ಪಣಜಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಹಾಗೂ ಗೋವಾ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ರಣಜಿ ಟ್ರೋಫಿ (Ranji Trophy) ಟೂರ್ನಿಯಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಬುಧವಾರ ಗೋವಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆರಂಭವಾದ ಅರುಣಾಚಲ ಪ್ರದೇಶ ವಿರುದ್ದದ ಪಂದ್ಯದಲ್ಲಿ ಮರಿ ತೆಂಡೂಲ್ಕರ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಐದು ವಿಕೆಟ್‌ಗಳನ್ನು ಕಿತ್ತಿದ್ದಾರೆ. ಆ ಮೂಲಕ ಅರುಣಾಚಲ ಪ್ರದೇಶ ತಂಡವನ್ನು 84 ರನ್‌ಗಳಿಗೆ ಆಲ್ ಮಾಡಲು ಕಾರಣರಾದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಡಗೈ ವೇಗಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನದಿಂದ ಚೊಚ್ಚಲ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಅರುಣಾಚಲ ಪ್ರದೇಶ ನಾಯಕ ನಬಮ್ ಅಬೊ ಅವರ ನಿರ್ಧಾರವನ್ನು ಅರ್ಜುನ್ ತಲೆ ಕೆಳಗಾಗುವಂತೆ ಮಾಡಿದರು. ತಮ್ಮ ಮೊದಲನೇ ಓವರ್‌ನಲ್ಲಿ ಅರ್ಜುನ್, ನಾಯಕ ನಬಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
Arjun Tendulkar: ಕರ್ನಾಟಕ ವಿರುದ್ಧ 9 ವಿಕೆಟ್ ಕಿತ್ತ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್
ಇದಾದ ಬಳಿಕ ಮತ್ತೊಬ್ಬ ಆರಂಭಿಕ ನೀಲಮ್ ಒಬಿ ಅವರನ್ನು ಕೂಡ ಅದೇ ರೀತಿ ಔಟ್ ಮಾಡಿದರು. ಆ ಮೂಲಕ ಅರುಣಾಚಲ ಪ್ರದೇಶ ತಂಡ 26 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ತಮ್ಮ ಮಾರಕ ಬೌಲಿಂಗ್ ದಾಳಿಯನ್ನು ಮುಂದುವರಿಸಿ ಜೇ ಬಾವಸಾರ್ ಅವರನ್ನು ಗೋಲ್ಡನ್ ಔಟ್ ಮಾಡಿದರು. ಇದಾದ ಬಳಿಕ ಚಿನ್ಮಯ್ ಪಾಟೀಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಸಫಲರಾದರು. ಅಂತಿಮವಾಗಿ ಮೊಜಿ ಎಟೆ ಅವರನ್ನು ಬಲಿ ಪಡೆಯುವ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು.
ಪ್ರಥಮ ಇನಿಂಗ್ಸ್‌ನಲ್ಲಿ ಒಟ್ಟು 9 ಓವರ್‌ಗಳನ್ನು ಬೌಲ್ ಮಾಡಿದ ಅರ್ಜುನ್ ತೆಂಡೂಲ್ಕರ್ ಅವರು 25 ರನ್‌ಗಳನ್ನು ನೀಡಿ 5 ವಿಕೆಟ್‌ಗಳ ಸಾಧನೆ ಮಾಡಿದರು. ಅರ್ಜುನ್ ತೆಂಡೂಲ್ಕರ್‌ಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಮೋಹಿತ್ ರೇಡ್ಕರ್ (15ಕ್ಕೆ3) ಹಾಗೂ ಕೇತ್ ಪಿಂಟೊ (31ಕ್ಕೆ 2) ಅವರು ಕೂಡ ಕ್ರಮವಾಗಿ 3 ಮತ್ತು 2 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಅರುಣಾಚಲ ಪ್ರದೇಶ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 84 ರನ್‌ಗಳಿಗೆ ಆಲ್‌ಔಟ್ ಆಯಿತು.
ಪ್ರಸಕ್ತ ಸಾಲಿನಲ್ಲಿ ಅರ್ಜುನ್ ತೆಂಡೂಲ್ಕರ್ ಅಂಕಿಅಂಶಗಳು
ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಿಂದ ಅವರು 17.75ರ ಸರಾಸರಿ ಹಾಗೂ 3.08 ಎಕಾನಮಿ ರೇಟ್‌ನಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಗೋವಾ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಸಿಕ್ಕಿಂ ವಿರುದ್ಧದ ತನ್ನ ಮೊದಲನೇ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಅವರು 112 ರನ್‌ಗಳಿಗೆ 6 ವಿಕೆಟ್ ಕಬಳಿಸುವ ಮೂಲಕ ಪ್ರಸಕ್ತ ಆವೃತ್ತಿಯನ್ನು ಆರಂಭಿಸಿದ್ದರು. ನಂತರ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿಯೂ 42 ರನ್ ಗಳಿಸಿ ಮಿಂಚಿದ್ದರು. ನಂತರ ಮಿಜೋರಾಂ ವಿರುದ್ದದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದಿದ್ದರು ಆದರೆ, ಬ್ಯಾಟಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರೆ ಪ್ರಸ್ತುತ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿಯೂ ಅವಕಾಶ ಸಿಕ್ಕರೆ ಅವರು ಮಿಂಚಲು ಎದುರು ನೋಡುತ್ತಿದ್ದಾರೆ.