ರಾಂಚಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಯಾಣಿಸಬೇಕಾಗಿದ್ದ ಹೆಲಿಕಾಪ್ಟರನ್ನು ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನುಮತಿಗಾಗಿ ಕೆಲ ಕಾಲ ತಡೆ ಹಿಡಿದ ಪ್ರಸಂಗ ಜಾರ್ಖಂಡ್ನಲ್ಲಿ ಗೊಡ್ಡಾದಲ್ಲಿ ನಡೆಯಿತು. ಜಾರ್ಖಂಡ್ನ ವಿಧಾನಸಭಾ ಚುನಾವಣೆಗಾಗಿ (Jharkhand assembly election) ತೆರಳಿದ್ದ ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಹಾರಾಟಕ್ಕೆ ಸುಮಾರು 45 ನಿಮಿಷಗಳ ನಂತರ ಅನುಮತಿ ದೊರಕಿದ್ದು, ಅವರ ಪ್ರಯಾಣ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಅನುಮತಿ ನೀಡುವಲ್ಲಿ ವಿಳಂಬ ಮಾಡುವ ಮೂಲಕ ಬೇಕಂತಲೇ ಪ್ರಚಾರಕ್ಕೆ ತಡವಾಗುವಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ಮೇಲೆ ಕಿಡಿ ಕಾರಿರುವ ಕಾಂಗ್ರೆಸ್ ನಾಯಕರು ಪ್ರಚಾರದ ವೇಳಾಪಟ್ಟಿಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಗೊಡ್ಡಾದಿಂದ ಸುಮಾರು 150 ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಗೆ ಅಡ್ಡಿಯಾಗಬಾರದು ಎಂದು ಈ ರೀತಿ ಮಾಡಲಾಗಿದೆ ಎಂದರು.
ಮಹಾಗಾಮಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಮಾತನಾಡಿ ಪ್ರಧಾನಿ, ದಿಯೋಗಢ್ನಲ್ಲಿರುವುದರಿಂದ ರಾಹುಲ್ ಗಾಂಧಿಯವರಿಗೆ ಆ ಪ್ರದೇಶವನ್ನು ದಾಟಲು ಅವಕಾಶ ನೀಡಲಿಲ್ಲ. ಎಲ್ಲರಿಗೂ ಅವರವರ ಪ್ರೋಟೋಕಾಲ್ ಇರುತ್ತದೆ. ಈ ರೀತಿ ಮಾಡುವುದು ಸರಿ ಅಲ್ಲ. ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಆಳಿದೆ. ಆದರೆ ಯಾವತ್ತೂ ಯಾವ ವಿರೋಧ ಪಕ್ಷದ ನಾಯಕನ ಜತೆ ಈ ರೀತಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.
ದಿಯೋಘರ್ ವಿಮಾನ ನಿಲ್ದಾಣದಿಂದ ಸುಮಾರು 80 ಕಿ.ಮೀ ದೂರದಲ್ಲಿ, ಪ್ರಧಾನಿ ಮೋದಿ ಪ್ರಯಾಣಿಸಬೇಕಾಗಿದ್ದ ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿತು. ಇದರಿಂದಾಗಿ ಪ್ರಧಾನಿ ದೆಹಲಿಗೆ ಹಿಂತಿರುಗಲು ವಿಳಂಬವಾಗಲಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ಇಂದು ಸಂಜೆ ರಾಷ್ಟ್ರ ರಾಜಧಾನಿಗೆ ಆಗಮಿಸಲಿದ್ದು, ಅಲ್ಲಿ SAI ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಾರ್ಖಂಡ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಎಲ್ಲಾ ಪಕ್ಷದ ನಾಯಕರು ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಇದನ್ನು ಓದಿ: H D Kumaraswamy: ಚನ್ನಪಟ್ಟಣ ಉಪ ಚುನಾವಣೆ; ಬಿಜೆಪಿ ನಾಯಕರೊಂದಿಗೆ ಎಚ್.ಡಿ. ಕುಮಾರಸ್ವಾಮಿ ಬಿರುಸಿನ ಪ್ರಚಾರ
ರಾಜ್ಯದ 81 ಸ್ಥಾನಗಳ ಪೈಕಿ 43 ಸ್ಥಾನಗಳಿಗೆ ನವೆಂಬರ್ 14 ರಂದು ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ವಿಧಾನಸಭಾ ಚುನಾವಣೆಯು ನವೆಂಬರ್ 20 ರಂದು ನಡೆಯಲಿದೆ. ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಎಣಿಕೆ ನಡೆಯಲಿದೆ.