Thursday, 26th December 2024

Tulasi Habba 2024: ತುಳಸಿಯೇ ಇವರ ಜಗತ್ತು; ಇವರ ಮನೆಯೊಳಗೆ, ಹೊರಗೆ ಎಲ್ಲೆಲ್ಲೂ ತುಳಸಿ!

Tulasi Habba 2024

-ಜಿ ಟಿ ಶ್ರೀಧರ ಶರ್ಮಾ

ಇಂದು (Tulasi Habba 2024) ತುಳಸಿ ಹಬ್ಬ. ಶ್ರೀಧರ ಸ್ವಾಮಿಗಳಿಗೆ ಪ್ರಿಯವಾದ ತುಳಸಿಯನ್ನು ಬೆಳೆಸುವ, ಬಳಸುವ ಹಾಗೂ ಬಯಸಿದ ಗುರುಭಕ್ತರಿಗೆ ಪೂರೈಸುವ ಭಕ್ತರೊಬ್ಬರ ತುಂಬ ಅಪರೂಪದ ಸ್ಮರಣೆಯಿದು. ಸಾಗರ ತಾಲೂಕು ತಾಳಗುಪ್ಪ ಹೋಬಳಿಯ ಸಿರಿವಂತೆ ಸೀಮೆಯ, ಖಂಡಿಕಾ ಎಂಬ ಸುಂದರ ಹಳ್ಳಿಯ ಕೊನೆಯಲ್ಲಿ ಹೂವಿನಕುಳಿ ಹೆಸರಿನ ಕುಟುಂಬವೊಂದಿದೆ. ಈ ಕುಟುಂಬ ತುಂಬ ಹಿಂದಿನಿಂದಲೂ ಗುರುಭಕ್ತಿಗೆ, ಕ್ರಿಯಾಶೀಲತೆಗೆ ಹೆಸರಾಗಿದೆ. ಹೂವಿನಕುಳಿ ಭೀಮಯ್ಯನವರ ಮೂರನೆಯ ಮಗ ಹೂವಿನಕುಳಿ ಶೇಷಗಿರಿಯವರಿಗೆ ಐದು ಜನ ಗಂಡು ಮಕ್ಕಳು. ಇವರಲ್ಲಿ ಮೂರನೆಯವರೇ ಈ ಸ್ಮರಣೆಯ ಕಲಸಿ ಪ್ರಕಾಶ.

ಪ್ರಕಾಶ ಈ ಮೊದಲು ಖಂಡಿಕಾದಲ್ಲಿಯೇ ಬೆಳೆದವರು. ಮದುವೆಯಾದ ನಂತರ ಹತ್ತಿರದ ಕಲಸಿ ಎಂಬ ಹಳ್ಳಿಯಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಪುಷ್ಪ. ಮಗ ಶ್ರೀನಿಧಿ ಹಾಗೂ ಸೊಸೆ ಸೌಮ್ಯ. ಮಗ ಸೊಸೆ ಶಿವಮೊಗ್ಗದಲ್ಲಿ ನೆಲೆಸಿದರೆ ಪ್ರಕಾಶ- ಪುಷ್ಪ ಕಲಸಿಯಲ್ಲಿಯೇ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಷ್ಟು ಹೇಳಿದರೆ ಇವರ ಬಗ್ಗೆ ಏನೂ ಹೇಳಿದಂತಾಗದು. ಇವರ ಮನೆಗೆ ಹೋಗಿ ನೋಡಿದರೆ ಎಲ್ಲ ಕಡೆಗಳಲ್ಲಿಯೂ ತುಳಸಿಯೇ ತುಳಸಿ! ಇಡೀ ಮನೆಯ ಒಳಗೆ, ಹೊರಗೆ, ಎದುರುಗಡೆ, ಹಿಂದೆ ಹಿತ್ತಿಲಲ್ಲಿ ಅಕ್ಕಪಕ್ಕಗಳಲ್ಲಿ ತುಳಸಿಯೇ ಕಂಡುಬರುತ್ತದೆ. ದಿನವಿಡೀ ಈ ದಂಪತಿಗಳಿಗೆ ತುಳಸಿ ಕೃಷಿ- ಅದರ ಆರೈಕೆ, ಕೊಯ್ದು ಮಾಲೆ ಕಟ್ಟುವುದು- ವರದಪುರದ ಶ್ರೀಧರಸ್ವಾಮಿಗಳಿಗೆ ಅರ್ಪಿಸುವುದು. ಹಾಗೆಂದು ಇವರು ತಮಗೆ ಮಾತ್ರವಲ್ಲ- ಆಸಕ್ತ ಗುರುಭಕ್ತರಿಗೆಲ್ಲ ತುಳಸಿ ಮಾಲೆ ತಾವೇ ಸ್ವತಃ ಸಿದ್ಧಪಡಿಸಿಕೊಡುತ್ತಾರೆ.

ವರದಪುರದಲ್ಲಿ ತುಳಸಿವನ

ವರದಪುರದ ಮಧ್ಯಕುಟಿಯಲ್ಲಿ ‘ತುಳಸಿ ಸುರೇಶ’ ರೊಂದಿಗೆ ಒಂದಾಗಿ ತುಳಸಿ ಬೆಳೆಸಿದ್ದಾರೆ. ಸಾಗರದ ಸುತ್ತಮುತ್ತ ಯಾರು ಅಪೇಕ್ಷಿಸಿದರೂ ಅವರ ಮನೆಗೇ ಹೋಗಿ ಮಳೆಗಾಲದಲ್ಲಿ ತುಳಸಿ ಗಿಡ ನಟ್ಟು ಬರುತ್ತಾರೆ. ಅನಂತರ ಮತ್ತೆ ಮತ್ತೆ ಕರೆಮಾಡಿ ಗಿಡಗಳ ಬೆಳವಣಿಗೆ ಬಗ್ಗೆ ವಿಚಾರಿಸುತ್ತಾರೆ! ಹೀಗೆ ಇವರು ತುಳಸಿ ಗಿಡ ನೀಡಿದ ಮನೆಗಳೇ ನೂರಕ್ಕೂ ಮಿಗಿಲಿರಬಹುದೆಂದು ಮೃದುವಾಗಿ ನುಡಿಯುತ್ತಾರೆ. ಸುಮಾರಾಗಿ ಪ್ರತಿ ಗುರುವಾರ ಮತ್ತು ದತ್ತ ಜಯಂತಿ- ಗುರುಪೂರ್ಣಿಮೆ ಮುಂತಾದ ವಿಶೇಷ ದಿನಗಳಲ್ಲಿ ವರದಪುರದ ಶ್ರೀಧರಾಶ್ರಮಕ್ಕೆ ಹೋಗಿ ತಮ್ಮ ಕೈಯಲ್ಲಾದ ಸೇವೆ ಸಲ್ಲಿಸುತ್ತಾರೆ. ಏನೂ ಮಾಡಲಾಗದಿದ್ದರೂ ಭಕ್ತರು ಅರ್ಪಿಸುವ ತೆಂಗಿನಕಾಯಿ ಒಡೆಯುವ ಅಥವಾ ಊಟ ಬಡಿಸುವ ಕೆಲಸದಲ್ಲಿ ಪ್ರಕಾಶ ಹಾಜರಿರುತ್ತಾರೆ. ಹೀಗೆ ಸದಾ ತುಳಸಿ ಸೇವೆಯಲ್ಲಿಯೇ ಮುಳುಗಿರುವ ಇವರು ಭಕ್ತರಿಂದ ಬಯಸುವುದು ಗುರುಗಳಲ್ಲಿ ಅನನ್ಯ ಶ್ರದ್ಧೆ ಇಡಬೇಕೆಂಬುದು ಮಾತ್ರ.

ಈ ಸುದ್ದಿಯನ್ನೂ ಓದಿ | Karnataka Rain: ನಾಳೆ ಶಿವಮೊಗ್ಗ, ಮೈಸೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ದೂರದ ಊರಿನಲ್ಲಿರುವ ಭಕ್ತರಿಗೆ ತುಳಸಿ ಹಾರ ತಲುಪಿಸಿ ಅವರಾಗಿಯೇ ಖರ್ಚಿಗೆಂದು ಅಲ್ಪಸ್ವಲ್ಪ ಕೊಟ್ಟರೆ ಮಾತ್ರ ಪಡೆಯುತ್ತಾರೆ. ಈ ಹಣದಲ್ಲಿ ತಮ್ಮ ಖರ್ಚು ಕಳೆದು ಉಳಿದುದೆಲ್ಲವನ್ನೂ ವರದಪುರಕ್ಕೇ ಕೊಟ್ಟುಬಿಡುತ್ತಾರೆ. ನಿಮಗೆ ಈ ಕಾರ್ಯದಿಂದ ನೆಮ್ಮದಿಯಿದೆಯೇ? ಹಣ ಬೇಡವೇ? ಎಂದು ಪ್ರಶ್ನಿಸಿದರೆ ಆ ಕೂಡಲೇ ಉತ್ತರಿಸುತ್ತಾರೆ-” ನನಗೆ ಸಂಪೂರ್ಣ ನೆಮ್ಮದಿಯಿದೆ. ಶ್ರೀಧರಸ್ವಾಮಿಗಳ ಕೃಪಾಶೀರ್ವಾದಗಳಿಂದ ಮಡದಿ, ಮಗ ಮಗಳು ಎಲ್ಲರೂ ಗುರುಭಕ್ತರೇ ಆಗಿದ್ದಾರೆ. ಮಗನಂತೂ ಸಿ. ಎ. ಮಾಡಿ ಶಿವಮೊಗ್ಗದಲ್ಲಿ ಸ್ವಂತಂತ್ರವಾಗಿದ್ದಾನೆ. ಶ್ರೀಧರರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ, ನನಗಿನ್ನೇನು ಬೇಕು ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.” ಎಲ್ಲರೂ ಗುರುಭಕ್ತರೇ ಆಗಿದ್ದಾರೆ” ಎಂಬುದು ತುಂಬ ಅಪರೂಪ , ಈಗಲೂ ನೆನಪಿಗೆ ಬರುತ್ತಿದೆ. ” ಪ್ರಕಾಶ ನಿಮ್ಮ ಸೇವೆ ನೋಡಿ ನಿಮ್ಮನ್ನು ಭಕ್ತರೆಲ್ಲರೂ ‘ತುಳಸಿ ಪ್ರಕಾಶ’ ಎಂದೇ ಗುರುತಿಸುತ್ತಾರೆಂದರೆ ” ಶ್ರೀಧರಸ್ವಾಮಿಗಳಿಗೆ ಪ್ರಿಯವಾದ ತುಳಸಿಯೊಂದಿಗೆ ನನ್ನನ್ನೂ ಸೇರಿಸುತ್ತಾರೆಂದರೆ ಇದಕ್ಕಿಂತ ಇನ್ನೇನು ತಾನೇ ಬೇಕು” ಎಂದು ತೃಪ್ತಿಯಿಂದ ಪಕಪಕನೆ ಬಾಯ್ತುಂಬ ನಗುತ್ತಾರೆ. ಗುರುಭಕ್ತರ ಮನೆಗಳಲ್ಲೆಲ್ಲ ಇಂಥ ಒಬ್ಬೊಬ್ಬ ” ತುಳಸಿ ಪ್ರಕಾಶ”ರಿದ್ದರೆ? ಅಥವಾ ಇಂಥವರನ್ನು ಪರಿಚಯಿಸುವುದೇ ಶ್ರೀಧರ ಸ್ಮರಣೆ. ಇವರ ತಾಯಿ ವಿಶಾಲಾಕ್ಷ್ಮಮ್ಮನವರಿಗೂ ಮಗನ ಕಾರ್ಯ ತುಂಬ ಅಚ್ಚುಮೆಚ್ಚಂತೆ.