Thursday, 14th November 2024

Vishwavani Editorial: ಲೋಕಾ ಮಿಕಗಳು ತಪ್ಪಿಸಿಕೊಳ್ಳದಿರಲಿ

ಭ್ರಷ್ಟಾಚಾರ ನಿಗ್ರಹದಳ ರದ್ದಾಗಿ ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಭ್ರಷ್ಟ ಅಽಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಪ್ರಮಾಣ ಹೆಚ್ಚಾಗಿದೆ. ಪ್ರತೀ ವಾರ ಹತ್ತಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರ ರಾಜ್ಯದ ೮ ಮಂದಿ ಅಧಿಕಾರಿಗಳ ವಿರುದ್ಧ
ಲೋಕಾಯುಕ್ತ ಪ್ರಕರಣ ದಾಖಲಿಸಿದೆ. ಇವರಿಂದ ಭಾರಿ ಪ್ರಮಾಣದ ಚಿನ್ನಾಭರಣ, ನಗದು, ಆಸ್ತಿಪಾಸ್ತಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊ
ಳ್ಳಲಾಗಿದೆ. ಭ್ರಷ್ಟಾಚಾರಿಗಳನ್ನು ಹೆಡೆಮುರಿ ಕಟ್ಟುವ ನಿಟ್ಟಿನಲ್ಲಿ ಈ ಬೆಳವಣಿಗೆ ಸ್ವಾಗತಾರ್ಹ.

ಆದರೆ ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು ಶಿಕ್ಷೆಗೆ ಗುರಿಯಾಗುತ್ತಿರುವ ಪ್ರಮಾಣ ಕಡಿಮೆ ಇರುವುದು ಆತಂಕದ ವಿಚಾರ. ಇತ್ತೀಚೆಗೆ ಬೇಲೇಕೇರಿ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಸೇರಿ ದಂತೆ ೬ ಮಂದಿ ಪ್ರಮುಖ ಆರೋಪಿಗಳು ಜೈಲು ಶಿಕ್ಷೆಗೆ ಗುರಿಯಾ ಗಿರುವುದು ಪ್ರಭಾವಿಗಳನ್ನೂ ಕಾನೂನಿನ ಕುಣಿಕೆಗೆ ಎಳೆದು ತರಲು ಸಾಧ್ಯವಿದೆ ಎನ್ನು ವುದನ್ನು ಎತ್ತಿ ತೋರಿಸಿದೆ.

ದಾಳಿ ಮತ್ತು ತನಿಖೆ ಸಂದರ್ಭದಲ್ಲಿ ಸರಿಯಾಗಿ ಸಾಕ್ಷ್ಯಗಳನ್ನು ಕಲೆಹಾಕಿ ಎಫ್‌ ಐಆರ್ ದಾಖಲಿಸುವುದು ಬಳಿಕ ಸರಿಯಾದ ಸೆಕ್ಷನ್‌ಗಳಡಿ, ಪೂರಕ ಸಾಕ್ಷ್ಯಗಳನ್ನಿಟ್ಟುಕೊಂಡು ದೋಷಾರೋಪ ಪಟ್ಟಿ ಸಲ್ಲಿ ಸುವುದು ಬಹಳ ಮುಖ್ಯ. ಕೋರ್ಟ್ ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು ಮತ್ತು ಪೊಲೀಸರು ಸಮನ್ವಯತೆ ಸಾಧಿಸಿ, ಪ್ರಾಸಿಕ್ಯೂಶನ್ ಪರ ಸಾಕ್ಷಿಗಳನ್ನು ಹಾಜರುಪಡಿಸಿ, ಸಮರ್ಥ ವಾದಮಂಡನೆ ಮಾಡುವುದು ಕೂಡ ಅಗತ್ಯ. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸಾಕ್ಷಿಗಳ ಉಲ್ಟಾ ಹೇಳಿಕೆ, ಸಾಕ್ಷಿ ಹೇಳುವುದರಿಂದ ಹಿಂದೆ ಸರಿಯುವುದು, ಪೊಲೀಸರಿಂದ ಪರಿ ಪೂರ್ಣ ತನಿಖೆಯಾಗದಿರುವುದು ಹಾಗೂ ಆರೋಪದ ಬಗೆಗಿನ ಅನುಮಾನಗಳು ಆರೋಪಿಗಳಿಗೆ ವರವಾಗಿ ಪರಿಣಮಿ ಸುತ್ತವೆ. ಆದರೆ ಶಿಕ್ಷೆಯ ವಿಚಾರಕ್ಕೆ ಬಂದರೆ ಹೆಚ್ಚಿನ ಭ್ರಷ್ಟ ಕುಳಗಳು ತಪ್ಪಿಸಿಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ.

ಸಿಬಿಐನಲ್ಲಿ ಶಿಕ್ಷೆಯ ಪ್ರಮಾಣ ಶೇ.೫೦ರಿಂದ ೬೦ರವರೆಗೆ ಇದೆ. ಅವರು ತನಿಖೆ ಮತ್ತು ಸಾಕ್ಷ್ಯ ಸಂಗ್ರಹಕ್ಕೆ ಅತ್ಯಾಧುನಿಕ ತಂತ್ರeನ ಬಳಸು
ತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ಅಗತ್ಯವಿದೆ.