Saturday, 16th November 2024

IPL 2025 Auction: ಐಪಿಎಲ್‌ ಹರಾಜಿನಲ್ಲಿ ರಾಜ್ಯದ 24 ಆಟಗಾರರು ಭಾಗಿ

ಮುಂಬಯಿ: ಬಹುನಿರೀಕ್ಷಿತ 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ(IPL 2025 Auction) ಪಾಲ್ಗೊಳ್ಳಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ(BCCI) ಈಗಾಗಲೇ ಪ್ರಕಟಿಸಿದೆ. ಒಟ್ಟು 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಅಳೆದು ತೂಗಿ ಬಿಸಿಸಿಐ ಅಂತಿಮವಾಗಿ 574 ಆಟಗಾರರನ್ನು ಫೈನಲ್‌ ಮಾಡಿದೆ. 366 ಭಾರತೀಯರು ಹಾಗೂ 208 ವಿದೇಶಿಗರು ಸೇರಿದ್ದಾರೆ. ರಾಜ್ಯದ 24 ಆಟಗಾರರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ರಾಜ್ಯದ ಆಟಗಾರರು

ಇದೇ ತಿಂಗಳ 24 ಮತ್ತು 25ರಂದು ಜೆಡ್ಡಾದಲ್ಲಿ ನಡೆಯುವ ಐಪಿಎಲ್‌ ಕ್ರಿಕೆಟಿಗರ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇವರೆಂದರೆ, ಕೆ.ಎಲ್‌.ರಾಹುಲ್‌, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ಮಯಾಂಕ್‌ ಅಗರ್‌ವಾಲ್‌, ಪ್ರಸಿದ್ಧ್‌ ಕೃಷ್ಣ, ಲುವ್ನಿತ್‌ ಸಿಸೋಡಿಯಾ, ಆರ್‌.ಸ್ಮರಣ್‌, ಎಲ್‌.ಆರ್‌.ಚೇತನ್‌, ಮನೋಜ್‌ ಭಾಂಡಗೆ, ಅಭಿಲಾಶ್‌ ಶೆಟ್ಟಿ, ವೈಶಾಖ್‌ ವಿಜಯ್‌ಕುಮಾರ್‌, ಪ್ರವೀಣ್‌ ದುಬೆ, ಮನ್ವಂತ್‌ ಕುಮಾರ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಹಾರ್ದಿಕ್‌ ರಾಜ್‌, ಅಭಿನವ್‌ ಮಹೋಹರ್‌, ಬಿ.ಆರ್‌.ಶರತ್‌. ಕೃಷ್ಣನ್‌ ಶ್ರೀಜಿತ್‌, ವಿದ್ವತ್‌ ಕಾವೇರಪ್ಪ, ದೀಪಕ್‌ ದೇವಾಡಿಗ, ವಿದ್ಯಾಧರ್‌ ಪಾಟೀಲ್‌, ಶುಭಾಂಗ್‌ ಹೆಗಡೆ, ಸಮರ್ಥ್‌ ನಾಗರಾಜ್‌.

ಇದನ್ನೂ ಓದಿ Sanju Samson: ಸಂಜು ಬಾರಿಸಿದ ಸತತ 5 ಸಿಕ್ಸರ್‌ ವಿಡಿಯೊ ಇಲ್ಲಿದೆ

ಈ ಬಾರಿ ಹರಾಜಿನಲ್ಲಿ ಅತ್ಯಂತ ಗಮನಸೆಳೆದ ಆಯ್ಕೆ ಎಂದರೆ, ಬಿಹಾರದ ರಣಜಿ ಆಟಗಾರ, 14 ವರ್ಷದ ವೈಭವ್‌ ಸೂರ್ಯವಂಶಿ. ಪಟ್ಟಿಯಲ್ಲಿ ಕಾಣಿಸಿಕೊಂಡ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇವರನ್ನು ಯಾವ ತಂಡ ಖರೀದಿ ಮಾಡಲಿದೆ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಇವರನ್ನು ಯಾವುದೇ ತಂಡದ ಖರೀದಿ ಮಾಡಿದರೂ ಐಪಿಎಲ್‌ ಆಡಿದ ಅತಿ ಕಿರಿಯ ಆಟಗಾರ ಎಣಿಸಿಕೊಳ್ಳಲಿದ್ದಾರೆ.

ಇದುವರೆಗೂ ಯಾವುದೇ ಟಿ20 ಲೀಗ್‌ ಆಡದ ಇಂಗ್ಲೆಂಡ್‌ನ 42 ವರ್ಷದ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಕೂಡ ಹರಾಜು ಪಟ್ಟಿಯಲ್ಲಿದ್ದಾರೆ. ಆ್ಯಂಡರ್ಸನ್‌ ಪಟ್ಟಿಯಲ್ಲಿರುವ ಅತಿ ಹಿರಿಯ ಆಟಗಾರ. ಇದೇ ವರ್ಷ ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು.

81 ಆಟಗಾರರು ಗರಿಷ್ಠ 2 ಕೋಟಿ ರೂ. ಮೂಲ ಬೆಲೆ ಹಾಗೂ 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಹರಾಜಿನಲ್ಲಿ ಭಾರತದ 48 ಹಾಗೂ ವಿದೇಶದ 193 ಕ್ಯಾಪ್ಡ್ ಆಟಗಾರರು; ಭಾರತದ 318 ಹಾಗೂ ವಿದೇಶದ 12 ಅನ್‌ಕ್ಯಾಪ್ಡ್ ಆಟಗಾರರು; ಮೂವರು ಅಸೋಸಿಯೇಟ್‌ ಆಟಗಾರರಿದ್ದಾರೆ.