ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು(IPL 2025 Auction) ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. 24 ಮತ್ತು 25ರಂದು ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ನಡೆಯಲಿದೆ. ಹರಾಜು ಪ್ರಕ್ರಿಯೆಯನ್ನು ಮುಂಬೈನ ಮಲ್ಲಿಕಾ ಸಾಗರ್ ನಡೆಸಿಕೊಡಲಿದ್ದಾರೆ. ಕಣದಲ್ಲಿ 574 ಮಂದಿ ಆಟಗಾರರಿದ್ದಾರೆ. 366 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಈ ಬಾರಿ ಯಾವ ಆಟಗಾರ ದುಬಾರಿ ಮೊತ್ತಕ್ಕೆ ಸೇಲ್ ಆಗಬಹುದೆಂಬ ಕುತೂಹಲ ಅಭಿಮಾನಿಗಳದ್ದು. ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಪಡೆದ(Most Expensive Players In IPL) ಆಟಗಾರರ ಪಟ್ಟಿ ಹೀಗಿದೆ.
ಹರಾಜಿನಲ್ಲಿ ದುಬಾರಿ ಮೊತ್ತ ಪಡೆದ ದಾಖಲೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದೆ. 2024ರ ಐಪಿಎಲ್ ಹರಾಜಿನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ( KKR ) ತಂಡ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಇದು ಐಪಿಎಲ್ನಲ್ಲಿ ಆಟಗಾರನಿಗೆ ಸಂದಾಯವಾದ ಅತ್ಯಧಿಕ ಬೆಲೆಯಾಗಿದೆ. ಈ ಬಾರಿಯೂ ಅವರು ಹರಾಜಿನಲ್ಲಿ ಕಾಣಿಸಿಕೊಂಡಿದ್ದು ಎಷ್ಟು ಮೊತ್ತ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ ಬಿಸಿಸಿಐಗೆ ಐಪಿಎಲ್ ಅಷ್ಟೊಂದು ಅಗತ್ಯವೇ ?
ಸನ್ ರೈಸರ್ಸ್ ಹೈದರಾಬಾದ್ ( SRH ) ತಂಡದ ಆಟಗಾರ ಆಸೀಸ್ನ ಪ್ಯಾಟ್ ಕಮಿನ್ಸ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಹಣ ಪಡೆದ ಆಟಗಾರ. ಕಳೆದ ಆವೃತ್ತಿಯಲ್ಲಿ ಅವರನ್ನು 20.50 ಕೋಟಿ ರೂ.ಗೆ ಹೈದರಾಬಾದ್ ತಂಡ ಖರೀದಿ ಮಾಡಿತ್ತು. ಮೂರನೇ ಸ್ಥಾನ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ಗೆ. 2023 ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಕರ್ರನ್ ಅವರನ್ನು 18.5 ಕೋಟಿ ರೂ.ಗೆ ಖರೀದಿ ಮಾಡಿತು.
ಕರನ್ ನಂತರದಲ್ಲಿ ದುಬಾರಿ ಮೊತ್ತ ಪಡೆದ ಆಟಗಾರರೆಂದರೆ, ಕ್ಯಾಮರೂನ್ ಗ್ರೀನ್- 17.50 ಕೋಟಿ ರೂ. ( RCB, 2023 ), ಬೆನ್ ಸ್ಟೋಕ್ಸ್ 16.25 ಕೋಟಿ ರೂ. ( CSK 2023 ), ಕ್ರಿಸ್ ಮೋರಿಸ್ 16.25 ಕೋಟಿ ರೂ. ( ರಾಜಸ್ಥಾನ್ ರಾಯಲ್ಸ್, 2021 ), ಯುವರಾಜ್ ಸಿಂಗ್ 16 ಕೋಟಿ ರೂ. ( ದೆಹಲಿ ಕ್ಯಾಪಿಟಲ್ಸ್, 2015 ), ನಿಕೋಲಸ್ ಪೂರನ್ 16 ಕೋಟಿ ರೂ. ( ಲಖನೌ, 2023 ), ಇಶಾನ್ ಕಿಶನ್ 15.25 ಕೋಟಿ ರೂ. ( ಮುಂಬೈ ಇಂಡಿಯನ್ಸ್, 2022).