Saturday, 16th November 2024

Waqf Board: ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲು ವಕ್ಫ್‌ ಬೋರ್ಡ್‌ಗೇನು ಅಧಿಕಾರ? ಪ್ರಶ್ನಿಸಿದ ಹೈಕೋರ್ಟ್‌

Marakumbi case

ಬೆಂಗಳೂರು: ಮುಸ್ಲಿಮರ ವಿವಾಹ ನೋಂದಣಿ (Marriage registration) ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ (Waqf Board) ನೀಡಿರುವ ಕುರಿತು ಸ್ಪಷ್ಟನೆ ನೀಡುವಂತೆ ಹೈಕೋರ್ಟ್‌ (Karnataka High Court) ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ನೀಡಿದುದನ್ನು ಎಲ್ಲಿಯೂ ಕೇಳಿಲ್ಲ ಎಂದು ನುಡಿದಿರುವ ಹೈಕೋರ್ಟ್, ಯಾವ ಕಾನೂನಿನ ಅಧಿಕಾರ ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂಬ ಬಗ್ಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ಕರ್ನಾಟಕ ವಕ್ಫ್‌ ಮಂಡಳಿಗೆ ನೀಡಿ ರಾಜ್ಯ ಅಲ್ಪಸಂಖ್ಯಾತ, ವಕ್ಫ್‌ ಮತ್ತು ಹಜ್ ಇಲಾಖೆಯು 2023ರ ಸೆ.30ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಬೆಂಗಳೂರಿನ ಆಲಂಪಾಷಾ ಎಂಬವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಒಪ್ಪದ ನ್ಯಾಯಪೀಠವು ವಿಚಾರಣೆಯನ್ನು ನ.21ಕ್ಕೆ ಮುಂದೂಡಿತು.

ಮುಂದಿನ ವಿಚಾರಣೆ ವೇಳೆಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಹಾಗೆಯೇ, ವಕ್ಫ್‌ ಕಾಯ್ದೆಯಡಿ ಎಲ್ಲಿ ಮಂಡಳಿಗೆ ಮದುವೆ ನೋಂದಣಿ ಪ್ರಮಾಣಪತ್ರ ವಿತರಿಸುವಂತಹ ಅಧಿಕಾರವನ್ನು ನೀಡಬಹುದು ಎಂಬುದನ್ನು ಸಾಬೀತುಪಡಿಸುವಂತೆ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತು. ಸರ್ಕಾರವು 2023ರ ಸೆ.30ರಂದು ಹೊರಡಿಸಿರುವ ಆದೇಶವು ವಕ್ಫ್‌ ಕಾಯ್ದೆ 1995ರ ನಿಯಮಗಳಿಗೆ ವಿರುದ್ದವಾಗಿದೆ. ಹಾಗಾಗಿ, ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: Karnataka High court: ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯ ಮದರಸ ತೆರವಿಗೆ ಹೈಕೋರ್ಟ್‌ ಮೊರೆ ಹೋದ ಕೇಂದ್ರ