Wednesday, 27th November 2024

JDS Protest: ಎಚ್‌ಡಿಕೆ ವಿರುದ್ಧ ʼಕರಿಯʼ ಹೇಳಿಕೆ; ಸಚಿವ ಜಮೀರ್‌ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS Protest

ಬೆಂಗಳೂರು: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ವರ್ಣ ನಿಂದನೆ ಹೇಳಿಕೆಯನ್ನು ಖಂಡಿಸಿ ಹಾಗೂ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ, ಜೆಡಿಎಸ್ ಪಕ್ಷದ ವತಿಯಿಂದ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಉಗ್ರ ಪತಿಭಟನೆ (JDS Protest) ನಡೆಸಲಾಯಿತು.

ಜೆಡಿಎಸ್ ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಚ್. ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿ, ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ಅಲ್ಲದೇ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಿ ಉಗ್ರ ಪ್ರತಿಭಟನೆ ನಡೆಸಿದರು.

ಈ ಸುದ್ದಿಯನ್ನೂ ಓದಿ | Earthquake: ಕಣಿವೆ ರಾಜ್ಯದ ಹಲವೆಡೆ 5.2 ತೀವ್ರತೆಯ ಪ್ರಬಲ ಭೂಕಂಪ

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಮಾತನಾಡಿ, ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಿಸಿರುವುದು ಅಕ್ಷಮ್ಯ. ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಸರ್ಕಾರಕ್ಕೆ ನೈತಿಕತೆ ಇದ್ದರೆ ಕ್ರಮ ಕೈಗೊಳ್ಳಿ

ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ಈ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ರಮ ಜರುಗಿಸದಿದ್ದರೆ ರಾಜ್ಯಪಾಲರಿಗೆ ದೂರು

ಸಚಿವ ಜಮೀರ್‌ ಅವರನ್ನು ಒಂದು ವೇಳೆ ಸಂಪುಟದಿಂದ ವಜಾ ಮಾಡದಿದ್ದರೆ, ಜಮೀರ್ ಹೇಳಿಕೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ರಾಜ್ಯಪಾಲರು, ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಅವರು ಹೇಳಿದರು.

ಬಳಿಕ ಪ್ರತಿಭಟನಾಕಾರರು ಜಮೀರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿ ರಸ್ತೆಗೆ ಇಳಿದಾಗ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಈ ಸುದ್ದಿಯನ್ನೂ ಓದಿ | Atal Pension Scheme: ವೃದ್ಧಾಪ್ಯದಲ್ಲಿ ಪತಿ-ಪತ್ನಿ 5000 ರೂ. ಪಿಂಚಣಿ ಪಡೆಯುವುದು ಹೇಗೆ?

ಪ್ರತಿಭಟನೆಯಲ್ಲಿ ಶೈಲಜಾ ರಾವ್, ನಾರಾಯಣ ಸ್ವಾಮಿ, ರಮೇಶ್ ರಾವ್, ಮಂಗಳಮ್ಮ, ಹರಿಬಾಬು, ಮುನಿಸ್ವಾಮಿ, ಸಯ್ಯದ್ ಸೇರಿದಂತೆ ಪಕ್ಷದ ಬೆಂಗಳೂರಿನ ಅನೇಕ ಮುಖಂಡರು ಪಾಲ್ಗೊಂಡಿದ್ದರು.