ಮುಂಬಯಿ: ಸಮ್ಮತಿ ನೀಡಿದ್ದರೂ ಅಪ್ರಾಪ್ತ ವಯಸ್ಸಿನ ಪತ್ನಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ (POCSO Case) ಎಂದೇ ಪರಿಗಣಿಸಲಾಗುತ್ತದೆ ಎಂದು ಬಾಂಬೆ ಹೈಕೋರ್ಟ್ (Bombay high court) ತೀರ್ಪು ನೀಡಿದೆ.
ಅಪ್ರಾಪ್ತ ವಯಸ್ಸಿನ ಪತ್ನಿ ತನ್ನ ಪತಿಯ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ದೂರಿನ ವಿಚಾರಣೆ ಮಾಡುವಾಗ ಹೈಕೋರ್ಟ್ ಈ ಅಭಿಪ್ರಾಯ ಪಟ್ಟಿದೆ. ಪತಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದೇ ಹೇಳಲಾಗುವುದು. ಮದುವೆಯಾಗಿದ್ದರೂ ಅಥವಾ ಇಲ್ಲದಿದ್ದರೂ ಇದರಲ್ಲಿ ವ್ಯತ್ಯಾಸವಿಲ್ಲ. ಹೆಂಡತಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವಾಗ ಹೆಂಡತಿಯೊಂದಿಗೆ ಸಮ್ಮತಿಯ ಲೈಂಗಿಕತೆಯು ಕೂಡ ಅತ್ಯಾಚಾರವೆಂದೇ ಕರೆಸಿಕೊಳ್ಳುತ್ತದೆ ಎಂದು ಪೀಠ ಹೇಳಿದೆ.
ಕೆಳ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪೀಠ ಎತ್ತಿಹಿಡಿದಿದೆ. ತನ್ನ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಬಂಧ ನಡೆದಿದೆ ಎಂದು ಸಂತ್ರಸ್ತೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ. ವಾರ್ಧಾ ಜಿಲ್ಲೆಯ ವಿಚಾರಣಾ ನ್ಯಾಯಾಲಯವು POCSO ಕಾಯಿದೆಯಡಿಯಲ್ಲಿ ಯುವಕನನ್ನು ತಪ್ಪಿತಸ್ಥನೆಂದು ಘೋಷಿಸಿತ್ತು. ಈ ಆದೇಶದ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ಬಾಲಕಿಯ ದೂರಿನ ಮೇರೆಗೆ ಪತಿಯನ್ನು 25 ಮೇ 2019ರಂದು ಬಂಧಿಸಲಾಗಿತ್ತು. ಆ ವೇಳೆ ಬಾಲಕಿ 31 ವಾರಗಳ ಗರ್ಭಿಣಿಯಾಗಿದ್ದಳು. ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಯುವಕ ಬಲವಂತವಾಗಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ಮದುವೆ ಭರವಸೆ ನೀಡಿ ಅದನ್ನು ಮುಂದುವರಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಳು.
ಗರ್ಭಿಣಿಯಾದ ನಂತರ, ಸಂತ್ರಸ್ತೆ ತನ್ನನ್ನು ಮದುವೆಯಾಗುವಂತೆ ವ್ಯಕ್ತಿಯನ್ನು ಕೇಳಿದ್ದಳು. ಇದಾದ ನಂತರ ಆತ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದು, ಇಬ್ಬರೂ ಜತೆಯಲ್ಲಿದ್ದರು. ಡಿಎನ್‌ಎ ವರದಿಯು ಜನಿಸಿರುವ ಗಂಡು ಮಗು ಆರೋಪಿ ಮತ್ತು ಸಂತ್ರಸ್ತೆಯದ್ದೇ ಎಂಬುದನ್ನು ದೃಢಪಡಿಸಿದೆ.
ಇದನ್ನೂ ಓದಿ: Karnataka High court: ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯ ಮದರಸ ತೆರವಿಗೆ ಹೈಕೋರ್ಟ್ ಮೊರೆ ಹೋದ ಕೇಂದ್ರ