Friday, 22nd November 2024

Children’s day 2024: ಮಕ್ಕಳ ದಿನಾಚರಣೆಯ ಕಿಡ್ಸ್ ಸ್ಟೈಲಿಂಗ್‌ಗೆ ಇಲ್ಲಿದೆ 5 ಸಿಂಪಲ್‌ ಐಡಿಯಾ

Kids Styling Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವೆಂಬರ್‌ 14 ಮಕ್ಕಳ ದಿನಾಚರಣೆ. ಈ ದಿನ ನಿಮ್ಮ ಮಕ್ಕಳಿಗೆ ಪ್ರಿಯವಾದ ಡ್ರೆಸ್‌ ಹಾಕಿ, ಅವರಿಗಿಷ್ಟವಾದ ರೀತಿಯಲ್ಲೆ ಸ್ಟೈಲಿಂಗ್‌ (Kids Styling Tips) ಮಾಡಿ ಸಂಭ್ರಮಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು, ಮಕ್ಕಳ ದಿನಾಚಾರಣೆಯನ್ನು (Children’s day 2024) ಭಾರತದಾದ್ಯಂತ ಆಚರಿಸಲಾಗುತ್ತದೆ. ಪುಟ್ಟ ಚಿಣ್ಣರಿಂದಿಡಿದು ಟೀನೇಜ್‌ ಮಕ್ಕಳನ್ನು ಈ ಸಂಭ್ರಮದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ನರ್ಸರಿ, ಮಾಂಟೆಸ್ಸರಿ ಹಾಗೂ ಶಾಲೆಗಳಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಇನ್ನು ಕೆಲವೆಡೆ ಒಂದು ದಿನ ಯೂನಿಫಾರ್ಮ್‌ಗೆ ತಾತ್ಕಾಲಿಕ ಇತಿಶ್ರೀ ಹಾಕಿ, ಕಲರ್‌ಫುಲ್‌ ಉಡುಪಿನಲ್ಲಿ ಮಕ್ಕಳನ್ನು ಸ್ವಾಗತಿಸುತ್ತಾರೆ. ಈ ದಿನದಂದು ಪೋಷಕರು ತಮ್ಮ ಮಕ್ಕಳನ್ನು ಅವರವರ ಇಚ್ಚೆಗೆ ಅನುಗುಣವಾಗಿ ಆಕರ್ಷಕವಾಗಿ ಡ್ರೆಸ್‌ ಮಾಡಿ ಕಳುಹಿಸಿದಲ್ಲಿ, ಮಕ್ಕಳಿಗೂ ಖುಷಿಯಾಗುವುದು, ನೋಡಲು ಅಂದವಾಗಿ ಕಾಣಿಸುವುದು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ಶಂಕರ್‌.

ಚಿತ್ರಗಳು: ಪಿಕ್ಸೆಲ್‌

ಶಾಲೆಯ ಕಾರ್ಯಕ್ರಮದ ಥೀಮ್‌ಗೆ ತಕ್ಕಂತೆ ಅಲಂಕಾರ

ಪ್ರತಿಯೊಂದು ಶಾಲೆಯಲ್ಲೂ ಈ ವಿಶೇಷ ದಿನದಂದು ಬಗೆಬಗೆಯ ಥೀಮ್‌ ಪ್ಲಾನ್‌ ಮಾಡಿರುತ್ತಾರೆ. ಉದಾಹರಣೆಗೆ, ಹುಡುಗಿಯರಿಗೆ ಫೇರಿಟೇಲ್‌, ಏಂಜೆಲ್ಸ್, ಹುಡುಗರಿಗೆ ಅವೆಂಜರ್ಸ್, ಹೀಗೆ ವೆರೈಟಿ ಥೀಮ್‌ ಪ್ಲಾನ್‌ ಮಾಡಿರುತ್ತಾರೆ. ಈ ಥೀಮ್‌ಗೆ ಹೊಂದುವಂತಹ ಕಾಸ್ಟ್ಯೂಮ್ಸ್ ಬಾಡಿಗೆಗೆ ದೊರೆಯುತ್ತವೆ. ಅವನ್ನು ಪಡೆದು ರೆಡಿ ಮಾಡಿ, ಕಳುಹಿಸಿ, ಸಂಭ್ರಮಿಸಿ.

ಫ್ಯಾನ್ಸಿ ಡ್ರೆಸ್‌ ಕಾನ್ಸೆಪ್ಟ್

ಕೆಲವೆಡೆ ಫ್ಯಾನ್ಸಿ ಡ್ರೆಸ್‌ ಕಾಂಪಿಟೇಷನ್‌ ಮಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಆದಷ್ಟೂ ಮಕ್ಕಳಿಗೆ ಕಿರಿಕಿರಿಯಾಗದಂತಹ ಕ್ಯಾರೆಕ್ಟರ್‌ ಆಯ್ಕೆ ಮಾಡಿ. ಅದಕ್ಕೆ ಸೂಕ್ತವಾದ ಉಡುಗೆಯನ್ನು ಬಾಡಿಗೆಗೆ ಪಡೆದು ಚಿಣ್ಣರನ್ನು ಸಿಂಗರಿಸಿ.

ಚಳಿಗಾಲದ ಸೀಸನ್‌ಗೆ ತಕ್ಕಂತಿರಲಿ ಸ್ಟೈಲಿಂಗ್‌

ಸಾಮಾನ್ಯವಾದ ಡ್ರೆಸ್‌ ಕೋಡ್‌ ಆದಲ್ಲಿ, ಆದಷ್ಟೂ ಈ ಸೀಸನ್‌ನಲ್ಲಿ ಯಾವುದೇ ಬಗೆಯ ಸ್ಲಿವ್‌ಲೆಸ್‌, ಮಿನಿ, ಬ್ಯಾಕ್‌ಲೆಸ್‌, ಹಾಲ್ಟರ್‌ ಡ್ರೆಸ್‌ಗಳನ್ನು ಹಾಕಿಸಬೇಡಿ. ಆದಷ್ಟೂ ಮಕ್ಕಳ ದೇಹವನ್ನು ಬೆಚ್ಚಗಿಡುವಂತಹ ಲೇಯರ್‌ ಲುಕ್‌ ಅಥವಾ ಕೋಟ್‌ –ಜಾಕೆಟ್‌ನಂತಹ ಡ್ರೆಸ್‌ಕೋಡ್‌ ತೊಡಿಸಿ.

ಮಕ್ಕಳ ಆಯ್ಕೆಗೂ ಮಹತ್ವ ನೀಡಿ

ಯಾವುದೇ ಬಗೆಯ ಆಚರಣೆಗೆ ಅವಕಾಶ ಇರದಿದ್ದಲ್ಲಿ, ಆದಷ್ಟೂ ಮಕ್ಕಳು ಧರಿಸಬೇಕೆನ್ನುವ ಉಡುಗೆಯನ್ನು ಅಂದು ಧರಿಸಲು ಅವಕಾಶ ನೀಡಿ. ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಲ್ಲಿ ಟ್ವಿನ್ನಿಂಗ್‌ ಮಾಡಬಹುದು. ಟೀನೇಜ್‌ ಮಕ್ಕಳಾದಲ್ಲಿ ಬಣ್ಣ ಹಾಗೂ ಡಿಸೈನ್‌ಗಳಲ್ಲಿ ವೈವಿಧ್ಯತೆಯಿರಲಿ.

ಈ ಸುದ್ದಿಯನ್ನೂ ಓದಿ | Plain Lehenga Fashion: ಸಿಂಪಲ್‌ ಹುಡುಗಿಯರನ್ನು ಸಿಂಗರಿಸಲು ಬಂದಿದೆ ಸಾದಾ ಲೆಹೆಂಗಾಗಳು

ಚಿಣ್ಣರ ಉಡುಗೆ ಕಂಫರ್ಟಬಲ್‌ ಆಗಿರಲಿ

ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳ ದೇಹಕ್ಕೆ ಚುಚ್ಚುವ, ಕಿರಿಕಿರಿಯುಂಟಾಗುವ ಚುಚ್ಚುವ ಉಡುಪು, ಚುಚ್ಚುವ ಸರ-ಬಳೆ ಅಥವಾ ವಾಚ್‌ ಹೀಗೆ ಆಕ್ಸೆಸರೀಸ್‌ಗಳ ಆಯ್ಕೆ ಬೇಡ! ಇದರಿಂದ ನೋವು ಹಾಗೂ ಅಲರ್ಜಿ ಉಂಟಾಗಬಹುದು. ತೊಡಿಸುವ ಬಟ್ಟೆಯ ಬಣ್ಣ ಅವರನ್ನು ಹೈಲೈಟ್‌ ಮಾಡುವಂತಿರಲಿ. ಮಕ್ಕಳು ಕೂಡ ಖುಷಿಯಿಂದ ಧರಿಸಿ, ನಲಿದಾಡುವಂತಿರಲಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)