Friday, 15th November 2024

IPL Auction Prediction: ಪಂತ್‌ ಖರೀದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಿಂದೇಟು!

ಬೆಂಗಳೂರು: 18ನೇ ಆವೃತ್ತಿ ಐಪಿಎಲ್‌(IPL Auction Prediction) ಆಟಗಾರರ ಹರಾಜು ಪ್ರಕ್ರಿಯೆ ನಡೆಯಲು ಇನ್ನು ಕೇವಲ ಒಂದು ವಾರಗಳು ಮಾತ್ರ ಬಾಕಿ ಉಳಿದಿವೆ. ಮೆಗಾ ಹರಾಜು ನ. 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ 5 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌(CSK) ತಂಡ ರಿಷಭ್‌ ಪಂತ್‌(Rishabh Pant) ಅವರನ್ನು ಖರೀದಿ ಮಾಡುವುದು ಅನುಮಾನ ಎನ್ನಲಾಗಿದೆ.

ಈಗಾಗಲೇ ಚೆನ್ನೈ ತಂಡ ನಾಯಕ ಋತುರಾಜ್‌ ಗಾಯಕ್ವಾಡ್(18‌ ಕೋಟಿ ರೂ), ಮತೀಶಾ ಪತಿರಾಣ(13 ಕೋಟಿ ರೈ), ರವೀಂದ್ರ ಜಡೇಜಾ(18 ಕೋಟಿ ರೂ.), ಎಂಎಸ್‌ ಧೋನಿ(4 ಕೋಟಿ ರೂ.) ನೀಡಿ ರಿಟೇನ್‌ ಮಾಡಿಕೊಂಡಿದೆ. ತಂಡದ ಬಳಿ ಉಳಿದಿರುವ ಮೊತ್ತ 55 ಕೋಟಿ ರೂ. ಇದರಲ್ಲಿ ಉದಾಹರಣೆಗೆ ಪಂತ್‌ಗೆ 20 ಕೋಟಿ ನೀಡಿದರೆ, ಉಳಿದ ಆಟಗಾರರ ಖರೀದಿಗೆ ತಂಡಕ್ಕೆ ಹಣದ ಕೊರತೆಯಾಗಲಿದೆ. ಹೀಗಾಗಿ ಪಂತ್‌ ಖರೀದಿ ಬಗ್ಗೆ ಫ್ರಾಂಚೈಸಿ ಸದ್ಯ ತಲೆಕೆಡಿಸಿಕೊಂಡಿಲ್ಲ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಸದ್ಯ 10 ತಂಡಗಳು ಒಟ್ಟಾರೆ 46 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಇದಕ್ಕಾಗಿ 558.5 ಕೋಟಿ ವಿನಿಯೋಗಿಸಿವೆ. ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಒಟ್ಟು 641.5 ಕೋಟಿ ಬಜೆಟ್ ಉಳಿಸಿಕೊಂಡಿವೆ. ಪ್ರತಿ ತಂಡದ ಬಜೆಟ್ ಮಿತಿ 120 ಕೋಟಿ ರೂ. ಆಗಿದೆ. ಎರಡು ದಿನಗಳ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್‌ ನಡೆಸಲಿದೆ.

ಮೆಗಾ ಹರಾಜಿಗೆ ಒಟ್ಟು 1,574 ಕ್ರಿಕೆಟಿಗರು (ಭಾರತದ 1,165 ಮತ್ತು ವಿದೇಶದ 409 ಆಟಗಾರರು) ಮೆಗಾ ಆಕ್ಷನ್‌ಗೆ ಸಾಕ್ಷಿಯಾಗಲಿದ್ದಾರೆ. 320 ಕ್ಯಾಪ್ಡ್ ಪ್ಲೇಯರ್, 1,224 ಅನ್‌ಕ್ಯಾಪ್ಡ್ ಆಟಗಾರರು, ಅಸೋಸಿಯೇಟ್‌ ದೇಶಗಳ 30 ಕ್ರಿಕೆಟಿಗರು ಇದರಲ್ಲಿ ಸೇರಿದ್ದಾರೆ.

ಇದನ್ನೂ ಓದಿ ಬಿಸಿಸಿಐಗೆ ಐಪಿಎಲ್‌ ಅಷ್ಟೊಂದು ಅಗತ್ಯವೇ ?

ಭಾರತೀಯ ಸ್ಟಾರ್‌ ಆಟಗಾರರಾಗಿರುವ ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಮೊಹಮ್ಮದ್‌ ಶಮಿ, ಆರ್‌.ಅಶ್ವಿನ್‌, ಯಜುವೇಂದ್ರ ಚಹಲ್‌, ಮೊಹಮ್ಮದ್ ಸಿರಾಜ್ ಸೇರಿ ಒಟ್ಟು 23 ಆಟಗಾರರು 2 ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪಂಜಾಬ್‌ ಕಿಂಗ್ಸ್‌ ಬಳಿ ಗರಿಷ್ಠ 110.5 ಕೋಟಿ ರೂ. ಮೊತ್ತವಿದೆ. 2ನೇ ಸ್ಥಾನದಲ್ಲಿ ಆರ್‌ಸಿಬಿ ತಂಡವಿದೆ. ಆರ್‌ಸಿಬಿ ಬಳಿ 83 ಕೋಟಿ ರೂ. ಉಳಿಕೆ ಮೊತ್ತವಿದೆ. ಹೀಗಾಗಿ ಪಂತ್‌ ಖರೀದಿಗೆ ಉಭಯ ತಂಡಗಳ ಮಧ್ಯೆ ತೀವ್ರ ಪೈಪೋಟಿ ಕಂಡುಬರುಚ ಸಾಧ್ಯತೆ ಹೆಚ್ಚು. ಸದ್ಯದ ಪರಿಸ್ಥಿತಿ ನೋಡುವಾಗ ಪಂತ್‌ ಅವರು ಪಂಜಾಬ್‌ ತಂಡದ ಪಾಲಾಗುವಂತೆ ಕಾಣುತ್ತಿದೆ.