆರ್‌. ಅಶ್ವಿನ್‌ ಅವರಂತಹ ಹಿರಿಯ ಆಟಗಾರರ ಟೆಸ್ಟ್‌ ಕ್ರಿಕೆಟ್‌ ಅಂತ್ಯವಾಗುವ ಸಾಧ್ಯತೆ ಇದೆ. ಜತೆಗೆ ಕೋಚ್‌ ಗಂಭೀರ್‌ ಸ್ಥಾನಕ್ಕೂ ಕುತ್ತು ಬರಬಹುದು.