Saturday, 16th November 2024

IPL auction 2025: ಐಪಿಎಲ್​ನಿಂದ ಹಿಂದೆ ಸರಿದ ಸ್ಟಾರ್ ಆಟಗಾರರ ಪಟ್ಟಿ ಹೀಗಿದೆ

ಮುಂಬಯಿ: ನವೆಂಬರ್‌ 24 ಮತ್ತು 25 ರಂದು ನಡೆಯುವ ಐಪಿಎಲ್‌ ಆಟಗಾರರ ಮೆಗಾ ಹರಾಜಿಗೆ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿತ್ತು. ಒಟ್ಟು 547 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಹರಾಜು ಪ್ರಕ್ರಿಯೆಯಿಂದ ಹೊರಗುಳಿದ ಐವರು ಸ್ಟಾರ್‌ ಆಟಗಾರರ ವಿವರ ಹೀಗಿದೆ.

ಶಿಖರ್‌ ಧವನ್‌

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೀಮ್‌ ಇಂಡಿಯಾದ ಎಡಗೈ ಬ್ಯಾಟರ್‌ ಶಿಖರ್‌ ಧವನ್‌ ಅವರು ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರು ಹರಾಜು ಪ್ರಕ್ರಿಯಿಂದ ದೂರ ಉಳಿದಿದ್ದಾರೆ. ಐಪಿಎಲ್‌ನಲ್ಲಿ ಧವನ್‌ 222 ಪಂದ್ಯಗಳನ್ನಾಡಿ 6769 ರನ್‌ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿದ 2ನೇ ಬ್ಯಾಟರ್‌ ಎಂಬ ಖ್ಯಾತಿ ಹೊಂದಿದ್ದಾರೆ.

ಬೆನ್‌ ಸ್ಟೋಕ್ಸ್‌

ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಕೂಡ ಈ ಬಾರಿ ಐಪಿಎಲ್‌ ಹರಾಜಿಗೆ ತಮ್ಮ ಹೆಸರು ನೊಂದಾಯಿಸಿಲ್ಲ. ಕಳೆದ ಕೆಲ ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಳೆದ 2 ಆವೃತ್ತಿಯಲ್ಲಿ ಚೆನ್ನೈ ತಂಡದ ಸದಸ್ಯನಾಗಿದ್ದ ಸ್ಟೋಕ್ಸ್‌ ಗಾಯದಿಂದ ಒಂದೆಡರು ಪಂದ್ಯ ಆಡಿ ತವರಿಗೆ ಮರಳಿದ್ದರು. 2022 ರ T20 ವಿಶ್ವಕಪ್ ಫೈನಲ್‌ ಬಳಿಕ ಇಂಗ್ಲೆಂಡ್‌ ಟಿ20 ತಂಡದಲ್ಲಿ ಆಡಿಲ್ಲ. ಕೇವಲ ಟೆಸ್ಟ್‌ ಮಾತ್ರ ಆಡುತ್ತಿದ್ದಾರೆ.

ಕ್ಯಾಮರೂನ್‌ ಗ್ರೀನ್‌

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್‌ ಗ್ರೀನ್‌ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆಂದು ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ ವೇಳೆ ಅವರು ಮತ್ತೆ ಮಿನಿ ಹರಾಜಿಗೆ ಪುನರಾಗಮನ ಮಾಡಬಹುದು.

ಜೋಫ್ರ ಆರ್ಚರ್‌

ಇಂಗ್ಲೆಂಡ್‌ ತಂಡದ ಪ್ರಧಾನ ವೇಗಿ ಜೋಫ್ರಾ ಆರ್ಚರ್ ಕೂಡ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಆರ್ಚರ್‌ ಪದೇಪದೆ ಗಾಯಕ್ಕೆ ತುತ್ತಾಗಿ. ಒಂದೆರಡು ಪಂದ್ಯವನ್ನಾಡಿ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಸ್‌ ಹಿಂದಿರುಗಿದ್ದರು. ಫಿಟ್​ನೆಸ್ ಸಮಸ್ಯೆಯನ್ನು ಮುಂದಿಟ್ಟು ಈ ಬಾರಿ ಐಪಿಎಲ್ ಆಡದಿರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ IPL 2025 Auction: ನ. 24, 25ರಂದು ಐಪಿಎಲ್ ಮೆಗಾ ಹರಾಜು?

ಜೇಸನ್ ರಾಯ್

ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಇಂಗ್ಲೆಂಡ್‌ ತಂಡದ ಹಿರಿಯ ಬ್ಯಾಟರ್‌ ಈ ಬಾರಿಯ ಮೆಗಾ ಹರಾಜಿನಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ರಾಯ್‌ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ವೈಯುಕ್ತಿಕ ಕಾರಣ ನೀಡಿ ಟೂರ್ನಿಗೆ ಅಲಭ್ಯರಾಗಿದ್ದರು.