Sunday, 24th November 2024

Murder Case: ಶೀಲ ಶಂಕಿಸಿ ಪತ್ನಿಯನ್ನು ಕೊಂದ, ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟ!

wife murder case

ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಗಂಡನೊಬ್ಬ ಹೆಂಡತಿಯನ್ನು ಕೊಲೆ (Murder case) ಮಾಡಿದ ಘಟನೆ ಬೆಂಗಳೂರು (Bengaluru crime news) ನಗರದ ಗಂಗೊಂಡನಹಳ್ಳಿಯ ಶಾಂತಿನಗರದಲ್ಲಿ ನಡೆದಿದೆ. ಕೊಲೆ ಬಳಿಕ ಆರೋಪಿ ಕೊಂದ ಪಾಪ ಕಳೆದುಕೊಳ್ಳಲು ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟಿದ್ದಾನೆ!

ಗಂಗೊಂಡನಹಳ್ಳಿಯ ಶಾಂತಿನಗರದಲ್ಲಿ ಘಟನೆ ನಡೆದಿದೆ. ಸಿದ್ದರಾಮಣ್ಣ ಎಂಬಾತ ಕೊಲೆಗಾರ, ಆತನ ಪತ್ನಿ ಕೋಕಿಲಾ ಕೊಲೆಯಾದಾಕೆ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಕೋಕಿಲಾ ಮೇಲೆ ಸಿದ್ದರಾಮಣ್ಣನಿಗೆ ಅನುಮಾನ ಮೂಡಿತ್ತು. ಹೀಗಾಗಿ ಪತ್ನಿ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದ. ಕುಟುಂಬಸ್ಥರು ಎಷ್ಟೇ ಬುದ್ದಿ ಹೇಳಿದ್ರು, ಆರೋಪಿ ಸಿದ್ದರಾಮಣ್ಣ ಹೆಂಡತಿ ಜೊತೆ ಜಗಳ ಮುಂದುವರೆಸಿದ್ದ.

ಕಳೆದ ತಿಂಗಳು 28ರ ರಾತ್ರಿ ಕೂಡ ಇದೇ ವಿಚಾರಕ್ಕೆ ಹೆಂಡತಿ ಜೊತೆ ಕಿರಿಕ್ ತೆಗೆದಿದ್ದ. ಕೋಪದ ಭರದಲ್ಲಿ ಕೋಕಿಲಾಳ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ ಮಾಡಿ, ಆರೋಪಿ ಸಿದ್ದರಾಮಣ್ಣ ಎಸ್ಕೇಪ್ ಆಗಿದ್ದ. ಈ ಬಗ್ಗೆ ಮೃತ ಕೋಕಿಲಾ ಪೋಷಕರು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿತ್ತು. ಕೊಲೆ ಕೇಸ್ ದಾಖಲಿಸಿ ಕಾರ್ಯಾಚರಣೆ ನಡೆಸಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧನಕ್ಕೂ ಮುನ್ನ, ಹೆಂಡತಿ‌ಯನ್ನು ಕೊಂದ ಪತಿ ಸಿದ್ದರಾಮಣ್ಣ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಪ್ರಯಾಣ ಬೆಳೆಸಿದ್ದಾನೆ. ಹೆಂಡತಿಯನ್ನು ಕೊಂದ ಪಾಪವನ್ನು ಕಳೆದುಕೊಳ್ಳಲು ಧರ್ಮಸ್ಥಳದಲ್ಲಿ ಮುಡಿ ಕೊಟ್ಟಿದ್ದಾನೆ. ಸದ್ಯ ಕೊಲೆ ಪ್ರಕರಣದಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Murder Case: ಕೊಲೆಯಾದ ಬಾಲಕಿಯ ಶವಕ್ಕೆ 18 ವರ್ಷಗಳ ಬಳಿಕ ಅಂತ್ಯಸಂಸ್ಕಾರ!