ಉತ್ತರ ಪ್ರದೇಶದ ಚಾಕೊಲೇಟ್ ಕಾರ್ಖಾನೆಯೊಂದರಿಂದ ಬೆಂಗಳೂರಿಗೆ ‘ಗಾಂಜಾಭರಿತ ಚಾಕೊಲೇಟ್’ಗಳನ್ನು ಪೂರೈಕೆ ಮಾಡುತ್ತಿದ್ದ ದುರುಳರ ಜಾಲವನ್ನು ಜಿಗಣಿ ಪೊಲೀಸರು ಬಂಧಿಸಿರುವುದು ಸಮಾಧಾನಕರ ಸಂಗತಿ. ಲಭ್ಯ ಮಾಹಿತಿಯ ಪ್ರಕಾರ, 10 ಲಕ್ಷ ರುಪಾಯಿ ಮೌಲ್ಯದ 50 ಲಕ್ಷದಷ್ಟು ಚರಸ್ ಚಾಕೊಲೇಟ್‌ಗಳನ್ನು ಈ ತಂಡದಿಂದ ವಶಪಡಿಸಿಕೊಳ್ಳಲಾಗಿದೆ.
ಶಾಲಾ-ಕಾಲೇಜುಗಳ ಆವರಣ, ಕೈಗಾರಿಕಾ ಪ್ರದೇಶಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈ ಆರೋಪಿಗಳು ಪ್ರತಿ ಚಾಕೊಲೇಟ್‌ಗೆ 100 ರುಪಾಯಿಯಂತೆ ಮಾರಾಟ ಮಾಡುತ್ತಿದ್ದರಂತೆ. ಆಳುಗ ವ್ಯವಸ್ಥೆಯು ಅದೆಷ್ಟೇ ಹದ್ದಿನಕಣ್ಣು ಇರಿಸಿದ್ದರೂ, ಕೆಲವರು ತಮ್ಮ ದುಷ್ಟ ಹಿತಾಸಕ್ತಿಗಳನ್ನು ಹೇಗಾದರೂ ನೆರೆವೇರಿಸಿಕೊಳ್ಳಲೆಂದು, ರಂಗೋಲಿಯ ಕೆಳಗೂ ತೂರಿಕೊಳ್ಳುವಷ್ಟು ಚಾಣಾಕ್ಷತೆಯನ್ನು ಹೇಗೆ ರೂಢಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ನಿದರ್ಶನ ಸಾಕ್ಷಿ. ಯುವಪೀಳಿಗೆಯೇ ದೇಶವೊಂದರ ಆಸ್ತಿ.
ಯುವಜನರ ಆರೋಗ್ಯದ ಜತೆಜತೆಗೆ ಆರ್ಥಿಕ ಸ್ವಾಸ್ಥ್ಯವನ್ನೂ ಹದಗೆಡಿಸಿ ಬಿಟ್ಟರೆ ತಮ್ಮ ಕುಯುಕ್ತಿ ನೆರವೇರಿದಂತೆ ಎಂಬುದು ಇಂಥವರ ಆಶಯ ಮತ್ತು ನಿರೀಕ್ಷೆ ಆಗಿರಲಿಕ್ಕೂ ಸಾಕು. ಶಾಲಾ-ಕಾಲೇಜುಗಳ ಸಮೀಪ ಇಂತಿಷ್ಟು ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು, ಗುಟ್ಕಾ ಮುಂತಾದ ‘ವ್ಯಸನಕಾರಕ’ ವಸ್ತು ಗಳನ್ನು ಮಾರಾಟ ಮಾಡದಂತೆ ಸರಕಾರವು ನಿರ್ಬಂಧ ಹೇರಿರುವುದು ಗೊತ್ತಿರುವ ಸಂಗತಿಯೇ. ಕೆಲ ಹುಕ್ಕಾ ಬಾರ್‌ಗಳನ್ನೂ ಇದೇ ಕಾರಣಕ್ಕೆ ಎತ್ತಂಗಡಿ ಮಾಡಿದ್ದೂ ಇದೆ.
ಇಷ್ಟಾಗಿಯೂ ಯುವಪೀಳಿಗೆಯನ್ನು ಮಾದಕವಸ್ತುಗಳ ವ್ಯಸನದಲ್ಲಿ ಸಿಲುಕಿಸಲು ‘ಕಾಣದ ಕೈಗಳು’ ಇನ್ನಿಲ್ಲದ ಹರಸಾಹಸದಲ್ಲಿ
ತೊಡಗಿವೆ ಎಂಬುದಕ್ಕೆ ಸದರಿ ‘ಗಾಂಜಾ ಚಾಕೊಲೇಟ್’ ಪೂರೈಕೆಯ ನಿದರ್ಶನವೇ ಸಾಕ್ಷಿ. ಕಟ್ಟುನಿಟ್ಟಾದ ಕಾನೂನಿನ ಮತ್ತು ಉಗ್ರಶಿಕ್ಷೆಯ
ಭಯವಿಲ್ಲದಿರುವುದೇ ಇಂಥ ದುಷ್ಟಜಾಲಗಳು ಮತ್ತಷ್ಟು ಗರಿಗೆದರುವುದಕ್ಕೆ ಕಾರಣವಾಗಿರಬಹುದು. ಇಂಥ ಜಾಲಗಳ ಕಬಂಧಬಾಹುಗಳು ಸಾಕಷ್ಟು ವಿಶಾಲ ವ್ಯಾಪ್ತಿಯವರೆಗೆ ಹಬ್ಬಿಕೊಂಡಿರುವ ಸಾಧ್ಯತೆಯೂ ಇರುತ್ತದೆ.
ಹೀಗಾಗಿ, ‘ಗಾಂಜಾ ಚಾಕೊಲೇಟ್’ ಪೂರೈಕೆಯ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಈ ಜಾಲದ ಆಳ-ಅಗಲವನ್ನು ತಡಕಬೇಕಾದ ಅಗತ್ಯವಿದೆ. ರೋಗವು ಕಾಣಿಸಿಕೊಂಡ ನಂತರ ಚಿಕಿತ್ಸೆಗೆ ಧಾವಿಸುವ ಬದಲು, ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಕ್ಷೇಮವಲ್ಲವೇ?