Friday, 22nd November 2024

MS Dhoni: ವಂಚನೆ ಪ್ರಕರಣ; ಧೋನಿಗೆ ಹೈಕೋರ್ಟ್‌ ನೊಟೀಸ್‌

ರಾಂಚಿ: ಮುಂಬರುವ ಐಪಿಎಲ್‌ 18ನೇ ಆವೃತ್ತಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಭಾರತ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಮಹೇಂದ್ರ ಸಿಂಗ್‌ ಧೋನಿಗೆ(MS Dhoni) ಜಾರ್ಖಂಡ್ ಹೈಕೋರ್ಟ್(Jharkhand High Court) ನೋಟಿಸ್ ನೀಡಿದೆ. ಇದೇ ವರ್ಷದ ಜನವರಿಯಲ್ಲಿ ಧೋನಿ(MS Dhoni) ತಮ್ಮ ಮಾಜಿ ಬಿಸಿನೆಸ್ ಪಾರ್ಟ್ನರ್‌ಗಳಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ 15 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ(criminal case) ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿ ತಮ್ಮ ನಿಲುವನ್ನು ವಿವರಿಸುವಂತೆ ಧೋನಿಗೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ.

2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದಾರೆ, ಜತೆಗೆ ನನ್ನ ಹೆಸರು ಬಳಸಿ 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಾಸ್‌ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಇದೇ ಜನವರಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಆರ್ಕಾ ಸ್ಪೋರ್ಟ್ಸ್ ಫ್ರಾಂಚೈಸಿ(Aarka Sports and Management Limited)ಜತೆ ಆಗಸ್ಟ್ 15, 2021ರಲ್ಲಿ ಒಪ್ಪಂದವನ್ನು ರದ್ದುಗೊಳಿಸಿದ್ದರೂ ದಿವಾಕರ್ ಮತ್ತು ಸೌಮ್ಯ ತಮ್ಮ ಹೆಸರನ್ನು ಬಳಸಿಕೊಂಡು ವ್ಯವಹಾರ ನಡೆಸಿದ್ದಾರೆ. ಇದರಿಂದ ತನಗೆ 15 ಕೋಟಿ ನಷ್ಟವಾಗಿದೆ ಎಂದು ಧೋನಿ ಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನೂ ಓದಿ MS Dhoni: ಥಾಯ್ಲೆಂಡ್ ಬೀಚ್‌ನಲ್ಲಿ ಧೋನಿ ಎಂಜಾಯ್; ವಿಡಿಯೊ ವೈರಲ್‌

https://twitter.com/airHostess_Ashi/status/1856591562341241159
ಧೋನಿ ವಿರುದ್ಧ ದೂರು ದಾಖಲಿಸಿದ್ದ ದಿವಾಕರ್

ಮಿಹಿರ್ ದಿವಾಕರ್ ಕೂಡ ಧೋನಿ ವಿರುದ್ಧ ದೂರು ದಾಖಲಿಸಿದ್ದರು. ʼಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ. ಆದರೆ ಒಪ್ಪಂದದಲ್ಲಿ ಈ ರೀತಿ ಉಲ್ಲೇಖವೇ ಆಗಿಲ್ಲ. ಇದೆಲ್ಲ ಸುಳ್ಳು. ಧೋನಿಯ ವ್ಯವಹಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅವರೇ ನನಗೆ 5 ಕೋಟಿ ನೀಡಬೇಕು. ನಾನು ಧೋನಿಗೆ ಯಾವುದೇ ಹಣ ಬಾಕಿ ಇಟ್ಟಿಲ್ಲ. ಇದಕ್ಕೆ ಸಂಬಂಧಿಸಿದ ವ್ಯವಹಾರದ ಪತ್ರಗಳು ನನ್ನ ಬಳಿ ಇದೆʼ ಎಂದು ದಿವಾಕರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.